ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಸಾಧನೆ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ ಡಿ. 25
ತಾಲೂಕಿನ ಅನತಿ ದೂರದ ಮಿರಾಕೊರನಹಳ್ಳಿಯ ಶ್ರೀ ಶರಣ ಬಸವೇಶ್ವರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು ಈಚೆಗೆ ಹಾಸನದಲ್ಲಿ ಜರುಗಿದ ರಾಜ್ಯಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದು ದಕ್ಷಿಣ ಭಾರತ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳಲ್ಲಿ ಅನ್ವೇಷಣಾ ಗುಣ ಬೆಳೆಸುವುದು ಮತ್ತು ಸೃಜನಾತ್ಮಕ ಆಲೋಚನೆಗಳಿಗೆ ಅವಕಾಶ ಕೊಟ್ಟು ಪ್ರತಿಭೆ ಹುಡುಕುವ ಮತ್ತು ಪೋಷಿಸುವ ಉದ್ದೇಶಗಳಿಗಾಗಿ ಆಯೋಜಿಸುವ ವಿಜ್ಞಾನ ವಸ್ತು ಪ್ರದರ್ಶನ ಇಂದಿನ ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳವಣಿಗೆಗೆ ಸಹಕಾರಿಯಾಗುತ್ತಿದೆ. ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಎನ್ಸಿಇಆರ್ಟಿ ನವದೆಹಲಿ, ಎನ್ಸಿ ಎಸ್ಎಂ ಕೋಲ್ಕತ್ತಾ, ಡಿಎಸ್ಇಆರ್ಟಿ ಮತ್ತು ವಿಐಟಿಎಂ ಬೆಂಗಳೂರು ಆಶ್ರಯದಲ್ಲಿ ವಿಜ್ಞಾನ ವಸ್ತು ಪ್ರದರ್ಶನವನ್ನು ಪ್ರತಿ ವರ್ಷ ಆಯೋಜಿಸಲಾಗುತ್ತಿದೆ.
ಪ್ರಥಮ ಬಾರಿ ಸಾಧನೆ: ಪ್ರಸಕ್ತ ವರ್ಷ ವಿಜ್ಞಾನ ಮತ್ತು ಗಣಿತದ ಅನ್ವೇಷಣೆಗಳು ಎಂಬ ಮುಖ್ಯ ವಿಷಯದಲ್ಲಿ ಆರು ಉಪ ವಿಷಯಗಳನ್ನು ನಿಗದಿಪಡಿಸಲಾಗಿತ್ತು. ಆರೋಗ್ಯ ಉಪ ವಿಷಯದಡಿ ಮಿರಾಕೊರನಹಳ್ಳಿ ಪ್ರೌಢಶಾಲೆ ವಿದ್ಯಾರ್ಥಿಗಳು 'ಶುದ್ಧ ಜಲ ಆರೋಗ್ಯಕ್ಕೆ ಬಲ' ಎಂಬ ಮಾದರಿ ಪ್ರದರ್ಶಿಸಿ ಜಿಲ್ಲಾ ಹಂತದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಇದೀಗ ರಾಜ್ಯ ಮಟ್ಟದಲ್ಲೂ ಪ್ರಥಮ ಸ್ಥಾನ ಪಡೆದು ಜನವರಿ ತಿಂಗಳು ಚೆನ್ನೈನಲ್ಲಿ ನಡೆಯುವ ದಕ್ಷಿಣ ಭಾರತ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಭಾಗವಹಿಸಲಿದ್ದಾರೆ.
ವಿಜ್ಞಾನ ವಸ್ತು ಪ್ರದರ್ಶನದಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ದಕ್ಷಿಣ ಭಾರತ ಮಟ್ಟಕ್ಕೆ ಆಯ್ಕೆಯಾಗಿರುವುದು ತಾಲೂಕಿನ ಇತಿಹಾಸದಲ್ಲಿಯೇ ಪ್ರಥಮ ಬಾರಿಯಾಗಿದೆ.
ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ದಕ್ಷಿಣ ಭಾರತಮಟ್ಟಕ್ಕೆ ಆಯ್ಕೆಯಾಗಿ ತಾಲೂಕಿಗೆ ಕೀರ್ತಿ ತಂದ ವಿದ್ಯಾರ್ಥಿಗಳಾದ ಟಿ. ಭರತ್ ಮತ್ತು ಜೆ. ಕೊಟ್ರೇಶ್ ಹಾಗೂ ಮಾರ್ಗದರ್ಶಿ ಶಿಕ್ಷಕರಾದ ಟಿ.ಪಿ. ವೀರೇಂದ್ರರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಜಿ. ಕೊಟ್ರೇಶ್, ಕ್ಷೇತ್ರ ಸಮನ್ವಯಾಧಿಕಾರಿ ಸಿ.ಜೆ. ಮಲ್ಲಣ್ಣ, ಡಯಟ್ನ ತಾಲೂಕು ನೋಡಲ್ ಅಧಿಕಾರಿ ವೈ.ಎಂ. ವೀರೇಶ್, ಎಸ್ಡಿಎಂಸಿ ಅಧ್ಯಕ್ಷ ಎಚ್. ಲಕ್ಕಪ್ಪ ಮತ್ತು ಪದಾಧಿಕಾರಿಗಳು, ಪ್ರಭಾರಿ ಮುಖ್ಯ ಗುರು ಜಿ.ಎಂ. ಸಂಗಮೇಶ್ವರ ಮತ್ತು ಶಿಕ್ಷಕ ಸಿಬ್ಬಂದಿ ವರ್ಗ ಹಾಗೂ ಪೋಷಕರು, ಗ್ರಾಮಸ್ಥರು ಅಭಿನಂದಿಸಿದ್ಧಾರೆ.