ಕಾಂಗ್ರೆಸ್ಗೆ ಎಪಿಎಂಸಿ ಅಧಿಕಾರ ಗಗನಕುಸುಮ
ಹಗರಿಬೊಮ್ಮನಹಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಇನ್ನೂರು ದಿನಗಳು ಹತ್ತಿರವಾಗುತ್ತಿದ್ದರೂ ವಾರ್ಷಿಕ ಒಂದೂವರೇ ಕೋಟಿ ರುಪಾಯಿಯಷ್ಟು ಆದಾಯವುಳ್ಳ ಪ್ರತಿಷ್ಠಿತ ಹಗರಿಬೊಮ್ಮನಹಳ್ಳಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ(ಎಪಿಎಂಸಿ)ಯ ಅಧಿಕಾರ ಗದ್ದುಗೆ ಮಾತ್ರ ಇಲ್ಲಿನ ಕಾಂಗ್ರೆಸಿಗರಿಗೆ ಗಗನಕುಸುಮವಾಗಿದೆ.
ಎಪಿಎಂಸಿಯಲ್ಲಿ ಖಾಲಿಯಾಗಿರುವ ನಾಲ್ಕು ನಾಮನಿರ್ದೇಶಕರ ಸ್ಥಾನಗಳಿಗೆ ಸದಸ್ಯರನ್ನು ನಾಮ ನಿರ್ದೇಶನಗೊಳಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತಿದೆ. ಹೀಗಾಗಿ, ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಕಾಂಗ್ರೆಸ್ಗೆ ಪ್ರತಿಷ್ಠಿತ ಹಗರಿಬೊಮ್ಮನಹಳ್ಳಿ ಎಪಿಎಂಸಿ ಅಧಿಕಾರ ಚುಕ್ಕಾಣಿ ಮಾತ್ರ ಗಗನಕುಸುಮವಾಗಿದೆ.
ನಾಮನಿರ್ದೇಶಕರ ಸದಸ್ಯತ್ವ ರದ್ದು: 11 ರೈತರಿಂದ ವ್ಯಾಪಾರಸ್ಥರು ಹಾಗೂ ಟಿಎಪಿಸಿಎಂಎಸ್ ನಿಂದ ತಲಾ ಒಬ್ಬೊಬ್ಬ ನಿದೇರ್ಶಕರು ಸೇರಿದಂತೆ 13 ಜನ ನೇರವಾಗಿ ಚುನಾವಣೆಯ ಮೂಲಕ ಆಯ್ಕೆಯಾದರೆ ಎಣ್ಣೆಕಾಳು ಸೊಸೈಟಿ ಸೇರಿದಂತೆ ಒಟ್ಟು ನಾಲ್ಕು ನಿರ್ದೇಶಕರು ಸರ್ಕಾರದಿಂದ ನಾಮಕರಣಗೊಳ್ಳುತ್ತಾರೆ. ಹೀಗಾಗಿ, ಈ ಎಪಿಎಂಸಿಯ ಸದಸ್ಯ ಬಲ ಒಟ್ಟು 17.
ಹತ್ತು ತಿಂಗಳ ಹಿಂದೆ ನಾಲ್ಕು ಸರ್ಕಾರಿ ನಾಮನಿರ್ದೇಶಕರ ಬಲದ ಮೂಲಕ ಬಿಜೆಪಿ ಎಪಿಎಂಸಿ ಆಡಳಿತ ಚುಕ್ಕಾಣಿ ಹಿಡಿದಿತ್ತು. ಆದರೆ, ವಿಧಾನಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿದ್ದ ಈ ಎಲ್ಲ ನಾಲ್ಕು ಸರ್ಕಾರಿ ನಾಮನಿರ್ದೇಶಕರ ಸದಸ್ಯತ್ವ ರದ್ದುಗೊಳಿಸಲಾಗಿದೆ. 17 ಸದಸ್ಯ ಬಲದ ಈ ಎಪಿಎಂಸಿಯಲ್ಲಿ ಬಿಜೆಪಿ ಬಲ ಐದಕ್ಕೆ ಕುಸಿಯಿತು. ಸಕಾಲದಲ್ಲಿ ಖಾಲಿಯಾಗಿರುವ ನಾಲ್ಕು ನಾಮನಿರ್ದೇಶಕ ಸ್ಥಾನಗಳನ್ನು ಭರ್ತಿ ಮಾಡಲು ರಾಜ್ಯ ಸರ್ಕಾರ ವಿಳಂಬ ಮಾಡುತ್ತಿರುವುದರಿಂದಾಗಿ ಸಂಖ್ಯಾಬಲ ಕಡಿಮೆ ಇದ್ದರೂ ಇನ್ನೂ ಕೂಡ ಬಿಜೆಪಿ ಆಡಳಿತವೇ ಎಪಿಎಂಸಿಯಲ್ಲಿ ಮುಂದುವರೆದಿದೆ.
ಜೆಡಿಎಸ್ ಜೊತೆ ಕಾಂಗ್ರೆಸ್ ನಿರ್ದೇಶಕರು: ಈ ಮಧ್ಯೆ ಕಾಂಗ್ರೆಸ್ನಿಂದ ಗೆದ್ದು ಬಂದಿದ್ದ ಎಂಟು ಸದಸ್ಯರಲ್ಲಿ ಮೂರು ನಿರ್ದೇಶಕರು ಜೆಡಿಎಸ್ ಜೊತೆಗೆ ಗುರುತಿಸಿಕೊಂಡಿದ್ದಾರೆ. ಇದರಿಂದ ಕಾಂಗ್ರೆಸ್ ಬಲ ಐದಕ್ಕೆ ಇಳಿದಿದೆ. ಹೀಗಾಗಿ, ಅಧಿಕಾರ ಚುಕ್ಕಾಣಿ ಹಿಡಿಯಲು ನಾಲ್ಕು ಸರ್ಕಾರಿ ನಾಮನಿರ್ದೇಶಕರ ಬಲ ಕಾಂಗ್ರೆಸ್ಗೆ ಅತಿ ಅಗತ್ಯವಿದೆ. ಈ ನಡುವೆ ನಾಲ್ಕು ನಾಮನಿರ್ದೇಶಕ ಸ್ಥಾನಕ್ಕೆ ಐವತ್ತಕ್ಕೂ ಅಧಿಕ ಸಂಖ್ಯೆಯಲ್ಲಿ ಆಕಾಂಕ್ಷಿಗಳು ಅರ್ಜಿ ಸಲ್ಲಿಸಿದ್ದಾರೆ. ಇಷ್ಟು ಸಂಖ್ಯೆಯ ಆಕಾಂಕ್ಷಿಗಳಿಂದಾಗಿ ಸಹಜವಾಗಿಯೇ ಹೈಕಮಾಂಡ್ಗೆ ಉಭಯ ಸಂಕಟ ಎದುರಾಗಿದೆ. ಇಷ್ಟೆಲ್ಲದರ ಮಧ್ಯೆಯೇ ತಾಲೂಕಿನ ಉಪನಾಯಕನಹಳ್ಳಿಯ ಪಿ. ಛತ್ರಪ್ಪ, ಪಟ್ಟಣದ ಬಾಲಕೃಷ್ಣಬಾಬು, ಬನ್ನಿಕಲ್ಲು ಗ್ರಾಮದ ಕೋರಿಸಿದ್ದಲಿಂಗಪ್ಪ ಹೆಸರನ್ನು ಕಾಂಗ್ರೆಸ್ ಹೈಕಮಾಂಡ್ ಅಂತಿಮಗೊಳಿಸಿದೆ ಎಂಬ ಸುದ್ದಿಗಳು ಬಲವಾಗಿ ಹರಡಿವೆ.
ಅವಿಶ್ವಾಸ: ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರ ಮೇಲೆ ಅವಿಶ್ವಾಸಕ್ಕೆ ಅವಕಾಶವಿದ್ದು, ಈ ಹಿನ್ನೆಲ್ಲೆಯಲ್ಲಿ ಸರ್ಕಾರಿ ನಾಮನಿರ್ದೇಶನ ಬರುತ್ತಿದ್ದಂತೆಯೇ ಎಪಿಎಂಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮೇಲೆ ಅವಿಶ್ವಾಸ ಮಂಡಿಸಲು ಕಾಂಗ್ರೆಸ್ ಸಿದ್ಧತೆ ಮಾಡಿಕೊಳ್ಳುತ್ತಿದೆ.