ಕಾರ್ಮಿಕರಿಗೆ ಮೀಸಲಿಟ್ಟ ಹಣ ಅನ್ಯ ಕೆಲಸಕ್ಕೆ ಬಳಕೆ ಬೇಡ: ಡೇಸಿಕನ್
ಗಂಗಾವತಿ: ಅಸಂಘಟಿತ ಕಾರ್ಮಿಕರ ಹಕ್ಕುಗಳನ್ನು ಸರ್ಕಾರ ಜಾರಿಗೆ ತಂದರೆ ಅವರ ಬದಕು ಹಸನಗೊಳ್ಳುತ್ತದೆ ಎಂದು ಎಐಸಿಸಿಟಿಯು ರಾಜ್ಯ ಉಪಾಧ್ಯಕ್ಷ ಡೇಸಿಕನ್ ಹೇಳಿದರು. ನಗರದ ಉದ್ಭವ ಮಹಾಲಕ್ಷ್ಮಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಕಟ್ಟಡ ಕಾರ್ಮಿಕರ ಹಾಗೂ ವಾಲ್ ಪೇಂಟರ್ ಕಾರ್ಮಿಕರ ಪ್ರಥಮ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಸ್ವಾತಂತ್ರ್ಯ ಸಿಕ್ಕು 60 ವರ್ಷ ಕಳೆದರೂ ಕಾರ್ಮಿಕರಿಗೆ ಇನ್ನು ನೆಲೆ ಇಲ್ಲದಂತಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅಸಂಘಟಿತ ಕಾರ್ಮಿಕರಿಗೆ ಕಾರ್ಮಿಕರ ಹಕ್ಕುಗಳು ಮತ್ತು ಕಲ್ಯಾಣ ಕಾರ್ಯಕ್ರಮ ಜಾರಿಗೆ ತರಬೇಕು. ಕೂಡಲೇ ಸರ್ಕಾರಗಳು ಕಾರ್ಮಿಕರಿಗೆ ಭವಿಷ್ಯ ನಿಧಿ, ಕನಿಷ್ಠ ಕೂಲಿ, ನಿವೇಶನ ಸೇರಿದಂತೆ ಮೂಲ ಸೌಕರ್ಯ ಒದಗಿಸಬೇಕು. ಕಾರ್ಮಿಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸುವಲ್ಲಿ ಗಮನಹರಿಸಬೇಕು ಎಂದು ಹೇಳಿದರು.ಎಐಸಿಸಿಟಿಯು ರಾಜ್ಯಾಧ್ಯಕ್ಷ ಜೆ.ಭಾರದ್ವಾಜ ಮಾತನಾಡಿ, ರಾಜ್ಯದಲ್ಲಿರುವ ಕಾರ್ಮಿಕ ಸಚಿವ ಪರಮೇಶ್ವರ ನಾಯಕ ಅವರು ಕಾರ್ಮಿಕರ ನಿಧಿಯನ್ನು ಕಾರ್ಮಿಕರಿಗೆ ಬಳಸದೇ ತಮ್ಮ ಇಲಾಖೆಯ ಬೇರೆ ಯೋಜನೆಗಳಿಗೆ ಬಳಕೆ ಮಾಡುತ್ತಿದ್ದಾರೆಂದು ದೂರಿದ ಅವರು, ಕೂಡಲೇ ಸರ್ಕಾರ ಕಾರ್ಮಿಕರಿಗೆ ಮೀಸಲಿಟ್ಟ ಅನುದಾನವನ್ನು ಕಾರ್ಮಿಕರಿಗೆ ಬಳಕೆ ಮಾಡಬೇಕೆಂದು ಒತ್ತಾಯಿಸಿದರು. ರಾಜ್ಯದಲ್ಲಿ ಕಾರ್ಖಾನೆ ಸೇರಿದಂತೆ ವಿವಿಧ ಮಿಲ್ಗಳಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಇವರಿಗೆ ಯಾವುದೇ ರೀತಿಯ ಸೌಲಭ್ಯ ಇಲ್ಲದ ಕಾರಣ ಅತಂತ್ರ ಸ್ಥಿತಿಯಲ್ಲಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು. ಇದಕ್ಕೂ ಪೂರ್ವ ನಗರದ ಸಿಬಿಎಸ್ ವೃತ್ತದಿಂದ ಜುಲೈ ನಗರದವರೆಗೂ ಜಾಥಾ ನಡೆಸಿದರು. ಸಮ್ಮೇಳನದಲ್ಲಿ ಅಲ್ಲಾ ಗಿರಿರಾಜ್, ಕೊತ್ವಾಲ್ ನಾಗರಾಜ್, ಪೀರ್ಬಾಷಾ ಇದ್ದರು.