ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಶ್ರೀಗಳ ಮೆರವಣಿಗೆ
ಕನ್ನಡಪ್ರಭ ವಾರ್ತೆ, ಹಗರಿಬೊಮ್ಮನಹಳ್ಳಿ, ಡಿ. 23
ಸಮಗ್ರ ನೀರಾವರಿ ಯೋಜನೆಗಳ ಜಾರಿಗೆ ಒತ್ತಾಯಿಸಿ ಮಠಾಧೀಶರ ಧರ್ಮ ಪರಿಷತ್ತಿನ ಸಹಯೋಗದೊಂದಿಗೆ ತಾಲೂಕಾ ಸಮಗ್ರ ನೀರಾವರಿ ಹೋರಾಟ ಸಮಿತಿ ಸೋಮವಾರ ಮಧ್ಯಾಹ್ನ ಹಗರಿಬೊಮ್ಮನಹಳ್ಳಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿತು.
ಬಳಿಕ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಧರಣಿ ನಡೆಸಿತು. ಸಮಿತಿಯ ಕರೆಯ ಮೇರೆಗೆ ನೂರಕ್ಕೂ ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದ ರೈತರು ಪಟ್ಟಣದ ರಾಮನಗರದ ಈಶ್ವರ ದೇವಸ್ಥಾನದ ಆವರಣದಿಂದ ಮಾಲ್ವಿ ಡ್ಯಾಂಗೆ ನೀರು ಬೇಕೇ ಬೇಕು. ತುಂಗಭದ್ರಾ ಸದ್ಭಳಕೆ ಮಾಡಿಕೊಂಡು ತಾಲೂಕಿನ ರೈತರನ್ನು ಕಾಪಾಡಿ. ಅಂರ್ತಜಲ ಹೆಚ್ಚಿಸಿ ಎಂಬ ಘೋಷಣೆಗಳನ್ನು ಕೂಗಿದರು.
ಅಲ್ಲದೆ, ರಾಜ್ಯ ಹೆದ್ದಾರಿ ಮೇಲೆ ಕುಳಿತು ಪ್ರತಿಭಟಿಸಿ ನಂತರ ಅಲ್ಲಿಂದ ನೇರವಾಗಿ ತಾಲೂಕು ಕಚೇರಿ ಆವರಣದ ಶ್ರೀ ಹಗರಿ ಅಂಜನೇಯ ಸ್ವಾಮಿ ಬಯಲು ರಂಗ ಮಂದಿರದಲ್ಲಿ ಆಯೋಜಿಸಲಾಗಿದ್ದ ಧರಣಿ ಸತ್ಯಾಗ್ರಹದ ವೇದಿಕೆಯಲ್ಲಿ ಸಮಾವೇಶಗೊಂಡರು.
ಮಠಾಧೀಶರ ಧರ್ಮ ಪರಿಷತ್ತಿನ ನಂದಿಪುರದ ಮಹೇಶ್ವರಸ್ವಾಮಿ, ಹಳೇಹಗರಿಬೊಮ್ಮನಹಳ್ಳಿ ಹಾಲಸ್ವಾಮಿಮಠದ ಹಾಲಶಂಕರಸ್ವಾಮಿ, ಮರಿಯಮ್ಮನಹಳ್ಳಿ ಗುರುಪಾದದೇವರ ಮಠದ ಮಲ್ಲಿಕಾರ್ಜುನಶ್ರೀ, ಹನಸಿ ಶಂಕರಲಿಂಗಸ್ವಾಮಿ, ಕೊಟ್ಟೂರು ಚಾನುಕೋಟಿ ಮಠದ ಸಿದ್ಧಲಿಂಗಸ್ವಾಮಿ, ಬಳ್ಳಾರಿ ಕಲ್ಯಾಣಸ್ವಾಮಿ, ಪ್ರಶಾಂತ ಶಿವಾಚಾರ್ಯರು, ಮಾನಿಹಳ್ಳಿಶ್ರೀ, ಬೆಣ್ಣಿಹಳ್ಳಿ ಸ್ವಾಮಿಗಳು ಮೆರವಣಿಗೆಯಲ್ಲಿದ್ದರು.
ರೈತ ಮುಖಂಡರಾದ ಅಂಗಡಿ ಗವಿಸಿದ್ಧಪ್ಪ, ಬನ್ನಿಗೋಳ ವೆಂಕಣ್ಣ, ಹೋರಾಟ ಸಮಿತಿ ಸಂಚಾಲಕ ಎ. ಅಡಿವೆಪ್ಪ, ರಾಜ್ಯ ರೈತ ಸಂಘದ ಮಹೇಶ್ವರಸ್ವಾಮಿ, ಶರಣಪ್ಪ, ಸಿದ್ದರೆಡ್ಡಿ, ಮಾಲ್ವಿ ಕೊಂಬಳಿ ಹುಲುಗಪ್ಪ, ಕರವೇ ಅಧ್ಯಕ್ಷ ಸಂದೀಪ್, ಕೆಕೆಬಿಎಂ ಮಂಜುನಾಥಯ್ಯ ಇತರರು ಮೆರವಣಿಗೆ ನೇತೃತ್ವ ವಹಿಸಿದ್ದರು.