ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಳ್ಳಾರಿಯಲ್ಲಿ ಸಾರಿಗೆ ಸಂಸ್ಥೆ 3ನೇ ಘಟಕ

Vishwanath S
Updated On : 27 Dec 2013, 12:22 pm

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 26
ಸಾರಿಗೆ ಸಂಸ್ಥೆಯಲ್ಲಿ ನೌಕರರ ಕಿರಿಕಿರಿ, ಇರುವ ಸಿಬ್ಬಂದಿಗಳ ಮೇಲಿನ ಒತ್ತಡ ಕಡಿಮೆಗೊಳಿಸುವ ಉದ್ದೇಶದಿಂದ ರು. 4.11 ಕೋಟಿ ವೆಚ್ಚದಲ್ಲಿ ಬಳ್ಳಾರಿಯಲ್ಲಿ ಮೂರನೇ ಘಟಕ ಆರಂಭಿಸಲು ಟೆಂಡರ್ ಕರೆಯಲಾಗಿದೆ. ಬಳ್ಳಾರಿಯಲ್ಲಿ ಸಿಬ್ಬಂದಿ ಬಹು ದಿನಗಳ ಬೇಡಿಕೆಯಾದ ಸಿಬ್ಬಂದಿ ಕ್ಯಾಂಟೀನ್ ಹಾಗೂ ಸಹಕಾರ ಸಂಘದ ಕಟ್ಟಡ ನಿರ್ಮಾಣ ಕಾರ್ಯ ಚುರುಕುಗೊಂಡಿದೆ.
ಬಳ್ಳಾರಿಯಲ್ಲಿ ಸಾರಿಗೆ ಸಂಸ್ಥೆಯ ಕೇವಲ 2 ಘಟಕಗಳು ಮಾತ್ರ ಇದ್ದು, ಪ್ರತಿ ಘಟಕದ ಸಾಮರ್ಥ್ಯ 75 ಅನುಸೂಚಿಗಳು (ಶೆಡ್ಯೂಲ್‌ಗಳು) ಇರಬೇಕು. ಆದರೆ, ಎರಡು ಘಟಕಗಳಿಂದ ಸುಮಾರು 270 ಶೆಡ್ಯೂಲ್‌ಗಳಿರುವುದರಿಂದ ಕಾರ್ಯನಿರ್ವಹಿಸುವುದು ತುಂಬಾ ಕಷ್ಟವಾಗುತ್ತಿತ್ತು. ಸಿಬ್ಬಂದಿ ಮೇಲಿನ ಒತ್ತಡಕ್ಕೆ ಕಾರಣವಾಗುತ್ತಿತ್ತು. ಸರಿಯಾಗಿ ಶೆಡ್ಯೂಲ್ ನಿರ್ವಹಣೆ ಮಾಡುವುದು ಕಷ್ಟಸಾಧ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಇದೀಗ 3.5 ಎಕರೆ ವ್ಯಾಪ್ತಿಯಲ್ಲಿ ಬಳ್ಳಾರಿಯ 2ನೇ ಘಟಕದ ಮುಂದುಗಡೆಯೇ ರು. 4.11 ಕೋಟಿ ವೆಚ್ಚದಲ್ಲಿ ಮಾದರಿಯ ಮೂರನೇ ಘಟಕ ಆರಂಭಿಸುವ ಕಾರ್ಯಕ್ಕೆ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ಮುಂದಾಗಿದೆ.
ಬಳ್ಳಾರಿಯಲ್ಲಿ ಮೂರನೇ ಘಟಕ ಹಾಗೂ ಕುರುಗೋಡಿನಲ್ಲಿ ಒಂದು ಘಟಕ ಆರಂಭಿಸುವ ಚಿಂತನೆ ಹಾಗೂ ಸಿಬ್ಬಂದಿಗೆ ಕ್ಯಾಂಟೀನ್, ಸಹಕಾರ ಸಂಘ ಸ್ಥಾಪನೆಗೆ ಈಶಾನ್ಯ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ಜಿ.ಎನ್. ಶಿವಮೂರ್ತಿ ಮುಂದಾಗಿದ್ದಾರೆ. ಇದರಿಂದಾಗಿ ಬಳ್ಳಾರಿ ವಿಭಾಗದ ಸಿಬ್ಬಂದಿಗಳು ಕೊಂಚ ನಿಟ್ಟುಸಿರು ಬಿಡುವಂತಾಗಿದೆ.
ಜೆ ನರ್ಮ್ ಯೋಜನೆಯಲ್ಲಿ 3ನೇ ಘಟಕ- ಶಿವಮೂರ್ತಿ: ಕೇಂದ್ರದ ಜೆ ನರ್ಮ್ (ಜವಾಹರಲಾಲ್ ನೆಹರು ರಿವೈವಲ್ ನ್ಯಾಷನಲ್ ಮಿಷನ್ ಯೋಜನೆ) ಯೋಜನೆಯಡಿ ಸುಮಾರು ರು. 100 ಕೋಟಿ ಅನುದಾನ ಸಂಸ್ಥೆಗೆ ಲಭಿಸಿದ್ದು, ಯೋಜನೆಯಡಿ ಬಳ್ಳಾರಿ ನಗರಕ್ಕೆ ಬೇಡಿಕೆಗೆ ಅನುಗುಣವಾಗಿ ಇನ್ನೂ ಕೆಲ ನಗರ ಸಾರಿಗೆ ವಾಹನಗಳನ್ನು ನೀಡುವ ಯೋಜನೆ ಕೇಂದ್ರ ಕಚೇರಿಯಲ್ಲಿದೆ ಎಂದರು.
ಪ್ರಸ್ತುತ ಬಳ್ಳಾರಿ ನಗರದಲ್ಲಿ ಕಾರ್ಯನಿರ್ವಹಣೆಯಲ್ಲಿರುವ ಎರಡು ಘಟಕಗಳಲ್ಲಿ ಅನುಸೂಚಿಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಇನ್ನೊಂದು ಘಟಕದ ಅವಶ್ಯಕತೆ ಮನಗಂಡು, ಈಗಾಗಲೇ 3 ಘಟಕ ನಿರ್ಮಿಸುವ ಕುರಿತು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರ ಕಾಮಗಾರಿ ಪ್ರಾರಂಭಗೊಳ್ಳಲಿದೆ. ಇದೇ ರೀತಿ ಕುರುಗೋಡಿನಲ್ಲಿಯೂ ಘಟಕ ನಿರ್ಮಾಣಕ್ಕೆ ಮಂಜೂರಾತಿ ದೊರಕಿದ್ದು, ಶೀಘ್ರ ಪ್ರಕ್ರಿಯೆ ಪ್ರಾರಂಭಗೊಳ್ಳಲಿದೆ. ಇನ್ನು ಕ್ಯಾಂಟೀನ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಈಶಾನ್ಯ ಸಾರಿಗೆ ಸಂಸ್ಥೆಯ ಗುಲ್ಬರ್ಗಾ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ ಅವರು ತಿಳಿಸಿದ್ದಾರೆ.
ಒತ್ತಡ ಕಡಿಮೆಗೊಳಿಸುವ 3ನೇ ಘಟಕ: 3ನೇ ಘಟಕದಿಂದ 70 ಬಸ್‌ಗಳು ಹೊಸದಾಗಿ ಬಳ್ಳಾರಿಗೆ ಬರುತ್ತವೆ. ಇನ್ನು ಘಟಕಕ್ಕೆ ತಕ್ಕಂತೆ ಆಡಳಿತಾತ್ಮಕ ಸಿಬ್ಬಂದಿ, ಮ್ಯೆಕಾನಿಕ್, ನಿರ್ವಾಹಕರು, ಚಾಲಕರು ಬರುವುದರಿಂದ ಸಿಬ್ಬಂದಿ ಮೇಲೆ ಒತ್ತಡ ಕಡಿಮೆಯಾಗುವ ಸಾಧ್ಯತೆ ಇದೆ. ಇದೀಗ ಬಳ್ಳಾರಿಯ ಎರಡು ಘಟಕಗಳು 270 ಶೆಡ್ಯೂಲ್‌ಗಳಿದ್ದು, 3-4 ಘಟಕಗಳು ನಿರ್ವಹಣೆಯ ಜವಾಬ್ದಾರಿಯನ್ನು ಎರಡು ಘಟಕಗಳು ನಿರ್ವಹಿಸುತ್ತಿದ್ದು, ಮೂರನೇ ಘಟಕದಿಂದ ಜವಾಬ್ದಾರಿ ಕಡಿಮೆಯಾಗಲಿದೆ.
ರು. 6 ಲಕ್ಷ ಠೇವಣಿ: ಸಾರಿಗೆ ಸಂಸ್ಥೆ ಉತ್ತಮ ಸೇವೆ ಕೊಡುವುದಕ್ಕೆ ಇದು ಸಾಕಷ್ಟು ಸಹಕಾರಿಯಾಗಲಿದೆ. ಕುರುಗೋಡಿನಲ್ಲಿ ಘಟಕ ಆರಂಭಿಸಲು ಈಗಾಗಲೇ ಭೂಸ್ವಾಧೀನಕ್ಕೆ ಮುಂದಾಗಿದ್ದು, ಕಂದಾಯ ಇಲಾಖೆಯ ರು. 6 ಲಕ್ಷವನ್ನು ಸಾರಿಗೆ ಸಂಸ್ಥೆ ಠೇವಣಿ ಇಟ್ಟಿದೆ.
ಸಿಬ್ಬಂದಿ ಒತ್ತಡ ಕಡಿಮೆ: ಬಳ್ಳಾರಿ ವಿಭಾಗದ ವ್ಯವಸ್ಥಾಪಕ ನಿಯಂತ್ರಣಾಧಿಕಾರಿ ದುರ್ಗಪ್ಪ ಮಾತನಾಡಿ, ಬಳ್ಳಾರಿಯಲ್ಲಿ ಮೂರನೇ ಘಟಕ ಆರಂಭಕ್ಕೆ ಟೆಂಡರ್ ಪೂರ್ಣಗೊಂಡಿದೆ. ಶೀಘ್ರ ಕಾಮಗಾರಿ ಆರಂಭವಾಗಲಿದೆ. ಇದರಿಂದಾಗಿ ಎರಡು ಘಟಕಗಳ ಮೇಲಿನ ಒತ್ತಡ ಕಡಿಮೆಯಾಗಿ, ಉತ್ತಮ ರೀತಿಯಲ್ಲಿ ಸಾರ್ವಜನಿಕರಿಗೆ ಸೇವೆ ಕೊಡಲು ಅನುಕೂಲವಾಗುತ್ತದೆ. ಸಿಬ್ಬಂದಿ ಮೇಲಿನ ಒತ್ತಡವು ಕಡಿಮೆಯಾಗಲಿದೆ ಎಂದು ತಿಳಿಸಿದರು.
ಇದೀಗ ಬಳ್ಳಾರಿ ಸಾರಿಗೆ ಸಂಸ್ಥೆಯಲ್ಲಿರುವ 1,300 ಸಿಬ್ಬಂದಿಗಳ ಬೇಡಿಕೆಗಳ ಮನಗಂಡಿರುವ ಈಶಾನ್ಯ ವಿಭಾಗದ ವ್ಯವಸ್ಥಾಪಕ ನಿರ್ದೇಶಕರು, ಇದೀಗ ಸಿಬ್ಬಂದಿಗೆ ಕ್ಯಾಂಟೀನ್ ಹಾಗೂ ಸಹಕಾರ ಸಂಘ ಪ್ರೋತ್ಸಾಹಿಸಲು ಎರಡು ಕಟ್ಟಡ ನಿರ್ಮಾಣ ಕಾರ್ಯ ಚಾಲ್ತಿಯಲ್ಲಿದೆ. ಈ ಮೂಲಕ ಅಧಿಕಾರಿ-ಸಿಬ್ಬಂದಿ ನಡುವೆ ಆರೋಗ್ಯವಂತ ವಾತಾವರಣ ಕಲ್ಪಿಸಲು ಮುಂದಾಗಿದೆ.
ಕನ್ನಡಪ್ರಭದಲ್ಲಿ ವರದಿಗಳು ಪ್ರಕಟವಾದ ಹಿನ್ನೆಲೆಯಲ್ಲಿ ಆಡಳಿತಾತ್ಮಕ ವ್ಯವಸ್ಥೆ ಚುರುಕುಗೊಂಡಿದೆ. ಈಗಾಗಲೇ 3ನೇ ಘಟಕ ಆರಂಭಕ್ಕೆ ಟೆಂಡರ್ ಪೂರ್ಣಗೊಂಡಿದೆ. ಈಗಲಾದರೂ, ಅಧಿಕಾರಿಗಳು ಕಾರ್ಮಿಕರೊಂದಿಗೆ ಉತ್ತಮ ಕೈಗಾರಿಕೆ ಬಾಂಧವ್ಯಗಳನ್ನು ಇಟ್ಟುಕೊಂಡು, ಕಾರ್ಮಿಕರ ಸಮಸ್ಯೆಗಳ ಕುರಿತಾಗಿ ಪ್ರತಿಷ್ಠೆ ತೋರದೆ, ಸಂಘಟನೆಗಳ ಮುಖಂಡರೊಂದಿಗೆ ಚರ್ಚಿಸಿ, ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದು ಕೆಎಸ್ಸಾರ್‌ಟಿಸಿ ಸ್ಪಾಫ್ ಆಂಡ್ ವರ್ಕರ್ಸ್ ಫೆಡರೇಷನ್ (ಎಐಟಿಸಿಯು) ಅಧ್ಯಕ್ಷ ಎಚ್.ಎ. ಆದಿಮೂರ್ತಿ ತಿಳಿಸಿದ್ದಾರೆ.
ಕೇಂದ್ರದ ಜೆ ನರ್ಮ್ (ಜವಾಹರಲಾಲ್ ನೆಹರು ರಿವೈವಲ್ ನ್ಯಾಷನಲ್ ಮಿಷನ್) ಯೋಜನೆಯಡಿ ಸುಮಾರು ರು. 100 ಕೋಟಿ ಅನುದಾನ ಸಂಸ್ಥೆಗೆ ಲಭಿಸಿದ್ದು, ಯೋಜನೆಯಡಿ ಬಳ್ಳಾರಿ ನಗರಕ್ಕೆ ಬೇಡಿಕೆಗೆ ಅನುಗುಣವಾಗಿ ಇನ್ನೂ ಕೆಲ ನಗರ ಸಾರಿಗೆ ವಾಹನಗಳನ್ನು ನೀಡುವ ಯೋಜನೆ ಕೇಂದ್ರ ಕಚೇರಿಯಲ್ಲಿದೆ. ಪ್ರಸ್ತುತ ಬಳ್ಳಾರಿ ನಗರದಲ್ಲಿ ಕಾರ್ಯನಿರ್ವಹಣೆಯಲ್ಲಿರುವ ಎರಡು ಘಟಕಗಳಲ್ಲಿ ಅನುಸೂಚಿಗಳ ಸಂಖ್ಯೆ ಹೆಚ್ಚಾಗಿರುವ ಕಾರಣ ಇನ್ನೊಂದು ಘಟಕದ ಅವಶ್ಯಕತೆ ಮನಗಂಡು, ಈಗಾಗಲೇ 3 ಘಟಕ ನಿರ್ಮಿಸುವ ಕುರಿತು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರ ಕಾಮಗಾರಿ ಪ್ರಾರಂಭಗೊಳ್ಳಲಿದೆ.
- ಜಿ.ಎನ್. ಶಿವಮೂರ್ತಿ,
ಈಶಾನ್ಯ ಸಾರಿಗೆ ಸಂಸ್ಥೆ ಗುಲ್ಬರ್ಗ ವ್ಯವಸ್ಥಾಪಕ, ನಿರ್ದೇಶಕ



-ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement