ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕೊಟ್ಟ ಮಾತಿಗೆ ತಪ್ಪಿದ ಉಸ್ತುವಾರಿ ಸಚಿವರು

Vishwanath S
Updated On : 27 Dec 2013, 12:22 pm

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಡಿ. 26
ಕಾಂಗ್ರೆಸ್ ಸರ್ಕಾರದ ಆಡಳಿತಕ್ಕೆ ನವಮಾಸ ತುಂಬುತ್ತಿದೆ. ಅಧಿಕಾರಿಗಳಿಗೆ ನೀತಿ ಪಾಠದ ಜತೆಗೆ ಹಿಂದಿನ ಸರ್ಕಾರದ ಅವಧಿಯಲ್ಲಿ ಕೆಲ ಇಲಾಖೆಗಳಲ್ಲಿ ಭಾರಿ ಅವ್ಯವಹಾರ ನಡೆದಿರುವ ಕುರಿತು ಸಮಗ್ರ ತನಿಖೆ ಮಾಡಿ ತಪ್ಪು ಎಸಗಿದವರಿಗೆ ತಕ್ಕಶಿಕ್ಷೆ ಎಂದಿದ್ದ ಜಿಲ್ಲಾ ಉಸ್ತುವಾರಿ ಸಚಿವರು ತನಿಖೆ ಈ ಕುರಿತು ಮಾತೇ ಆಡುತ್ತಿಲ್ಲ ಯಾಕೆ?
ಹೌದು, ಹೀಗೊಂದು ಪ್ರಶ್ನೆ ಮತದಾರರ ಮುಂದೆ ಸುಳಿಯುತ್ತಿದೆ. ಕ್ಷೇತ್ರ ಕುರಿತು ಗದ್ದುಗೆ ಏರುವ ಮುನ್ನ ಇದ್ದ ಕಾಳಜಿ ಅಧಿಕಾರ ಬಂದ ಕೂಡಲೇ ಕೊಟ್ಟ ಮಾತು ಮರೆತ ಮಂತ್ರಿಯಾಗಿದ್ದಾರೆ. ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ. ಪ್ರಕಾಶರ ಹೆಸರಿಗೆ ಕಳಂಕ ತರಲಾರೆ, ಇಲಾಖೆಗಳಲ್ಲಿ ನಡೆದಿರುವ ಅವ್ಯವಹಾರ, ಭ್ರಷ್ಟಾಚಾರಗಳ ಕುರಿತು ತನಿಖೆ ನಡೆಸುವುದಾಗಿ ಹೇಳಿದ್ದ ಜಿಲ್ಲಾ ಉಸ್ತುವಾರಿ ಸಚಿವರ ಮಾತಿನಂತೆ ಈವರೆಗೂ ಕನಿಷ್ಠ ತನಿಖಾಧಿಕಾರಿಯನ್ನು ನೇಮಿಸುವಂಥ ಪ್ರಾಥಮಿಕ ಪ್ರಕ್ರಿಯೆ ನಡೆಯದಿರುವುದು ಹಲವು ಸಂಶಯಗಳಿಗೆ ಎಡೆಮಾಡಿದೆ.
ಚಾಲನೆ ಸಿಕ್ಕಿಲ್ಲ: ವಿಪರ್ಯಾಸವೆಂದರೆ ಹಾಲಿ ಸಚಿವರು ಹಿಂದೆ ಪ್ರತಿಪಕ್ಷದಲ್ಲಿದಾಗ ಕ್ಷೇತ್ರದ ಕೆರೆ ಅಭಿವೃದ್ಧಿ ಅನುದಾನದಲ್ಲಿ ಸಮರ್ಪಕ ಕಾಮಗಾರಿ ನಡೆದಿಲ್ಲ.
ಅಧಿಕಾರಿಗಳು ಸರ್ಕಾರದ ಪರ ಕೆಲಸ ಮಾಡಿ ಬೋಗಸ್ ಬಿಲ್ ಸೃಷ್ಟಿಸಿ ಹಣ ಲೂಟಿ ಮಾಡಿದ್ದಾರೆಂದು ಪ್ರತಿಭಟಿಸಿ ತನಿಖೆಗೆ ಆಗ್ರಹಿಸಿದ್ದರು. ಇದೀಗ ತಾವೇ ಅಧಿಕಾರದಲ್ಲಿದ್ದು, ತನಿಖೆ ಮಾಡಿಸುವುದಾಗಿ ಭರವಸೆ ನೀಡಿದ್ದರೂ ಈವರೆಗೆ ಚಾಲನೆ ಸಿಕ್ಕಿಲ್ಲ.
ಕವಡೆ ಕಾಸಿನ ಕಿಮ್ಮತ್ತಿಲ್ಲ: ತಾಲೂಕಿನ ಹಿರೇಹಡಗಲಿ ಕೆರೆ ಅಭಿವೃದ್ಧಿ ಕಾಮಗಾರಿಯಲ್ಲಿ ಭಾರಿ ಅವ್ಯವಹಾರ ನಡೆದಿರುವುದಾಗಿ ಆಡಳಿತ ಪಕ್ಷದ ತಾಪಂ ಸದಸ್ಯರೊಬ್ಬರು ನೇರವಾಗಿ ಆರೋಪಿಸಿದ್ದಾರೆ. ಜತೆಗೆ ತನಿಖೆಗೂ ಆಗ್ರಹಿಸಿ ಹಲವು ತಿಂಗಳಗಳೇ ಕಳೆದಿವೆ. ಅವ್ಯವಹಾರ, ಭ್ರಷ್ಟಾಚಾರ ಕುರಿತು ಸ್ವ-ಪಕ್ಷದ ಸ್ಥಳೀಯ ಜನಪ್ರತಿನಿಧಿಗಳ ಧ್ವನಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎನ್ನುವುದಕ್ಕೆ ಈ ಪ್ರಕರಣ ಪ್ರತ್ಯಕ್ಷ ಸಾಕ್ಷಿ.
ಬ್ಲಾಕ್‌ಮೆಲ್ ತಂತ್ರವೇ! ಹಿಂದಿನ ಸರ್ಕಾರ ಅವಧಿಯಲ್ಲಿ ರಸ್ತೆ ಅಭಿವೃದ್ಧಿ ಹಾಗೂ ರಸ್ತೆ ದುರಸ್ತಿ ಹೆಸರಿನಲ್ಲಿ ವ್ಯಾಪಕ ದುರ್ಬಳಕೆಯಾಗಿದ್ದು, ಬೋಗಸ್ ಬಿಲ್‌ಗಳ ಮೂಲಕ ಲಕ್ಷಾಂತರ ರು. ಹಣ ಲೂಟಿಯಾಗಿದೆ ಎಂದಿದ್ದ ಪರಮೇಶ್ವರ ನಾಯ್ಕ ಅವರು ತಾವೇ ಅಧಿಕಾರದಲ್ಲಿದ್ದರೂ ತನಿಖೆಗೆ ಏಕೆ ಕ್ರಮ ಕೈಗೊಳ್ಳುತ್ತಿಲ್ಲ. ಸಚಿವರ ಇಂತಹ ಭರವಸೆಗಳು ಕೇವಲ ಪ್ರಚಾರಕ್ಕಾಗಿ ಸೀಮಿತವಾಗಿವೆಯೇ ಅಥವಾ ಅಧಿಕಾರಿ ವಲಯದಲ್ಲಿ ನಡುಕ ಹುಟ್ಟಿಸಿ ಬ್ಲಾಕ್‌ಮೇಲ್ ಮಾಡುವ ತಂತ್ರವೇ ಎಂಬುದು ಸಾರ್ವಜನಿಕರ ಪ್ರಶ್ನೆ.
ಹದಗೆಟ್ಟ ರಾಜ್ಯ ಹೆದ್ದಾರಿ: ತಾಪಂ ಮಲ್ಲಿಗೆ ಸಭಾಂಗಣದಲ್ಲಿ ನಡೆದ ಆರಂಭದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದ ಆದೇಶಗಳು ಇಂದಿಗೂ ಜಾರಿಯಾಗಿಲ್ಲ.
ಹಿಂದಿನ ಚುನಾವಣೆ ಸಂದರ್ಭದಲ್ಲಿ ಎಲ್ಲ ಹಳ್ಳಿಗಳಿಗೂ ಮತಯಾಚನೆಗೆ ಭೇಟಿ ನೀಡಿದ್ದ ಪಿ.ಟಿ. ಪರಮೇಶ್ವರ ನಾಯ್ಕ ಅವರೆ ಗ್ರಾಮೀಣ ರಸ್ತೆಗಳ ನರಕಯಾತನೆ ದೃಶ್ಯ ಕಣ್ಣಾರೆ ಕಂಡಿದ್ದಾರೆ. ಇನ್ನು ಪಟ್ಟಣದಲ್ಲಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯು ತಗ್ಗು ಗುಂಡಿಗಳಿಂದ ಆವೃತ್ತವಾಗಿವೆ. ಇದೇ ರಸ್ತೆಯಲ್ಲಿ ವಾಹನಗಳು ಸರ್ಕಸ್ ಮಾಡುತ್ತಾ ಸಾಗಬೇಕಿದೆ. ರಸ್ತೆಯ ಮೇಲೆ ಕಣ್ಣು ಹಾಕಿದ್ದರಿಂದ ಧೂಳುಮಯ ರಸ್ತೆಯಾಗಿದೆ. ಈ ಅವ್ಯವಸ್ಥೆಗೆ ಹಿಡಿಶಾಪ ಹಾಕುವ ಪ್ರಯಾಣಿಕರು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸುತ್ತಿದ್ದಾರೆ.
ಈ ಹಿಂದೆ ಸಚಿವರನ್ನು ಇದೇ ವಿಷಯ ಕುರಿತು ಮಾತನಾಡಿಸಿದಾಗ, ಇಲಾಖೆಗಳ ಅವ್ಯವಹಾರ ಕುರಿತು ಅಧಿಕಾರಿಗಳಿಗೆ ಮಾಹಿತಿ ಪಡೆಯಲು ಹೇಳಿದ್ದೇವೆ ಎಂದು ಹೇಳಿದ್ದರು. ಆದರೆ, ಇಲಾಖೆ ತನಿಖೆ ಮಾಡಬೇಕೆಂದು ಭರವಸೆ ನೀಡಿದವರು ಇಲಾಖೆ ಮಾಹಿತಿ ಪಡೆದರೆ ತನಿಖೆ ಮುಗಿಯಿತು ಎಂಬ ಅರ್ಥವೆ, ಅದೇನೇ ಇರಲಿ ಇಲಾಖೆಗಳಲ್ಲಿ ನಡೆದಿದೆ ಎನ್ನಲಾಗುತ್ತಿರುವ ಅವ್ಯವಹಾರ ಕುರಿತು ಸಮಗ್ರ ತನಿಖೆ ನಡೆದರೆ ತಪ್ಪಿಸ್ಥರಿಗೆ ತಕ್ಕಶಿಕ್ಷೆ ಹಾಗೂ ಸಚಿವರು ಮತದಾರರಿಗೆ ನೀಡಿದ ಭರವಸೆ ಎರಡು ಈಡೇರಿದಂತಾಗುತ್ತದೆ ಎಂಬುದು ಜನತೆಯ ಆಶಯ.



-ಚಂದ್ರು ಕೊಂಚಿಗೇರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement