ಮೂಢನಂಬಿಕೆಪ್ರತಿಬಂಧಕ ಕಾಯ್ದೆ ಜಾರಿಗಾಗಿ ಪ್ರತಿಭಟನೆ
ಹೊಸಪೇಟೆ: ಕರ್ನಾಟಕ ಮೂಢನಂಬಿಕೆ ಪ್ರತಿಬಂಧಕ ಕಾಯ್ದೆಯ ಜಾರಿಗೆ ಆಗ್ರಹಿಸಿ ನಗರದ ವಿವಿಧ ಪ್ರಗತಿಪರ ಸಂಘಟನೆಗಳು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದವು. ಬಳಿಕ ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಸಿಪಿಐಎಂನ ಸಂಚಾಲಕ ಎ. ಕರುಣಾನಿಧಿ ಮಾತನಾಡಿ, ಕರಡು ರಚನೆಗೆ 13 ಅಂಶಗಳನ್ನು ಒಳಗೊಂಡ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ಈ ವರದಿ ಓದದೇ ಕೆಲ ಮೂಲಭೂತವಾದಿಗಳು ಭಾರಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಇದಕ್ಕೆ ಸರ್ಕಾರ ಮಣಿಯದೆ ಈ ಕಾಯಿದೆ ಅನುಷ್ಠಾನಕ್ಕೆ ಮುಂದಾಗಬೇಕು. ಕರಡು ಮಸೂದೆ ಮಂಡಿಸಿ ಒಪ್ಪಿಗೆ ಪಡೆಯಬೇಕೆಂದು ಆಗ್ರಹಿಸಿದರು. ಡಿವೈಎಫ್‌ಐ ಮುಖಂಡ ಬಿ. ಮಹೇಶ್ ಮಾತನಾಡಿ, ಅಜ್ಞಾನ ಮತ್ತು ಮೂಢನಂಬಿಕೆಗಳನ್ನು ಅಸ್ತ್ರ ಮಾಡಿಕೊಂಡು ನರಬಲಿ, ಪಂಕ್ತಿ ಭೇದ, ಮಡೆಸ್ನಾನ ಹವನ, ಹೋಮದಂತಹ ಅನಿಷ್ಟ ಪದ್ಧತಿಗಳನ್ನು ಪೋಷಿಸಿಕೊಂಡು ಬರುತ್ತಿದ್ದಾರೆ. ಅದರ ನಿಯಂತ್ರಣಕ್ಕೆ ಈ ಮಸೂದೆ ನೆರವಾಗುತ್ತದೆ. ಸರ್ಕಾರ ಮೀನಮೇಷ ಎಣಿಸಿದೆ ಕಾಯ್ದೆಯನ್ನು ವಿಧಾನಸಭೆಯಲ್ಲಿ ಮಂಡಿಸಿ ಒಪ್ಪಿಗೆ ಪಡೆಯಬೇಕು ಎಂದು ಒತ್ತಾಯಿಸಿದರು. ಸಿಐಟಿಯುನ ಮುಖಂಡ ಆರ್. ಭಾಸ್ಕರ್ ರೆಡ್ಡಿ, ಡಿವೈಎಫ್‌ನ ಮುಖಂಡರಾದ ಯಲ್ಲಾಲಿಂಗ, ಕೆ. ರಮೇಶ್, ಎಸ್‌ಎಫ್‌ಐನಿಂದ ಪಂಪಾನಂದ, ಶರತ್, ವಂಸತ ಕಲಾಲ್, ಕಟ್ಟಡ ಕಾರ್ಮಿಕರ ಸಂಘದಿಂದ ಖಾಜಾಪೀರ್, ರಾಮಾಂಜಿನಿ, ಪಾಂಡೆಯೆನ್, ವಿಜಯನಗರ ರಕ್ಷಣಾ ವೇದಿಕೆಯ ಮುಖಂಡರಾದ ಕಟಗಿ ಜಂಬಯ್ಯ ನಾಯಕ, ಕೆ. ರಾಮಪ್ಪ, ಸ್ಥಳೀಯ ಮುಖಂಡ ಕೆ. ಉಮಾಪತಿ, ಕರಿಯಪ್ಪ ಗುಡಿಮನಿ, ವಿವಿಧ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಪ್ರತಿಭಟನೆಯಲ್ಲಿದ್ದರು.