ಕೊಟ್ಟೂರು-ಚಿತ್ರದುರ್ಗ ರೇಲ್ವೆ ಮಾರ್ಗ ಸರ್ವೆ ಪೂರ್ಣ
ಕನ್ನಡಪ್ರಭ ವಾರ್ತೆ, ಕೊಟ್ಟೂರು, ಡಿ. 28
ಧಾರ್ಮಿಕ ಪ್ರಸಿದ್ಧ ತಾಣ ಕೊಟ್ಟೂರು ಮತ್ತು ಐತಿಹಾಸಿಕ ನಗರ ಚಿತ್ರದುರ್ಗ ನಡುವೆ ನೇರ ಸಂಪರ್ಕ ಕಲ್ಪಿಸುವ ರೈಲು ಮಾರ್ಗ ಬೇಕೆಂಬ ಹಲವು ವರ್ಷಗಳ ಬೇಡಿಕೆಗೆ ಇದೀಗ ಕಾಲ ಕೂಡಿ ಬಂದಿದೆ. ಈ ನೂತನ ರೈಲು ಮಾರ್ಗದ ಸರ್ವೇ ಕಾರ್ಯವನ್ನು ಕೈಗೊಂಡಿದ್ದ ನೈಋತ್ಯ ರೇಲ್ವೆ ವಲಯ ಸರ್ವೇ ಪ್ರಕ್ರಿಯೆ ಮುಗಿಸಿ ಅನುಷ್ಠಾನಗೊಳಿಸಲು ಸರ್ಕಾರವನ್ನು ಎದುರು ನೋಡುತ್ತಿದೆ.
ಕೊಟ್ಟೂರು-ಹರಿಹರ ರೈಲು ಮಾರ್ಗಕ್ಕೆ ಅಂತಿಮ ರೂಪು ಸಿದ್ಧಗೊಳ್ಳುತ್ತಿರುವಂತೆಯೇ ಮತ್ತೊಂದು ನೂತನ ರೈಲು ಮಾರ್ಗ ಕೊಟ್ಟೂರು-ಜಗಳೂರು-ಚಿತ್ರದುರ್ಗ ಮಾರ್ಗದ ಸರ್ವೇ ಕಾರ್ಯದ ವರದಿ ಸಿದ್ಧಗೊಂಡಿರುವುದು ಈ ಭಾಗದ ಜನರಲ್ಲಿ ಹೊಸ ಬಗೆಯ ಆಶಯಗಳನ್ನು ಹುಟ್ಟು ಹಾಕಿದೆ.
ಈ ಮಾರ್ಗದ ಮೂಲಕ ಗ್ರಾಮೀಣ ಪ್ರದೇಶದ ಜನ ಸಮುದಾಯ ಗುಳೇ ಹೋಗದೆ ಇಲ್ಲಿಯೇ ನೆಲೆವೂರುವಂತೆ ಮಾಡುವ ಮಹತ್ಕಾರ್ಯ ಸಿದ್ಧಗೊಳಿಸುವ ಜವಾಬ್ದಾರಿ ಇದೀಗ ಜನಪ್ರತಿನಿಧಿಗಳ ಮೇಲಿದೆ.
ರು. 555 ಕೋಟಿ ಸರ್ವೇ ಅಂದಾಜು: ಬಹು ಪ್ರಸ್ತಾಪಿತ ಕೊಟ್ಟೂರು- ಜಗಳೂರು- ಚಿತ್ರದುರ್ಗ ನಡುವಿನ 78 ಕಿ.ಮೀ. ಇದ್ದು, ಕೊಟ್ಟೂರು-ಉಜ್ಜಿನಿ-ಹೊಸಕೆರೆ-ಜಗಳೂರು-ತೋರಣಕಟ್ಟಿ-ಚಿಕ್ಕನಹಳ್ಳಿ ಮೂಲಕ ಈ ಮಾರ್ಗ ಹಾದು ಹೋಗಲೆಂದು ನೈಋತ್ಯ ರೇಲ್ವೆ ವಲಯ ಅಧಿಕಾರಿಗಳು ಸರ್ವೇ ಕಾರ್ಯ ಕೈಗೊಂಡಿದ್ದು, ಇದರ ಸರ್ವೇ ವರದಿ ಇದೀಗ ಬೆಂಗಳೂರಿನಲ್ಲಿನ ಕಾರ್ಯಾಲಯ ಸೇರಿಕೊಂಡಿದೆ. 2005-06ನೇ ಸಾಲಿನ ರೇಲ್ವೆ ಬಜೆಟ್ನಲ್ಲಿ ಆಗಿನ ರೈಲು ಮಂತ್ರಿ ಲಾಲೂ ಪ್ರಸಾದ್ ಯಾದವ್ ಈ ಮಾರ್ಗದ ಸರ್ವೇ ಕಾರ್ಯ ಕೈಗೊಳ್ಳಲು ರು. 4 ಕೋಟಿ ಮೀಸಲಿರಿಸಿದ್ದರು.
ಈ ಮಾರ್ಗದ ರೇಲ್ವೆ ಸರ್ವೇ ಕಾರ್ಯ ಸುಮಾರು 10 ವರ್ಷಗಳ ಹಿಂದೆ 2 ಬಾರಿ ನಡೆದಿದ್ದರೂ ಕೇವಲ ದಾಖಲಾತಿಗೆ ಈ ಕಾರ್ಯ ಸೀಮಿತಗೊಂಡಿತ್ತು. ಆದರೆ, ಇದೀಗ ಈ ಮಾರ್ಗ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಕೊನೆಯ ಸರ್ವೇ ಕಾರ್ಯ ಇದೀಗ ಆಗಿದೆ. ರು. 555 ಕೋಟಿ ಯೋಜನೆಯ ಅಂದಾಜನ್ನು ಸರ್ವೇ ಕಾರ್ಯದಲ್ಲಿ ಅಧಿಕಾರಿಗಳು ನಮೂದಿಸಿದ್ದಾರೆ.
ಸುಲಭ ಸಂಚಾರ: ಕೊಟ್ಟೂರು-ಹರಿಹರ ರೈಲು ಮಾರ್ಗದ ಜತೆಗೆ ಕೊಟ್ಟೂರು-ಚಿತ್ರದುರ್ಗ-ತುಮಕೂರಿಗೆ ನೇರ ಮಾರ್ಗ ನಿರ್ಮಾಣವಾದರೆ ಬೆಂಗಳೂರಿನಿಂದ ಐತಿಹಾಸಿಕ ನಗರವಾದ ಚಿತ್ರದುರ್ಗಕ್ಕೆ ಮತ್ತು ಧಾರ್ಮಿಕ ಕ್ಷೇತ್ರಗಳಾದ ಕೊಟ್ಟೂರು-ಉಜ್ಜಿನಿ ಮತ್ತು ಜಗತ್ಪ್ರಸಿದ್ಧ ತಾಣ ಹಂಪಿಗೆ ಹೊಸಪೇಟೆ ಮೂಲಕ ನೇರ ಸಂಪರ್ಕ ಕಲ್ಪಿಸಿದಂತಾಗುತ್ತದೆ.
ಸದ್ಯ ಬಳ್ಳಾರಿ, ಚಿತ್ರದುರ್ಗ ಜಿಲ್ಲಾ ಕೇಂದ್ರಗಳಿಗೆ ದೂರದ ಪ್ರಯಾಣವಾಗಿದೆ. ಚಿತ್ರದುರ್ಗದಿಂದ ಬೆಂಗಳೂರಿಗೆ ಈಗಿನ ರಸ್ತೆ ದೂರ 195 ಕಿ.ಮೀ. ಆಗಿದ್ದರೆ ಅದೇ ದೂರವನ್ನು ರೈಲು ಮೂಲಕ ಕ್ರಮಿಸಲು ಮುಂದಾದರೆ 314 ಕಿ.ಮೀ ಬೇಕಾಗುತ್ತದೆ. ಕೊಟ್ಟೂರು-ಜಗಳೂರು-ಚಿತ್ರದುರ್ಗ ರೈಲು ಮಾರ್ಗ ಅನುಷ್ಠಾನಗೊಂಡಲ್ಲಿ ಈ ಸುತ್ತು ಬಳಸುವ ರೈಲು ಮಾರ್ಗದ ಕಿರಿ ಕಿರಿ ಪ್ರಯಾಣಿಕರಿಗೆ ಇಲ್ಲದಂತಾಗುತ್ತದೆ.
ಲಾಭದಾಯಕ: ಹೈದ್ರಾಬಾದ್ ಕರ್ನಾಟಕದಿಂದ ಸಾಗಿಸಲಾಗುವ ಎಲ್ಲ ಬಗೆಯ ಸರಂಜಾಮು ಮತ್ತು ಬಳ್ಳಾರಿ, ದಾವಣಗೆರೆ ಜಿಲ್ಲೆಯ ಕೆಲ ಭಾಗದಲ್ಲಿ ಯಥೇಚ್ಛವಾಗಿ ಬೆಳೆಯುವ ಈರುಳ್ಳಿ ಬೆಂಗಳೂರು ಮತ್ತು ತಮಿಳುನಾಡಿನಲ್ಲಿ ಒಳ್ಳೆಯ ಮಾರುಕಟ್ಟೆ ಪಡೆದಿದೆ. ಸುಗ್ಗಿ ಕಾಲದಲ್ಲಿ ದಿನಂಪ್ರತಿ ನೂರಾರು ಲಾರಿ ಲೋಡು ಸಾರಿಗೆ ಮೂಲಕ ಸಾಗಾಣೆಯಾಗುತ್ತದೆ.
ಇದನ್ನೇ ಬಂಡವಾಳವನ್ನಾಗಿಸಿಕೊಂಡ ಲಾರಿ ಮಾಲೀಕರು ಈರುಳ್ಳಿ ಹೆಚ್ಚಾಗಿ ಬೆಳೆಯುವ ಸೀಜನ್ನಿನಲ್ಲಿ ದುಬಾರಿ ದರ ನಿಗದಿಪಡಿಸುವ ಮೂಲಕ ರೈತರಿಗೆ ಹೊರೆಯಾಗಿದ್ದಾರೆ. ರೈಲು ಮಾರ್ಗ ಚಾಲನೆಗೊಂಡರೆ ಇಮ್ಮಡಿಯ ಲಾಭ ರೈತರಿಗೆ ದೊರಕಿದಂತಾಗುತ್ತದೆ. ಎಲ್ಲ ದೃಷ್ಟಿಯಿಂದ ಈ ರೈಲು ಮಾರ್ಗ ಲಾಭದಾಯಕ ಎಂಬುದು ಈಗಾಗಲೇ ಪ್ರಚಲಿತಗೊಂಡಿದೆ.
ಈ ಭಾಗದ ರೈತರು ಪ್ರತಿ ವರ್ಷ ಬೆಳೆಯುವ 25 ಸಾವಿರ ಟನ್ ಮೆಕ್ಕೆಜೋಳ, 30 ಸಾವಿರ ಬೆಲೆಗಳ ಪ್ರಮಾಣದಷ್ಟು ಹತ್ತಿ ಹರಳೆ ಹೊರ ರಾಜ್ಯಗಳಿಗೆ ರಫ್ತಾಗುತ್ತಿದೆ ಎಂಬ ಅಂಶವನ್ನು ಪ್ರಮುಖವಾಗಿ ಪ್ರಸ್ತಾಪಿಸಬಹುದಾಗಿದೆ. 25 ಸಾವಿರ ಟನ್ ಸಿಮೆಂಟ್, 30 ಸಾವಿರ ಟನ್ ರಸಗೊಬ್ಬರ ವಾರ್ಷಿಕವಾಗಿ ಆಮದಾಗುತ್ತದೆ.
ರೇಲ್ವೆ ಯೋಜನೆಗಳು ನಿರ್ದಿಷ್ಟ ಕಾಲದಲ್ಲಿ ಅನುಷ್ಠಾನಗೊಳ್ಳದೇ ಆಮದು ಮತ್ತು ರಫ್ತು ವೆಚ್ಚದ ದಿನ ದಿನಕ್ಕೂ ಹೆಚ್ಚಾಗುತ್ತಿದೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ ಕೊಟ್ಟೂರು-ಚಿತ್ರದುರ್ಗ ನೂತನ ಮಾರ್ಗ ಸರ್ವೇ ನಡೆದಿರುವುದು ಸ್ವಾಗತಾರ್ಹ ಅಂಶ. ಈ ಮಾರ್ಗದ ಕಾಮಗಾರಿಗೆ ಶೀಘ್ರ ಹಸಿರು ನಿಶಾನೆ ದೊರಕಿಸಿಕೊಡುವತ್ತ ಜನಪ್ರತಿನಿಧಿಗಳು ತಕ್ಷಣ ತೊಡಗಿಸಿಕೊಳ್ಳಬೇಕೆಂಬುದು ಜನತೆಯ ಆಶಯ.
15 ವರ್ಷಗಳಿಂದ ಕುಂಟುತ್ತಾ ಸಾಗಿದ್ದ ಕೊಟ್ಟೂರು- ಹರಿಹರ ರೈಲು ಮಾರ್ಗದ ಸೇವೆ ಈಗಲಾದರೂ ದೊರಕುವ ನಿಟ್ಟಿನತ್ತ ಮುಂದಾಗಿರುವ ಈ ಗಳಿಗೆಯಲ್ಲಿಯೇ ಕೊಟ್ಟೂರು-ಚಿತ್ರದುರ್ಗ ರೈಲು ಮಾರ್ಗದ ಸರ್ವೇ ಕಾರ್ಯ ನಡೆದು ಮುಕ್ತಾಯಗೊಂಡಿರುವುದು ಉತ್ತಮ ಬೆಳವಣಿಗೆ.
ಈ ಮಾರ್ಗದ ಮೂಲಕ ರಾಜಧಾನಿ ಬೆಂಗಳೂರಿನಿಂದ ಹಂಪಿಗೆ ನೇರ ಸಂಪರ್ಕ ಕಲ್ಪಿಸಿದಂತಾಗುತ್ತದೆ. ಈ ಎಲ್ಲ ಕ್ರಿಯೆಗಳು ಚಾಲ್ತಿ ಪಡೆಯಬೇಕಿದ್ದರೆ ಜನಪ್ರತಿನಿಧಿಗಳು ತಕ್ಷಣ ತೊಡಗಿಸಿಕೊಳ್ಳಬೇಕು ಎಂದು ಹೋರಾಟ ಬಿ. ಪ್ರವೀಣ ಕುಮಾರ್ ಜೈನ್ ಒತ್ತಾಯಿಸಿದ್ದಾರೆ.
ಕೊಟ್ಟೂರಿನ ಜಗಳೂರು ಮಾರ್ಗವಾಗಿ ಚಿತ್ರದುರ್ಗಕ್ಕೆ ರೈಲು ಸಂಪರ್ಕ ಕಲ್ಪಿಸುವುದರ ಮೂಲಕ ಈ ಭಾಗದ ಜನರಲ್ಲಿ ಆರ್ಥಿಕ ಸ್ವಾವಲಂಬಿತನ ತರಬೇಕು. ಈ ಕಾರಣಕ್ಕಾಗಿಯೇ ಈ ಮಾರ್ಗದ ರೈಲು ಅನುಷ್ಠಾನಕ್ಕೆ ಜನಪ್ರತಿನಿಧಿಗಳು ಶೀಘ್ರ ಇಚ್ಛಾಶಕ್ತಿ ತೋರಬೇಕು.
- ವಿಶ್ವನಾಥ ಅಡಿಗ
- ಜಿ. ಸೋಮಶೇಖರ