ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಪ್ರತಿಭಾ ಕಾರಂಜಿ: ನಡವಿ ವಸತಿ ಶಾಲೆ ಪ್ರಥಮ

Vishwanath S
Updated On : 26 Dec 2013, 11:01 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 25
ನಗರದ ವಾರ್ಡ್ಲಾ ಸಂಯುಕ್ತ ಪದವಿಪೂರ್ವ ಕಾಲೇಜ್ ಅವರಣದಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿಯ ಪ್ರಾಥಮಿಕ ಹಂತದ ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಡವಿಯ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆ ವಿದ್ಯಾರ್ಥಿಗಳು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
7ನೇ ತರಗತಿಯ ವಿದ್ಯಾರ್ಥಿನಿ ಜಿ. ರತ್ನಾ ಮತ್ತು ತಂಡದವರು ಜಿಲ್ಲಾ ಮಟ್ಟಕ್ಕೆ ಪ್ರಥಮ ಸ್ಥಾನ ಹಾಗೂ ಮಣ್ಣಿನ ಮಾದರಿ ತಯಾರಿಕೆ ಸ್ಪರ್ಧೆಯಲ್ಲಿ ಕು. ಸಿದ್ಧಪ್ಪ ಪ್ರಥಮ ಸ್ಥಾನ ಪಡೆದಿದ್ದಾನೆ. ವಿಜೇತರಾದ ವಿದ್ಯಾರ್ಥಿಗಳನ್ನು ಹಾಗೂ ತರಬೇತಿಗೊಳಿಸಿದ ಶಿಕ್ಷಕ-ಶಿಕ್ಷಕಿಯರನ್ನು ಜಿಲ್ಲಾ ಮತ್ತು ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು ಮತ್ತು ನಡವಿಯ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಯ ಪ್ರಾಚಾರ್ಯರು, ಸಹ ಶಿಕ್ಷಕರು ಅಭಿನಂದಿಸಿದ್ದಾರೆ.
ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 25
ನಗರದ ಸ್ತ್ರೀ ಸೇವಾನಿಕೇತನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಬಳ್ಳಾರಿ(ನಗರ) ವತಿಯಿಂದ ಪ್ರೌಢಶಾಲೆಯ ವಿದ್ಯಾರ್ಥಿಗಳಿಗಾಗಿ  ಬಾಲ್ಯವಿವಾಹ ನಿಷೇಧ ಕುರಿತು ಭಾಷಣ ಸ್ಪರ್ಧೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮಕ್ಕಳ ಕಲ್ಯಾಣಾಧಿಕಾರಿ ಚಂದ್ರನಾಯಕ್ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿ, ಅನಾದಿಕಾಲದಿಂದಲೂ ನಡೆದುಬಂದಿರುವ ಬಾಲ್ಯವಿವಾಹ ಪದ್ಧತಿಯು ಒಂದು ಬೃಹತ್ ಸಾಮಾಜಿಕ ಪಿಡುಗಾಗಿದ್ದು, ಬಾಲ್ಯ ವಿವಾಹ ನಿಷೇಧಕ್ಕೆ ಪ್ರತಿಯೊಬ್ಬರೂ ಶ್ರಮಿಸಬೇಕು ಎಂದು ತಿಳಿಸಿದರು. ನಂತರ ಭಾಷಣ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ತೀರ್ಪುಗಾರರಾಗಿ ಆಗಮಿಸಿದ್ದ ವಿಜಯಲಕ್ಷ್ಮಿ, ಉಷಾರಾಣಿ ಅವರು ಬಹುಮಾನಗಳನ್ನು ವಿತರಿಸಿದರು. ಬಳ್ಳಾರಿ (ನಗರ) ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ.ಕೆ. ಕೃಷ್ಣಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸ್ತ್ರೀ ಸೇವಾನಿಕೇತನದ ಮೇಲ್ವಿಚಾರಕರು, ಸಿಬ್ಬಂದಿ ಇದ್ದರು.
ಸ್ತ್ರೀ ಸೇವಾನಿಕೇತನದ ಅಧೀಕ್ಷಕ ಗೋವಿಂದಪ್ಪ ನಿರೂಪಿಸಿದರು. ಬಳ್ಳಾರಿ (ನಗರ) ಶಿಶು ಅಭಿವೃದ್ಧಿ ಯೋಜನಾಧಿಕಾರಿ ಜಿ.ಕೆ. ಕೃಷ್ಣಮ್ಮ ಸ್ವಾಗತಿಸಿದರು. ಮೇಲ್ವಿಚಾರಕಿ ಸುಶೀಲ ವಂದಿಸಿದರು.
ವಿದ್ಯುತ್ ಗುತ್ತಿಗೆದಾರರ ಸಂಘದ ಸಭೆ
ಕುಷ್ಟಗಿ: ಪಟ್ಟಣದ ಕೊಪ್ಪಳ ರಸ್ತೆಯಲ್ಲಿರುವ ಲೋಕೋಪಯೋಗಿ ಇಲಾಖೆ ಹೊಸ ಪ್ರವಾಸಿ ಮಂದಿರದಲ್ಲಿ ಗುರುವಾರ ಕರ್ನಾಟಕ ರಾಜ್ಯ ಲೈಸೆನ್ಸ್ ವಿದ್ಯುತ್ ಗುತ್ತಿಗೆದಾರರ ಸಂಘ ತಾಲೂಕು ಘಟಕದ ಸರ್ವ ಸದಸ್ಯರ ಸಭೆ ನಡೆಯಿತು.
ಸಭೆಯ ಆರಂಭದಲ್ಲಿ ಸಂಘದ ಅಧ್ಯಕ್ಷ ದ್ಯಾಮಣ್ಣ ಕಟ್ಟಿಮನಿ ಇತ್ತೀಚೆಗೆ ಮೃತಪಟ್ಟ ಹಿನ್ನೆಲೆಯಲ್ಲಿ ಮೃತರ ಆತ್ಮಕ್ಕೆ ಶಾಂತಿ ಕೋರಿ 5 ನಿಮಿಷ ಮೌನಾಚರಿಸಿ ಸಂತಾಪ ಸಲ್ಲಿಸಲಾಯಿತು. ತಾಲೂಕಿನಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ, ಸಂಘಟನೆ ಇತರೆ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಯಿತು. ಸಂಘಟನೆ ನೂತನ ಅಧ್ಯಕ್ಷರನ್ನಾಗಿ ಶರಣಪ್ಪ ಕೆ. ಆಡೂರು ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಆಸೀಫ್ ಇಕ್ಬಾಲ್ ಡಲಾಯತ್, ಪ್ರಧಾನ ಕಾರ್ಯದರ್ಶಿಯಾಗಿ ಯಮನೂರಪ್ಪ ಕನಕೊಪ್ಪ, ಸಹ ಕಾರ್ಯದರ್ಶಿಯಾಗಿ ಅಶೋಕ ಬೊಳ್ಳಳ್ಳಿ, ಸಂಘಟನಾ ಕಾರ್ಯದರ್ಶಿಗಳಾಗಿ ಹನುಮಗೌಡ ಪೊಲೀಸ್ ಪಾಟೀಲ್, ಯಮನೂರುಸಾಬ್(ರಾಜು), ಖಜಾಂಚಿಯಾಗಿ ಶೇಖಪ್ಪ ಕುರಿ, ಸಮನ್ವಯ ಸಮಿತಿ ಸದಸ್ಯ ರಾಮಾಚಾರ ಪುರಾಣಿಕ, ಭೀಮಾಚಾರ ಎಣ್ಣಿ, ಮುರ್ತುಜಾಸಾಬ್ ಕನಕೊಪ್ಪ, ಷರೀಫ್‌ಸಾಬ್ ನದಾಫ್, ಯಮನಪ್ಪ, ಕಳಕಪ್ಪ ನಾಯಕವಾಡಿ ಅವರು ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭ ವಿದ್ಯುತ್ ಗುತ್ತಿಗೆದಾರರ ಸಂಘದ ಸರಫರಾಜ್, ಸುರೇಶ ಬೋಸಲೆ, ಗಿರೀಶ ಪಟವಾರಿ, ಮಹ್ಮದ್ ಅಲಿ ನಾಯಕ, ಗವಿಸಿದ್ದಪ್ಪ, ಶ್ರೀನಿವಾಸ ಚಳಗೇರಿ, ಸಿದ್ದಪ್ಪ ಹನುಮನಾಳ, ಶಿವುಪುತ್ರಪ್ಪ ಗುಮಗೇರಿ, ಟಿ.ಜಿ.ಪುರೋಹಿತ, ಬುಡ್ಡಾ ದೋಟಿಹಾಳ, ಬಸವರಾಜ ನೆರಬೆಂಚಿ ಮತ್ತಿತರರಿದ್ದರು.
ಕುಷ್ಟಗಿ: ಶಾಲೆ-ಕಾಲೇಜು ಸುರಕ್ಷತೆಗೆ ಸೂಚನೆ
ಕುಷ್ಟಗಿ: ಶಾಲಾ-ಕಾಲೇಜುಗಳ ಸುರಕ್ಷತೆಗೋಸ್ಕರ ಕಾವಲುಗಾರರನ್ನು ನೇಮಿಸಿಕೊಳ್ಳಬೇಕೆಂದು ಪಿಎಸ್‌ಐ ರಾಮಚಂದ್ರ ಬಳ್ಳಾರಿ ಕುಷ್ಟಗಿ ಠಾಣಾ ವ್ಯಾಪ್ತಿಯಲ್ಲಿ ಬರುವ ಶಾಲಾ-ಕಾಲೇಜು ಮುಖ್ಯಸ್ಥರಿಗೆ ಸೂಚನೆ ನೀಡಿದ್ದಾರೆ.
ಇಲ್ಲಿನ ಪೊಲೀಸ್ ಠಾಣೆ ವ್ಯಾಪ್ತಿಯ ಸರ್ಕಾರಿ ಹಾಗೂ ಖಾಸಗಿ ಶಾಲೆ-ಕಾಲೇಜುಗಳಲ್ಲಿ ಕಳ್ಳತನ ಪ್ರಕರಣಗಳ ಹೆಚ್ಚುತ್ತಿರುವುದರಿಂದ ಶಾಲೆ-ಕಾಲೇಜು ಕಟ್ಟಡಗಳಿಗೆ ಸೂಕ್ತ ಭದ್ರತೆ ಅಗತ್ಯವಿದೆ. ಹಾಗಾಗಿ ಶಾಲಾ-ಕಾಲೇಜುಗಳ ಮುಖ್ಯಸ್ಥರು ತಮ್ಮ ಶಾಲಾಭಿವೃದ್ಧಿ ಸಮಿತಿ ಮುಖ್ಯಸ್ಥರೊಂದಿಗೆ ಚರ್ಚಿಸಿ ಕೂಡಲೇ ರಕ್ಷಣೆಗಾಗಿ ಕಾವಲುಗಾರರ ನೇಮಿಸಿಕೊಳ್ಳಬೇಕು. ಇದಕ್ಕೆ ಪೊಲೀಸ್ ಇಲಾಖೆಯಿಂದ ಎಲ್ಲ ರೀತಿಯ ರಕ್ಷಣೆ ಸಹಕಾರ ನೀಡಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಿದ್ದಾರೆ.
ಅಟಲ್ ಜನ್ಮದಿನ: ಹಣ್ಣು-ಹಂಪಲು ವಿತರಣೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 25
ದೇಶದ ಮಾಜಿ ಪ್ರಧಾನಮಂತ್ರಿ, ಬಿಜೆಪಿ ಹಿರಿಯ ಮುಖಂಡ ಅಟಲ್ ಬಿಹಾರಿ ವಾಜಪೇಯಿ ಅವರ 89ನೇ ಜನ್ಮದಿನದ ಅಂಗವಾಗಿ, ಭಾರತೀಯ ಜನತಾ ಪಕ್ಷದ ಬಳ್ಳಾರಿ ನಗರ ಘಟಕದ ಕಾರ್ಯಕರ್ತರು ಬುಧವಾರ ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಮಾತನಾಡಿ, ಭಾರತ ದೇಶವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವಲ್ಲಿ ಗ್ರಾಮ ಸಡಕ್ ಯೋಜನೆ, ಸರ್ವ ಶಿಕ್ಷಣ ಅಭಿಯಾನ, ರಾಷ್ಟ್ರೀಯ ಹೆದ್ದಾರಿ ಯೋಜನೆ ಸೇರಿದಂತೆ ಹತ್ತು ಹಲವು ಅಭಿವೃದ್ಧಿ ಯೋಜನೆಗಳನ್ನು ಜಾರಿ ತರುವಲ್ಲಿ ಮಾಜಿ ಪ್ರಧಾನಿ ಅಟಲ್‌ಜೀ ಅವರು ಗಣನೀಯವಾಗಿ ಶ್ರಮಿಸಿದ್ದಾರೆ. ಅವರ ಜನ್ಮದಿನ ಆಚರಿಸುವುದು ಬಿಜೆಪಿ ಕಾರ್ಯಕರ್ತರಾದ ನಮ್ಮಲ್ಲಿ ಮತ್ತಷ್ಟು ಉತ್ಸಾಹ ತಂದಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಭಾರತೀಯ ಜನತಾ ಪಕ್ಷದ ನಗರ ಘಟಕದ ಅಧ್ಯಕ್ಷ ಕೆ.ಎ. ವೇಮಣ್ಣ, ಮುಖಂಡರಾದ ವಿರೂಪಾಕ್ಷಗೌಡ, ಮುರಹರಿಗೌಡ, ಸುಧಾಕರರೆಡ್ಡಿ, ಸುಧೀರ್, ಶಿವಕುಮಾರ್, ರಾಮಚಂದ್ರಯ್ಯ, ಹನುಮಂತಪ್ಪ, ಸುಮ ರೆಡ್ಡಿ, ಶರಣಮ್ಮ, ಕೆ.ಆರ್. ಮಲ್ಲೇಶ್ ಕುಮಾರ್, ಎಸ್.ಮಲ್ಲಿಕಾರ್ಜುನ, ಯೋಗ ನಾಗರಾಜ್, ಶ್ಯಾಮ್, ರಾಘವೇಂದ್ರ, ಚಕ್ರವರ್ತಿ, ರಾಘವೇಂದ್ರ, ಶ್ರೀನಿವಾಸ್, ಜಿಲ್ಲಾ ಘಟಕದ ಪದಾಧಿಕಾರಿಗಳು ಇದ್ದರು.




Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement