ಸುದ್ದಿ ಸಂಕ್ಷೇಪ
ಡಿಕ್ಕಿ: ಬೈಕ್ ಸವಾರ ಸಾವು
ಕೂಡ್ಲಿಗಿ: ತಾಲೂಕಿನ ಬಣವಿಕಲ್ಲು ಸಮೀಪದ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ಬೈಕ್‌ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಿಂಬದಿ ಸವಾರ ಗಂಭೀರ ಗಾಯಗೊಂಡಿರುವ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ತಾಲೂಕಿನ ಬತ್ತನಹಳ್ಳಿ ಗ್ರಾಮದ ವೆಂಕಟೇಶ (43) ಸ್ಥಳದಲ್ಲೇ ಸಾವಿಗೀಡಾದ ದುರ್ದೈವಿ. ಹಿಂಬದಿ ಸವಾರ ಅದೇ ಗ್ರಾಮದ ಶಿವಣ್ಣ ಗಂಭೀರವಾಗಿ ಗಾಯಗೊಂಡಿದ್ದು, ಈತನನ್ನು ತಕ್ಷಣವೇ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಿಬ್ಬರೂ ಮಾವ-ಅಳಿಯ ಎಂದು ತಿಳಿದುಬಂದಿದೆ. ಸೋಮವಾರ ಬೆಳಗ್ಗೆ ತಾಲೂಕಿನ ಎಂ.ಬಿ. ಅಯ್ಯನಹಳ್ಳಿ ಕುರಿ ಸಂತೆಯಲ್ಲಿ ಕುರಿಗಳನ್ನು ಖರೀದಿಸಿ ಕುರಿ ಸಮೇತ ಬೈಕ್‌ನಲ್ಲಿ ತಮ್ಮ ಗ್ರಾಮಕ್ಕೆ ತೆರಳುತ್ತಿದ್ದಾಗ ಹಿಂಬದಿಯಿಂದ ಬಂದ ಲಾರಿ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್ ನುಜ್ಜಾಗಿದೆ. ಕುರಿಗಳು ಸಹ ಸಾವನ್ನಪ್ಪಿದ್ದು, ಅಪಘಾತಕ್ಕೆ ಕಾರಣವಾದ ಲಾರಿ ಪತ್ತೆಯಾಗಿಲ್ಲ. ಈ ಬಗ್ಗೆ ತಾಲೂಕಿನ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಎಎಸ್‌ಐ ಮಂಜುನಾಥ, ಶಿವರಾಜ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಪಘಾತ: ಚಾಲಕ ಸಾವು
ಕುರುಗೋಡು: ಇಲ್ಲಿಗೆ ಸಮೀಪದ ಸೋಮಸಮುದ್ರದ ಬಳಿ ಕ್ರೂಸರ್ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಕಮ್ ಮಾಲೀಕ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಮೃತನು ಬಾಗಲಕೋಟೆ ಜಿಲ್ಲೆಯ ಹನಗುಂದ ತಾಲೂಕಿನ ಕಂದಗಲ್ ಗ್ರಾಮದ ಮಹಾಂತೇಶಗೌಡ (25). ಘಟನೆಯಲ್ಲಿ ದೇವದುರ್ಗ ನಿವಾಸಿ ಚಂದ್ರಕಾಂತ್ ಹಾಗೂ ನಿರ್ಮಲಾ ಎಂಬವರಿಗೆ ಗಾಯಗಳಾಗಿದ್ದು, ಬಳ್ಳಾರಿ ವಿಮ್ಸ್‌ನಲ್ಲಿ ಚಿಕಿತ್ಸೆ ಪಡೆದಿದ್ದಾರೆ. ವಾಹನ ಬೆಂಗಳೂರಿನಿಂದ ಬಾಗಲಕೋಟೆಗೆ ತೆರಳುತ್ತಿತ್ತು. ಕ್ರೂಸರ್‌ನಲ್ಲಿ ಒಟ್ಟು 13 ಪ್ರಯಾಣಿಕರಿದ್ದರು ಎನ್ನಲಾಗಿದೆ. ಘಟನಾ ಸ್ಥಳಕ್ಕೆ ಕುರುಗೋಡು ವೃತ್ತ ನಿರೀಕ್ಷಕರ ಲಕ್ಷ್ಮೀಕಾಂತಯ್ಯ, ಪಿಎಸ್‌ಐ ಸೋಮಶೇಖರ್ ಭೇಟಿ ನೀಡಿದ್ದಾರೆ. ಈ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದೆ.