ಕ್ಲಸ್ಟರ್ ಮಟ್ಟದ ಕಲಿಕೋತ್ಸವ ಕಾರ್ಯಕ್ರಮ
ಬಳ್ಳಾರಿ: ತಾಲೂಕಿನ ದಮ್ಮೂರು ಗ್ರಾಮದ ವೆಂಕಾವದೂತರ ಮಠದಲ್ಲಿ ದಮ್ಮೂರು ಕ್ಲಸ್ಟರ್ ಮಟ್ಟದ ಕಲಿಕೋತ್ಸವ ಕಾರ್ಯಕ್ರಮ ಜರುಗಿತು.
ಸಿಆರ್ಪಿ ಪಿ. ಮರಿಸ್ವಾಮಿ ಮಾತನಾಡಿ, ಶಾಲಾ ಮಕ್ಕಳಲ್ಲಿರುವ ಕಲಿಕಾಸಕ್ತಿ ದ್ವಿಗುಣಗೊಂಡು ಉತ್ತೇಜನ ಹೆಚ್ಚಿಸುವ ಕಲಿಕೋತ್ಸವ ಕಾರ್ಯಕ್ರಮ ಶ್ಲಾಘನೀಯ. ಮಕ್ಕಳಲ್ಲಿನ ಕಲಿಕೆ ಮತ್ತು ಕಲಿಕೆಯ ಖಾತರಿಯನ್ನು ಹಬ್ಬದ ರೀತಿಯಲ್ಲಿ ಆಚರಿಸುವುದೆ ಕಲಿಕೋತ್ಸವವಾಗಿದೆ. ಶಿಕ್ಷಕರು ಮಕ್ಕಳಿಗೆ ಕಲಿಕೆಯ ಜತೆಗೆ ಉತ್ತಮ ಮೌಲ್ಯಗಳನ್ನು ಬಿತ್ತಬೇಕು ಎಂದು ಹೇಳಿದರು.
ಬೈಲೂರು ಗ್ರಾಮದ ಮುಖಂಡ ಮಹೇಶ್ ರಂಗಾರೆಡ್ಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಾಲೆಗಳಲ್ಲಿ ಶಿಕ್ಷಕರು ಉತ್ತಮ ಬೋಧನೆ ಮಾಡುವ ಮೂಲಕ ಮಕ್ಕಳನ್ನು ಉತ್ತಮ ನಾಗರಿಕರನ್ನಾಗಿ ಮಾಡಬೇಕು ಎಂದರು.
ಬೈಲೂರು ಶಾಲೆ ಮುಖ್ಯಗುರು ಟಿ.ಸಿ. ಪಂಪಾಪತಿ ಮಾತನಾಡಿ, ಮಕ್ಕಳಲ್ಲಿ ಅಡಗಿರುವ ವಿವಿಧ ಪ್ರತಿಭೆ ಗುರುತಿಸುವುದಕ್ಕೆ ಇಂತಹ ಕಾರ್ಯಕ್ರಮಗಳು ಅತ್ಯವಶ್ಯಕ ಎಂದು ಹೇಳಿದರು.
ಬಳ್ಳಾರಿ ತಾಪಂ ಸದಸ್ಯ ಹನುಮಂತಪ್ಪ ಅತಿಥಿಯಾಗಿ ಭಾಗವಹಿಸಿ, ಮಾತನಾಡಿದರು. ಸ್ವರಭಾರಯುಕ್ತ ಓದು, ಕಂಠಪಾಠ, ರಸಪ್ರಶ್ನೆ, ಬಾಯ್ದಿರೆ ಲೆಕ್ಕ, ಸಂಭಾಷಣೆ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ 11 ಶಾಲೆಗಳ 1ರಿಂದ 8ನೇ ತರಗತಿಯ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರಗಳನ್ನು ನೀಡಲಾಯಿತು.
ಗ್ರಾಪಂ ಅಧ್ಯಕ್ಷೆ ಜೆ. ಶಂಕ್ರಮ್ಮ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯ ಗೋಪಾಲ್, ವೆಂಕಾವದೂತ ಮಠದ ಅಧ್ಯಕ್ಷ ಮಲ್ಲಾರೆಡ್ಡಿ, ಕರವೇ ಜಿಲ್ಲಾ ಉಪಾಧ್ಯಕ್ಷ ತಿಪ್ಪಾರೆಡ್ಡಿ, ಪ್ರಕಾಶ್ ರೆಡ್ಡಿ, ಮಂಜುನಾಥ್, ನಾಗಪ್ಪ, ತಿಮ್ಮಪ್ಪ, ಎಸ್. ಕನ್ನಪ್ಪ, ಜೆ. ಶಂಕರರೆಡ್ಡಿ, ಮುಖ್ಯಗುರು ಕೆ.ಎಸ್.ಎಂ. ಶಾಂಭವಿ, ಕೆ. ಶಾಂತವೀರಪ್ಪ, ಜಡೇಶ್, ಶಿಕ್ಷಕರು ಸೇರಿದಂತೆ ಮತ್ತಿತರರಿದ್ದರು.
ಶಿಕ್ಷಕ ಸಿ.ಎಸ್. ರಮೇಶ್ ಪ್ರಾಸ್ತಾವಿಕ ಮಾತನಾಡಿದರು. ಪಲ್ಲವಿ ತಂಡದವರು ಪ್ರಾರ್ಥಿಸಿದರು. ಶಿಕ್ಷಕ ಎಂ. ಗಿರೀಶ್ ಸ್ವಾಗತಿಸಿದರು. ಅನಂತಕುಮಾರ್ ನಿರೂಪಿಸಿದರು. ಟಿ.ಜೆ. ಸಾಗರ ವಂದಿಸಿದರು.