ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಐಟಿಐಗೆ ಸೆಮಿಸ್ಟರ್ ಪದ್ಧತಿ ವಿರೋಧಿಸಿ ಪ್ರತಿಭಟನೆ

Vishwanath S
Updated On : 25 Dec 2013, 12:43 pm

ಹೂವಿನಹಡಗಲಿ: ಕೈಗಾರಿಕಾ ತರಬೇತಿ ಸಂಸ್ಥೆಗಳಿಗೆ ಸೆಮಿಸ್ಟರ್ ಪದ್ಧತಿ ಜಾರಿಗೊಳಿಸುವ ನಿರ್ಧಾರ ವಿರೋಧಿಸಿ ಎಐಡಿಎಸ್‌ಒ ಪ್ರತಿಭಟನೆ ನಡೆಸಿತು. ಪಟ್ಟಣದಲ್ಲಿ ಐಟಿಐ ಕಾಲೇಜು ವಿದ್ಯಾರ್ಥಿಗಳು ಎಐಡಿಎಸ್‌ಒ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ಐಟಿಐ ತರಬೇತಿ ವಿರೋಧಿ ಸೆಮಿಸ್ಟರ್ ಪದ್ಧತಿ ಕೈಬಿಡುವಂತೆ ಆಗ್ರಹಿಸಿ ತಹಸೀಲ್ದಾರ್ ವಿಜಯಕುಮಾರ್ ಅವರಿಗೆ ಮನವಿ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಎಐಡಿಎಸ್‌ಒ ಸಂಚಾಲಕ ರಹಮತ್ ಬೀರಬ್ಬಿ ಮಾತನಾಡಿ, ಐಟಿಐ ತರಬೇತಿಗೆ ಏಕಾಏಕಿ ಡಿಜಿಇಟಿಯು ಬದಲಾವಣೆ ತಂದಿರುವುದು ತೀರಾ ಅವೈಜ್ಞಾನಿಕ. ತರಬೇತಿ ಆಧಾರಿತ ಕೋರ್ಸ್‌ಗಳಿಗೆ ಬರೀ ಅಂಕಗಳಿಗೆ ಮಾನ್ಯತೆ ನೀಡುವುದು ಸರಿಯಲ್ಲ. ಕೂಡಲೇ ಸರ್ಕಾರ ಸೆಮಿಸ್ಟರ್ ಪದ್ಧತಿ ಜಾರಿಗೊಳಿಸುವ ಆದೇಶ ಹಿಂಪಡೆಯಬೇಕೆಂದು ಒತ್ತಾಯಿಸಿದರು. ಸೆಮಿಸ್ಟರ್ ಪದ್ಧತಿ ಮತ್ತು ಉದ್ಯೋಗ ಕೌಶಲ್ಯ ಪರೀಕ್ಷೆ ಕುರಿತು ತರಬೇತುದಾರರಿಗೂ ಸರಿಯಾದ ಮಾಹಿತಿ ಇಲ್ಲ. ಎರಡು ವರ್ಷಗಳ ಹಿಂದೆಯೇ ಎಸಿವಿಟಿಯ 39ನೇ ಸಭೆಯ ವಿವಾದಾತ್ಮಕ ಅಂಶಗಳು ಇನ್ನೂ ಸ್ಪಷ್ಟವಾಗಿಲ್ಲ. ಸೆಮಿಸ್ಟರ್ ಪದ್ಧತಿಯಲ್ಲಿ ತರಬೇತಿ ಪಡೆದವರನ್ನು ದೇಶದ ಕೈಗಾರಿಕಾ ವಲಯ ಒಪ್ಪಿಕೊಳ್ಳದಿರುವುದರಿಂದ ವಿದ್ಯಾರ್ಥಿಗಳ ಭವಿಷ್ಯ ಡೋಲಾಯಮಾನವಾಗಿದೆ ಎಂದರು. ಎಐಡಿಎಸ್‌ಒ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ, ಎಐಡಿಎಸ್‌ಒ ಸದಸ್ಯರಾದ ಶ್ರೀನಿವಾಸ, ಗುರು ಇತರರು ಮಾತನಾಡಿದರು. ಸರ್ಕಾರಿ ಮತ್ತು ಖಾಸಗಿ ಐಟಿಐ ಕಾಲೇಜು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement