ಗ್ರಾಮೀಣಾಭಿವೃದ್ಧಿಗೆ ಯುವಕರು ಕ್ರಿಯಾಶೀಲರಾಗಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 26
ಗ್ರಾಮಗಳ ಅಭಿವೃದ್ಧಿಯಲ್ಲಿ ಯುವಕರು ತಮ್ಮ ಹೊಸ ಚಿಂತನೆಗಳೊಂದಿಗೆ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಬೇಕು ಎಂದು ರಾಜ್ಯ ಆಡಳಿತ ಸುಧಾರಣೆ ಇಲಾಖೆ ಕಾರ್ಯದರ್ಶಿ ಶಾಲಿನಿ ರಜನೀಶ್ ಸಲಹೆ ನೀಡಿದರು.
ನಗರದ ರಾಘವಕಲಾ ಮಂದಿರದಲ್ಲಿ ಗುರುವಾರ ಅಖಿಲ ಕರ್ನಾಟಕ ಯುವಜನ ಜಾಗೃತಿ ವೇದಿಕೆ ಹಮ್ಮಿಕೊಂಡಿದ್ದ 'ಗ್ರಾಮೀಣಾಭಿವೃದ್ಧಿಯಲ್ಲಿ ಯುವಕರ ಪಾತ್ರ' ಎಂಬ ವಿಷಯ ಕುರಿತ ವಿಚಾರ ಸಂಕಿರಣ, ಜಿಲ್ಲಾ ಮಟ್ಟದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲ್ಲ ಅಭಿವೃದ್ಧಿ ಕಾರ್ಯಗಳಿಗಾಗಿ ಸರ್ಕಾರ-ಜನಪ್ರತಿನಿಧಿಗಳ ಮೇಲೆ ಅವಲಂಬಿತರಾಗದೆ, ತಮ್ಮಲ್ಲಿನ ಸಾಮಾನ್ಯ ಜ್ಞಾನ ಬಳಸಿ, ನಿತ್ಯ ಅನುಭವಿಸುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಲ್ಲಿ ನಾವು ಉತ್ತಮ ಜೀವನ ನಡೆಸಬಹುದು. ಜತೆಗೆ ಇತರರಿಗೂ ಸಹಾಯವಾಗುತ್ತದೆ ಎಂದರು.
ಸಕಾಲ ಸದುಪಯೋಗವಾಗಲಿ: ಜನರು ಹಾಗೂ ಸಮಾಜದ ಅಭಿವೃದ್ಧಿಗಾಗಿ ಸರ್ಕಾರ ಜಾರಿಗೆ ತರುವ ಹಲವು ಸೇವೆಗಳನ್ನು ಪಡೆದುಕೊಳ್ಳುವುದು ಸಾರ್ವಜನಿಕರ ಹಕ್ಕಾಗಿದೆ. ಆದರೆ, ಅದಕ್ಕಾಗಿ ಅರ್ಜಿ ಸಲ್ಲಿಸಿ, ತಿಂಗಳುಗಟ್ಟಲೆ ಸರ್ಕಾರಿ ಕಚೇರಿ ಹಾಗೂ ಅಧಿಕಾರಿಗಳ ಸುತ್ತಲೂ ಕೆಲಸ ಬಿಟ್ಟು ಅಲೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸರ್ಕಾರ ಸಕಾಲ ಎಂಬ ಹೊಸ ಯೋಜನೆ ಜಾರಿಗೆ ತಂದಿದೆ. ಪ್ರತಿಯೊಬ್ಬರೂ ಯೋಜನೆ ಕುರಿತು ಅರಿತು ಸದುಪಯೋಗಪಡಿಸಿಕೊಳ್ಳಬಹುದು ಎಂದರು.
ಅರ್ಜಿ ಸಲ್ಲಿಸಿ ಮಾಹಿತಿ ಪಡೆಯಿರಿ: ಸಕಾಲ ಯೋಜನೆಯನ್ನು ಅಂತರ್ಜಾಲದಲ್ಲೂ ಅಳವಡಿಸಲಾಗಿದ್ದು, ಗಣಕಯಂತ್ರದ ಬಗ್ಗೆ ತಿಳಿವಳಿಕೆಯುಳ್ಳವರು ಈ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಬಾರದವರು, ಅಂತರ್ಜಾಲ ಮಳಿಗೆಗಳಲ್ಲಿ ಕೇವಲ ರು. 10ಗಳಿಗೆ ಅರ್ಜಿ ಸಲ್ಲಿಸಿ, ಮಾಹಿತಿ ಪಡೆಯಬಹುದು. ಈ ಬಗ್ಗೆ ಹೆಚ್ಚುವರಿ ಯಾವುದೇ ಮಾಹಿತಿ ಬೇಕಾದಲ್ಲಿ 080-44554455ಗೆ ಸಂಪರ್ಕಿಸಿ ಪಡೆಯಬಹುದು ಎಂದು ಹೇಳಿದರು.
ಕೆಲಸವಾಗದಿದ್ದರೆ ಕ್ರಮ: ಡ್ರೈವಿಂಗ್ ಲೈಸೆನ್ಸ್, ವಾಹನ ನೋಂದಣಿ, ಬೀದಿದೀಪ, ಬೋರ್‌ವೆಲ್ ರಿಪೇರಿ, ಜನನ-ಮರಣ ಪ್ರಮಾಣ ಪತ್ರ, ಖಾತೆ ಬದಲಾವಣೆ, ಮರು ಮೌಲ್ಯಮಾಪನ ಸೇರದಂತೆ ಒಟ್ಟು 419 ಸೇವೆಗಳನ್ನು ಸಕಾಲ ಯೋಜನೆ ವ್ಯಾಪ್ತಿಯಲ್ಲಿ ಸೇರಿಸಲಾಗಿದೆ. ಸಕಾಲ ಯೋಜನೆಯುಳ್ಳ ಸರ್ಕಾರಿ ಕಚೇರಿಗಳಲ್ಲಿ ಈ ಕುರಿತು ನಾಮಫಲಕ ಇರಲಿದೆ. ಇದರ ಸೂಚನೆ ಮೇರೆಗೆ ತಾವುಗಳು ಅರ್ಜಿ ಸಲ್ಲಿಸಿ, ಸ್ವೀಕೃತಿ ಮರೆಯದೆ ಪಡೆಯಬೇಕು ಎಂದ ಅವರು, ಅಂತರ್ಜಾಲದಲ್ಲಿ ಅರ್ಜಿ ಸಲ್ಲಿಸಿದಲ್ಲಿ, ತಮ್ಮ ಮೊಬೈಲ್ ನಂಬರ್‌ನ್ನು ನಮೂದಿಸಿ ಇದರಿಂದ ಅರ್ಜಿ ಸ್ವೀಕೃತಿ ಅಥವಾ ಇತರೆ ಮಾಹಿತಿಯು ತಮ್ಮ ಮೊಬೈಲ್‌ಗೆ ಕೂಡಲೇ ಸಂದೇಶ ರವಾನೆಯಾಗಲಿದೆ. ಈ ಸಂದೇಶ ಅಥವಾ ಸ್ವೀಕೃತಿ ಪತ್ರಗಳ ಮೂಲಕ ಕೆಲಸ ನಡೆಯದಿದ್ದಲ್ಲಿ, ಆಡಳಿತ ಸುಧಾರಣಾ ಇಲಾಖೆಗೆ ಸಂಬಂಧಪಟ್ಟವರ ಮೇಲೆ ಕ್ರಮಕೈಗೊಳ್ಳಲು ಸಾಧ್ಯವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ವೇದಿಕೆ ಜಿಲ್ಲಾಧ್ಯಕ್ಷ ಜಿ. ರಾಮನಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮಕ್ಕೂ ಮುನ್ನ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಮಾವೇಶದ ಅಂಗವಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಕಾರ್ಯಕರ್ತರು ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ಉದ್ಯಮಿ ಟಪಾಲ್ ಗಣೇಶ್, ವೇದಿಕೆ ರಾಜ್ಯಾಧ್ಯಕ್ಷ ಸಿದ್ದರಾಮಪ್ಪ ಸಿರಿಗೇರಿ, ಜಿಲ್ಲಾ ಉಪಾಧ್ಯಕ್ಷ ರತ್ನಯ್ಯ, ರಾಜೇಶ್ವರಿ, ಸಿದ್ದಲಿಂಗಮ್ಮ, ಹರಗಿನಡೋಣಿ ದೊಡ್ಡಬಸವನಗೌಡ ಜೆ. ಭಾಸ್ಕರ್, ಅನಿತಾ, ಸಿದ್ಧರಾಮಯ್ಯ, ಚಂದ್ರಶೇಖರ್, ವಿವಿಧ ಗ್ರಾಮಗಳ ನೂರಾರು ಯುವಕರು ಪಾಲ್ಗೊಂಡಿದ್ದರು.
ಜಿ. ಶಾಂತಾ ಮತ್ತು ಜಿ. ಹರೀಶ್‌ಕುಮಾರ್ ಗೌಡ ಪ್ರಾರ್ಥಿಸಿದರು. ಪರಶುರಾಮ ಸ್ವಾಗತಿಸಿದರು.