ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಖರೀದಿ ಕೇಂದ್ರಕ್ಕೆ ಬಾರದ ರೈತರು

Mainashree
Updated On : 24 Dec 2013, 10:48 am

ಕೊಟ್ಟೂರು: ರೈತರ ಒತ್ತಾಸೆ ಮೇರೆಗೆ ಮೆಕ್ಕೆಜೋಳ ಖರೀದಿ ಕೇಂದ್ರ ಕೊಟ್ಟೂರಿನಲ್ಲಿ ಆರಂಭಗೊಂಡು 15 ದಿನಗಳಾದರೂ ರೈತರೇ ಇತ್ತ ತಲೆ ಹಾಕದೇ ಹೆಚ್ಚಿನ ಬೆಲೆ ಸಿಗುವ ಹಾದಿ ಹುಡುಕಿಕೊಳ್ಳತೊಡಗಿದ್ದಾರೆ. 'ನೆಚ್ಚಿದ ಎಮ್ಮೆ ಕೋಣನ ಈಯಿತು' ಎಂಬ ಆಡು ಮಾತಿನಂತಾಗಿದೆ ಇಲ್ಲಿನ ರೈತರ ಪಾಡು. ಹೀಗಾಗಿ ಮೆಕ್ಕೆಜೋಳ ಖರೀದಿ ಕೇಂದ್ರ ಕೆಲಸವಿಲ್ಲದೇ ಭಣಗುಡುತ್ತಿದೆ.
ಕೊಟ್ಟೂರು ಭಾಗದಲ್ಲಿ ಮೆಕ್ಕೆಜೋಳ ರೈತರ ಅಚ್ಚುಮೆಚ್ಚಿನ ಬೆಳೆಯಾಗಿ ಸುಮಾರು ವರ್ಷಗಳಿಂದ ಚಾಲ್ತಿಪಡೆದುಕೊಂಡಿದೆ. ನೀರಾವರಿ ರಹಿತ ಕಪ್ಪು ಮಣ್ಣಿನ ಭೂಮಿಯಲ್ಲಿ ರೈತರು ಈ ಮೆಕ್ಕೆಜೋಳದ ಬೆಳೆಯ ಫಸಲನ್ನು ಒಬ್ಬರಿಗಿಂತ ಒಬ್ಬರು ಹೆಚ್ಚು ಬೆಳೆದು ಅತ್ಯಧಿಕ ಬೆಲೆ ಕಾಣುವ ತವಕ ವ್ಯಕ್ತಪಡಿಸುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಮೆಕ್ಕೆಜೋಳ ಬೆಳೆ ಕುಸಿತ ಕಾಣತೊಡಗಿದೆ. ಸರ್ಕಾರದ ಮೆಕ್ಕೆಜೋಳ ಖರೀದಿ ಕೇಂದ್ರದಲ್ಲಿ ರೈತರು ತಮ್ಮ ಫಸಲು ಮಾರಾಟ ಮಾಡಲು ಮುಂದಾದರೆ ಹಲವು ಬಗೆಯ ನಿಯಮಾವಳಿಗಳನ್ನು ಅನುಸರಿಸಬೇಕಿರುವುದು ಕಡ್ಡಾಯವಾಗಿದೆ. ಇದು ರೈತರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದ್ದು ಇದರ ಸಹವಾಸವೇ ಸಾಕು ಎಂದು ಖರೀದಿ ಕೇಂದ್ರದಿಂದ ದೂರ ಹೋಗುತ್ತಿದ್ದಾರೆ. ಖರೀದಿ ಕೇಂದ್ರಕ್ಕೆ ಮೆಕ್ಕೆಜೋಳ ಮಾರಿದರೂ ಸಲೀಸಾಗಿ ರೈತರ ಜೇಬಿಗೆ ಹಣ ದೊರಕುತ್ತಿಲ್ಲವಾಗಿದೆ. ಇದು ರೈತ ಸಮೂಹದ ಬಹುದೊಡ್ಡ ವೇದನೆಯಾಗಿದೆ. ಮಾಲು ಮಾರಿದ ತಕ್ಷಣ ಹಣ ದೊರಕಬೇಕು, ಈ ಕಾರಣಕ್ಕಾಗಿಯೇ ನಾವು ಕಷ್ಟಪಟ್ಟು ದುಡಿದ ಧಾನ್ಯವನ್ನು ಮಾರಾಟ ಮಾಡುತ್ತೇವೆ. ಮಾರಾಟ ಮಾಡಿದರೂ ಹಣ ದೊರಕದಿದ್ದರೆ ಯಾಕಾದರೂ ಮೆಕ್ಕೆಜೋಳ ಖರೀದಿ ಕೇಂದ್ರಕ್ಕೆ ಹೋಗಬೇಕು ಎಂಬ ರೈತರ ಸಹಜ ಪ್ರಶ್ನೆಗೆ ಯಾರಿಂದಲೂ ಉತ್ತರ ಸಿಗದಂತಾಗಿದೆ.
ಕಡ್ಡಾಯ: ಖರೀದಿ ಕೇಂದ್ರಕ್ಕೆ ರೈತರು ತರುವ ಮೆಕ್ಕೆಜೋಳದ ತೇವಾಂಶ ಶೇಕಡಾ 14ರಷ್ಟು ಇರಬೇಕು. ಶೇಕಡಾ 3ರಷ್ಟು ಹಾನಿಗೊಂಡ ಕಾಳುಗಳು, ಶೇಕಡಾ 1.5ರಷ್ಟು ಸಂಕುಚಿತ ಮತ್ತು ಹುಳುಕೊರತೆ ಕಾಳುಗಳು ಶೇಕಡಾ 4 ರಷ್ಟು, ಬಣ್ಣಬದಲಿಸಿದ ಕಾಳುಗಳು ಶೇಕಡಾ 4.5ರಷ್ಟು ಇರಬೇಕು ಎಂಬುದು ಸರ್ಕಾರ ವಿಧಿಸಿದ ಪ್ರಮುಖ ನಿಯಮ. 50 ಕೆ.ಜಿ. ತೂಕದ ಹೊಸ ಚೀಲಗಳಲ್ಲಿಯೇ ಮೆಕ್ಕೆಜೋಳವನ್ನು ತರಬೇಕು. ಒಂದು ಚೀಲ ಖರೀದಿಸಲು ರು. 15 ಬೇಕು, ಆದರೆ ಮಾರಾಟವಾದ ನಂತರ ಚೀಲ ಒಂದಕ್ಕೆ ಖರೀದಿ ಕೇಂದ್ರ ರು. 10 ಮಾತ್ರ ರೈತರಿಗೆ ನೀಡುವುದು ನಿಯಮ. ಮಾರಾಟ ಮಾಡುವ ರೈತರು ಪಹಣಿ, ತಮ್ಮ ಬ್ಯಾಂಕ್ ಖಾತೆ ವಿವರ ನೀಡಬೇಕು. ಮೆಕ್ಕೆಜೋಳ ಮಾರಾಟವಾದ ತಿಂಗಳ ನಂತರ ಖರೀದಿ ಕೇಂದ್ರ ನೇರವಾಗಿ ರೈತರ ಖಾತೆಗೆ ಹಣವನ್ನು ಸಂದಾಯ ಮಾಡುತ್ತದೆ. ಈ ಎಲ್ಲ ನಿಯಮಗಳು ರೈತರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿವೆ.
ಗೋಳು: ರೈತರು ಪೂರ್ಣ ಪ್ರಮಾಣದ ಮೆಕ್ಕೆಜೋಳದ ಕಾಳುಗಳನ್ನು ಮಾರಾಟ ಮಾಡಲು ಮುಂದಾದರೂ ಖರೀದಿ ಕೇಂದ್ರದಲ್ಲಿ ಕೇವಲ ಗುಣಮಟ್ಟದ ಉತ್ಪನ್ನ ಖರೀದಿಸಲಾಗುತ್ತಿದೆ. ಕಡಿಮೆ ಗುಣಮಟ್ಟ ಬೆಳೆದ ರೈತರಿಗೆ ಸರ್ಕಾರ ಘೋಷಿಸಿದ ಬೆಂಬಲ ಬೆಲೆ ಖಂಡಿತಾ ದೊರಕಲಾರದು, ಹೀಗಾಗಿ ಖರೀದಿ ಕೇಂದ್ರ ಹೆಸರಿಗಷ್ಟೇ ರೈತರ ಕೇಂದ್ರ ಎಂಬಂತಾಗಿದ್ದು ಬೇರೆಡೆ ಮಾರಾಟ ಮಾಡುವುದು ಸೂಕ್ತ ಎಂಬ ನಿರ್ಧಾರಕ್ಕೆ ಬಂದು ಈ ನಿಟ್ಟಿನತ್ತ ಮುಂದಾಗಿದ್ದಾರೆ.
8 ರೈತರದ್ದು ಓಕೆ: ಕೊಟ್ಟೂರು ಕೇಂದ್ರದಲ್ಲಿ ಈವರೆಗೂ ಕೇವಲ 18 ರೈತರು ಪ್ರದರ್ಶಿಸಿದ ಮೆಕ್ಕೆಜೋಳದ ಉತ್ಪನ್ನದ ಪರೀಕ್ಷೆಯಲ್ಲಿ 8 ರೈತರ ಉತ್ಪನ್ನ ಒಪ್ಪಿಗೆಯಾಗಿವೆ. ಇದನ್ನು ಬಿಟ್ಟು ಬೇರೆ ಯಾವ ರೈತರು ಬೆಳೆದ ಮೆಕ್ಕೆಜೋಳ ಉತ್ಪನ್ನ ಬೇರೆಡೆ ಮಾರಾಟವಾಗುತ್ತಿವೆ. ಇಲ್ಲಿಯ ಖರೀದಿ ಕೇಂದ್ರದ ಅಧಿಕಾರಿಗಳು ಕೇವಲ ಕಚೇರಿ ತೆರೆದು ಕುಳಿತುಕೊಳ್ಳಬೇಕಷ್ಟೇ. ಇದುವರೆಗೆ 120 ಕ್ವಿಂಟಲ್‌ನಷ್ಟು ಮೆಕ್ಕೆಜೋಳ ಖರೀದಿಯಾಗಿದೆ ಎಂಬ ದಾಖಲಾತಿಗಳನ್ನು ಇಲ್ಲಿನ ಅಧಿಕಾರಿಗಳು ತೋರಿಸುತ್ತಾರೆಂದರೆ ಖರೀದಿ ಕೇಂದ್ರದ ವಹಿವಾಟಿನ ಸ್ಪಷ್ಟ ಚಿತ್ರಣದ ಮಾಹಿತಿ ಲಭ್ಯವಾಗುತ್ತದೆ.

ಜಿ. ಸೋಮಶೇಖರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement