ಟಿಎಪಿಸಿಎಂಎಸ್‌ನಲ್ಲೇ ಪಡಿತರ ವಿತರಣೆಗೆ ಆಗ್ರಹಿಸಿ ಫಲಾನುಭವಿಗಳ ಮುತ್ತಿಗೆ
ಹೂವಿನಹಡಗಲಿ: ಪಟ್ಟಣದ ಪಡಿತರ ಫಲಾನುಭವಿಗಳು ಸಮರ್ಪಕ ಆಹಾರಧಾನ್ಯ ವಿತರಣೆಗೆ ಬೇರೆ ಸಿಬ್ಬಂದಿಗಳನ್ನು ನೇಮಕ, ಟಿಎಪಿಸಿಎಂಎಸ್‌ನಲ್ಲೇ ವಿತರಣೆ ಮಾಡುವಂತೆ ಆಗ್ರಹಿಸಿ ಇಲ್ಲಿನ ಟಿಎಪಿಸಿಎಂಎಸ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿರುವ ಘಟನೆ ಶುಕ್ರವಾರ ನಡೆದಿದೆ.
ಆಹಾರ ಇಲಾಖೆ ವಿತರಣೆ ಮಾಡಿರುವ ಎಲ್ಲ ಪಡಿತರ ಕಾರ್ಡ್‌ಗಳಿಗೂ ಆಹಾರ ಧಾನ್ಯ ನೀಡಬೇಕು. ಕಳೆದ 30 ವರ್ಷಗಳಿಂದ ಇದೇ ನ್ಯಾಯಬೆಲೆ ಅಂಗಡಿಯಲ್ಲಿ ಆಹಾರಧಾನ್ಯ ವಿತರಣೆ ಮಾಡಲಾಗುತ್ತಿದೆ. ಈಗ ಸರ್ಕಾರ ದಿಢೀರ್ ಬದಲಾಯಿಸಿ ಆರ್‌ಎಸ್‌ಎಸ್‌ಎನ್‌ನಲ್ಲಿ ಎಲ್ಲರ ಆಹಾರ ಪಡೆಯಬೇಕೆಂದು ಕ್ರಮ ಖಂಡಿಸಿದರು.
ಟಿಎಪಿಸಿಎಂಎಸ್‌ಗೆ ಮುತ್ತಿಗೆ ಹಾಕಿರುವ ಮಹಿಳೆಯರು ನ್ಯಾಯಬೆಲೆ ಸೊಸೈಟಿಯ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡು, 30 ವರ್ಷಗಳಿಂದ ಈ ಸೊಸೈಟಿಯಲ್ಲಿ ಯಾವ ಅನ್ಯಾಯವಾಗಿಲ್ಲ. ಈಗ ತಾವು ಬಂದ ಮೇಲೆ ಸಾಕಷ್ಟು ಅವ್ಯವಹಾರ ನಡೆದು ಬಡವರಿಗೆ ಅಕ್ಕಿ ಗೋದಿ ಸಿಗದಂತೆ ಅನ್ಯರ ಪಾಲುಗುತ್ತಿದೆ ಎಂದು ದೂರಿದರು. ತಾವು ಯಾವುದೇ ಕಾರಣಕ್ಕೂ ಆರ್‌ಎಸ್‌ಎಸ್‌ಎನ್‌ಗೆ ಹೋಗಿ ಪಡಿತರ ಆಹಾರ ಧಾನ್ಯ ಪಡೆಯುವುದಿಲ್ಲ. ಅದೇ ಸಿಬ್ಬಂದಿ ಇದೇ ನ್ಯಾಯಬೆಲೆ ಅಂಗಡಿಗೆ ಬಂದು ವಿತರಣೆ ಮಾಡಬೇಕು. ಮುಂಬರುವ ದಿನಗಳಲ್ಲಿ ಈ ವ್ಯವಸ್ಥೆಯನ್ನು ಬದಲಾವಣೆ ಮಾಡಿದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದರು.
ಪರವಾನಗಿ ರದ್ದು: ಇಲ್ಲಿನ ಟಿಎಪಿಸಿಎಂಎಸ್‌ನಲ್ಲಿ ಸುಮಾರು 64 ಪಡಿತರ ಕಾರ್ಡ್‌ಗಳ 14 ಕ್ವಿಂಟಲ್ ಅಕ್ಕಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂಬ ವರದಿ ಆಧಾರದ ಮೇಲೆ ಜಿಲ್ಲಾಧಿಕಾರಿಗಳು ಆಹಾರಧಾನ್ಯ ಪೂರೈಕೆ ಮಾಡದೇ ನ್ಯಾಯಬೆಲೆ ಅಂಗಡಿ ಪರವಾನಗಿ ರದ್ದು ಮಾಡಿದ್ದಾರೆಂದು ತಹಸೀಲ್ದಾರ್ ಎ.ಬಿ. ವಿಜಯಕುಮಾರ ತಿಳಿಸಿದರು. ಇದೇ ಟಿಎಪಿಸಿಎಂಎಸ್‌ನಲ್ಲೇ ಶನಿವಾರದಿಂದ ಆಹಾರ ಧಾನ್ಯ ವಿತರಿಸಲಾಗುವುದು, ಆರ್‌ಎಸ್‌ಎಸ್‌ಎನ್‌ನಲ್ಲಿ ವಿತರಣೆ ಮಾಡಲು ತೊಂದರೆ ಇದ್ದು, ಜತೆಗೆ ಆಹಾರಧಾನ್ಯ ಸಂಗ್ರಹಿಸಲು ಸ್ಥಳದ ಕೊರತೆ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಹಸೀಲ್ದಾರ್ ಹೇಳಿದಾಗ ಪ್ರತಿಭಟನಾಕಾರರು ತಮ್ಮ ಪಟ್ಟನ್ನು ಸಡಿಲಿಸಿ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.