ಸಂಭ್ರಮದ ಆಂಜನೇಯ ರಥೋತ್ಸವ
ಹೂವಿನಹಡಗಲಿ: ತುಂಗಭದ್ರೆ ನದಿ ತೀರದ ಸುಕ್ಷೇತ್ರ ಮದಲಗಟ್ಟಿ ಶ್ರೀ ಆಂಜನೇಯ ಸ್ವಾಮಿ (ಪ್ರಾಣದೇವರು) ರಥೋತ್ಸವ ಸಕಲ ವಾದ್ಯ ವೈಭವಗಳೊಂದಿಗೆ ಭಾನುವಾರ ಸಂಜೆ ಸಡಗರ ಸಂಭ್ರಮದಿಂದ ಜರುಗಿತು.
ಬೆಳಗ್ಗೆ ಶ್ರೀ ಆಂಜನೇಯ ಸ್ವಾಮಿಯ ಅಗ್ನಿಕುಂಡ ಕಾರ್ಯಕ್ರಮವು ನೆರವೇರಿದ್ದು, ದೇವಸ್ಥಾನದಿಂದ ಪಲ್ಲಕಿಯಲ್ಲಿ ಉತ್ಸವ ಮೂರ್ತಿಯ ಮೆರವಣಿಗೆಯಲ್ಲಿ ವೇದವ್ಯಾಸರ ಗ್ರಂಥಗಳು, ದಾಸರ ತತ್ವ ಪದಗಳು, ಹನುಮಂತ ದೇವರ ಹಾಡುಗಳನ್ನು ಭಜನೆಯ ಮೂಲಕ ಹರಿಸರ್ವೋತ್ತಮ, ವಾಯುಜಿತ್ತೋಮ ಎಂಬ ವೇದಘೋಷ ಹಾಕುತ್ತ ಹೂವಿನಿಂದ ಸಿಂಗರಿಸಿದ್ದ ಆಂಜನೇಯ ಸ್ವಾಮಿ ರಥೋತ್ಸವವನ್ನು ಎಳೆದು ಭಕ್ತರು ಪುನೀತರಾದರು.
ಆಂಜನೇಯ ಸ್ವಾಮಿಗೆ ಬೆಳಗ್ಗಿನಿಂದಲೇ ಪಂಚಾಮೃತಾಭಿಷೇಕ, ಮನ್ಯಸೂಕ್ತ ಹೋಮಕ್ಕೆ ಆಗಮಿಸಿದ್ದ ಕೊರ್ಲಹಳ್ಳಿಯ ಪಂಡಿತ ವೆಂಕಟೇಶಚಾರ್ ಮತ್ತು ಸಂಗಡಿಗರಿಂದ ವಾಯುಸ್ಥುತಿ, ಪುನಃಶ್ಚರಣ, ಅಷ್ಟೋತ್ತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ರಥೋತ್ಸವದಲ್ಲಿ ಶ್ರೀ ಆಂಜನೇಯ ಸ್ವಾಮಿಯ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಅರವಿಂದ ಸುತಗುಂಡಿ, ಮದಲಗಟ್ಟಿ ಪ್ರಾಣರಾಜ ಉತ್ಸವ ಸೇವಾ ಸಮಿತಿ ಅಧ್ಯಕ್ಷ ಎಸ್.ಅಶ್ವಥ ನಾರಾಯಣ, ರವಿ ಹುಲಗಿ, ವಿಷ್ಣುತೀರ್ಥ ಕೊಪ್ಪಳ, ಡಾ. ಫಣಿರಾಜ, ಕಾರ್ಮಿಕ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಸೇರಿದಂತೆ ಸಾವಿರು ಭಕ್ತರು ಜಾತ್ರಾ ಕಾಯಕ್ರಮದಲ್ಲಿ ಭಾಗವಹಿಸಿ ಶ್ರೀ ಸ್ವಾಮಿಯ ಕೃಪೆಗೆ ಪಾತ್ರರಾದರು. ನಂತರ ದೇವಸ್ಥಾನದ ಆವರಣದಲ್ಲಿ ಮದ್ದು ಸುಡುವ ಕಾರ್ಯಕ್ರಮ ನಡೆಯಿತು. ಡಿ. 23ರಂದು ಸಂಜೆ 4ಕ್ಕೆ ಓಕಳಿ, ಮುಳ್ಳು ಅಗ್ನಿಪವಾಡ, ಸಂಜೆ 7 ಗಂಟೆಗೆ ಆಂಜನೇಯ ಸ್ವಾಮಿ ತೊಟ್ಟಿಲು ಪೂಜೆ ಕಾರ್ಯಕ್ರಮಗಳು ನಡೆದವು.