ರೈತರಿಗೆ ವೃತ್ತಿ ನೈಪುಣ್ಯ ಅಗತ್ಯ
ಕಂಪ್ಲಿ: ರೈತರಿಗೆ ತಮ್ಮ ಕೆಲಸದ ಕುರಿತಾಗಿ ಅಭಿಮಾನ ಹಾಗೂ ವೃತ್ತಿ ನೈಪುಣ್ಯತೆ ಅತ್ಯಗತ್ಯವಾಗಿ ಬೇಕಾಗಿದೆ ಎಂದು ಗಂಗಾವತಿಯ ಕೃಷಿ ಸಂಶೋಧನಾ ಕೇಂದ್ರದ ತಳಿ ವಿಜ್ಞಾನಿ ಡಾ. ಮಹ್ಮದ್ ಇಬ್ರಾಹಿಂ ತಿಳಿಸಿದ್ದಾರೆ.
ಕಂಪ್ಲಿ ಪಟ್ಟಣದ ನೆಹರೂ ಬಳ್ಳಾರಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ರೈತ ದಿನಾಚರಣೆ ಮತ್ತು ಆತ್ಮಾ ಯೋಜನೆಯಡಿ ಸೋಮವಾರ ಹಮ್ಮಿಕೊಂಡಿದ್ದ ಕಿಸಾನ್ ಗೋಷ್ಠಿ ಹಾಗೂ ಬತ್ತ ಬೆಳೆ ಸ್ಪರ್ಧೆ ವಿಜೇತರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಸಸ್ಯದ ಮೇಲ್ಭಾಗದ ಅಭಿವೃದ್ಧಿ, ಹೆಚ್ಚಿನ ಇಳುವರಿ ಬಯಸುವ ರೈತ ಬೇರು ಹಾಗೂ ಆಂತರಿಕ ಬೆಳವಣಿಗೆ ಕುರಿತು ಉದಾಸೀನ ತೋರಿದ್ದು, ಮಣ್ಣಿನ ಸವಕಳಿಗೆ ಕಾರಣವಾಗಿದೆ. ಭೂಮಿಗೆ ವಿಶ್ರಾಂತಿ ನೀಡುವ, ಮಣ್ಣಿನ ಆರೈಕೆಯೊಂದಿಗೆ, ಸಮತೋಲನ ಪೌಷ್ಟಿಕಾಂಶಗಳನ್ನು ಮಣ್ಣಿಗೆ ಸೇರಿಸುವ ಮೂಲಕ ವೈಜ್ಞಾನಿಕ ಕೃಷಿ ಅಳವಡಿಸಿಕೊಳ್ಳಲು ರೈತ ಜಾಗೃತಿ ವಹಿಸಬೇಕು ಎಂದರು.
ಸಹಜ ಸಮೃದ್ಧ ತೋಟಗಾರಿಕೆ ಕುರಿತು ಪ್ರಗತಿಪರ ರೈತ ಜಿ. ಮಾರ್ಗದಪ್ಪ, ಜೇನು ಕೃಷಿ ಕುರಿತು ಎಸ್.ಎಚ್. ಎಂ. ಬಸಯ್ಯಸ್ವಾಮಿ ಮಾಹಿತಿ ನೀಡಿದರು. ರಾಜ್ಯ ಮಟ್ಟದ ಬತ್ತ ಬೆಳೆವ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಗಳಿಸಿದ ರೈತ ಮಹಿಳೆ ಡಿ. ವೀಣಾ ಮೌನೇಶ್, ಹೊಸಪೇಟೆ ತಾಲೂಕು ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ ದಂಡಿನ ಮೂರ್ತಿ ಯಾದವ್, ದ್ವಿತೀಯ ಬಹುಮಾನ ಗಳಿಸಿದ ಎ. ಮಲ್ಲಿಕಾರ್ಜುನ, ತೃತೀಯ ಬಹುಮಾನ ಗಳಿಸಿದ ಜಂಗ್ಲಿ ಸಾಬ್ ಅವರನ್ನು ಸನ್ಮಾನಿಸಲಾಯಿತು.
ನೆಹರು ಬಳ್ಳಾರಿ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕಿ ಗೌರ ಮುಕುಂದರಾವ್, ತಾಲೂಕು ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ ಕನ್ನಾರಿ, ರಾಜ್ಯ ರೈತ ಸಂಘದ ಎ. ರಂಗಪ್ಪ, ಜಲಾನಯನ ಅಭಿವೃದ್ಧಿ ಇಲಾಖೆಯ ಎಎಒ ನರಸಿಂಹಮೂರ್ತಿ, ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ ಪ್ರಸನ್ನಕುಮಾರ್, ಆತ್ಮಾ ಯೋಜನೆಯ ಮಾರುತಿ ಪೂಜಾರ್, ವಾಹಿನಿ ಅಭಿವೃದ್ಧಿ ಸಂಸ್ಥೆಯ ಮಹಾಲಕ್ಷ್ಮಿ, ಕೃಷಿಕ ಸಮಾಜದ ಅಧ್ಯಕ್ಷ ಎಲ್. ಸಿದ್ದನಗೌಡ, ಸಹಾಯಕ ಕೃಷಿ ಅಧಿಕಾರಿ ಆರ್. ಇಮಾಮ್ ಭಾಷಾ, ತಾಲೂಕಿನ ಪ್ರಗತಿಪರ ರೈತರು ಪಾಲ್ಗೊಂಡಿದ್ದರು.