ಮಹಿಳೆಯರ ಹಕ್ಕು ರಕ್ಷಿಸಲು ಆಗ್ರಹಿಸಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 23
ದುಡಿಯುವ ಮಹಿಳೆಯರ ಮೂಲಭೂತ ಹಕ್ಕುಗಳನ್ನು ಕಾಪಾಡಬೇಕು. ಅವರಿಗೆ ಕೆಲಸದ ಮತ್ತು ಸಾಮಾಜಿಕ ಭದ್ರತೆ ಕಲ್ಪಿಸುವಂತೆ ಆಗ್ರಹಿಸಿ ಸೆಂಟರ್ ಆಫ್ ಟ್ರೇಡ್ ಯುನಿಯನ್ (ಸಿಐಟಿಯು) ನೇತೃತ್ವದಲ್ಲಿ ಮಹಿಳೆಯರು ಪ್ರತಿಭಟನೆ ನಡೆಸಿದರು.
ಎಲ್ಲ ವಿಭಾಗಗಳಲ್ಲಿ, ಕ್ಷೇತ್ರಗಳಲ್ಲಿ ದುಡಿಯುತ್ತಿರುವ ಮಹಿಳೆಯರಿಗೆ ರು. 10 ಸಾವಿರ ಕನಿಷ್ಠ ಕೂಲಿ ಜಾರಿ ಮಾಡಬೇಕು. 1976ರ ಸಮಾನ ವೇತನ ಕಾನೂನಿನ ಪ್ರಕಾರ ಸಮಾನ ರೀತಿಯ ಕೆಲಸಗಳಿಗೆ ಪುರುಷ ಮತ್ತು ಮಹಿಳೆಯರಿಬ್ಬರಿಗೂ ಸಮಾನ ವೇತನ ನೀಡಬೇಕು. ಬಡ್ತಿ, ತರಬೇತಿ ಮತ್ತು ವರ್ಗಾವಣೆಗಳಲ್ಲಿ ತಾರತಮ್ಯ ಮಾಡಬಾರದು. 1961ರ ಹೆರಿಗೆ ಭತ್ಯೆ ಕಾಯ್ದೆಯಂತೆ ಎಲ್ಲ ವಿಭಾಗದ ದುಡಿಯುವ ಮಹಿಳೆಯರಿಗೆ 6 ತಿಂಗಳ ಹೆರಿಗೆ ರಜೆ ನೀಡಬೇಕು. ಗರ್ಭಪಾತ, ಗರ್ಭಿಣಿಯರಿಗೆ ಉಂಟಾಗುವ ಅನಾರೋಗ್ಯ, ಹೆರಿಗೆ ಅವಧಿ ಮುನ್ನ ಪ್ರಸವ ಮತ್ತು ಮಗುವಿಗೆ 15 ತಿಂಗಳು ಆಗುವವರೆಗೆ ಕೆಲಸದ ಅವಧಿಯಲ್ಲಿ ಅವಕಾಶ ಕೊಡಬೇಕು. ಇದು ಎಲ್ಲಡೆ ಜಾರಿಯಾಗಬೇಕು ಎಂದು ಒತ್ತಾಯಿಸಿ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.
ಅಂಗನವಾಡಿ ಸಹಾಯಕಿಯರು, ಬಿಸಿಯೂಟ ಮತ್ತು ಆಶಾ ನೌಕರರಿಗೆ, ಗುತ್ತಿಗೆ ಪದ್ಧತಿಯಲ್ಲಿ ದುಡಿಯುವ ಎಲ್ಲ ವಿಭಾಗಗಳ ಮಹಿಳೆಯರಿಗೆ ರಾಜ್ಯದಲ್ಲಿ ಹೆರಿಗೆ ಭತ್ಯೆ ಜಾರಿಯಾಗುತ್ತಿಲ್ಲ. ದುಡಿವ ಮಹಿಳೆಯರೆಲ್ಲರಿಗೂ ಆರು ತಿಂಗಳ ಸಂಬಳ ಸಹಿತ ಹೆರಿಗೆ ರಜೆ ನೀಡಬೇಕು. ಲೈಂಗಿಕ ಕಿರುಕುಳ, ದೌರ್ಜನ್ಯಗಳನ್ನು ತಡೆಗಟ್ಟಬೇಕು ಮತ್ತು ದುಡಿವ ಮಹಿಳೆಯರಿಗೆ ಸಂಬಂಧಿಸಿದ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸುವಂತೆ ಸಿಐಟಿಯು ಆಗ್ರಹಿಸಿದೆ.
ಈ ಸಂದರ್ಭದಲ್ಲಿ ಮಹಿಳಾ ಮುಖಂಡರಾದ ಸುಜಾತಾ, ಸರಸ್ವತಿ, ನಿಶ್ಚಲ ಸೇರಿದಂತೆ ಇತರರು ಇದ್ದರು.