ಕೋರಂ ಕೊರತೆ: ಜಿಪಂ ವಿಶೇಷ ಸಭೆ ರದ್ದು
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 28
ಬಿಜೆಪಿ ಸದಸ್ಯರು ಸಭೆ ಬಹಿಷ್ಕರಿಸಿದ ಹಿನ್ನೆಲೆಯಲ್ಲಿ ಡಿ. 18ರಂದು ರದ್ದಾಗಿದ್ದ ಜಿಪಂ ವಿಶೇಷ ಸಾಮಾನ್ಯ ಸಭೆ, ಶನಿವಾರ ಕರೆದಿದ್ದ ಸಭೆಯೂ ಕೋರಂ ಇಲ್ಲದೆ ರದ್ದಾಯಿತು. ಆದರೆ, ಬಿಜೆಪಿ ಸದಸ್ಯರು ಗೈರು ಹಾಜರಾದ ಹಿನ್ನೆಲೆಯಲ್ಲಿ ಕೋರಂ ಕೊರತೆಯಿಂದಾಗಿ ಸಭೆ ರದ್ಧಾಯಿತು.
ಮಧ್ಯಾಹ್ನ 1ರ ವರೆಗೆ ಸಭೆ ನಡೆಸುವುದಕ್ಕೆ ಕಾದು ನೋಡಿದ ಜಿಪಂ ಅಧ್ಯಕ್ಷರು, ಕೊನೆಗೆ ಸಭೆಯನ್ನು ಅನಿವಾರ್ಯವಾಗಿ ಮುಂದೂಡಿದರು. 2014, ಜ. 6ರಂದು ಮತ್ತೊಂದು ಸಭೆ ಕರೆಯಲು ನಿರ್ಧರಿಸಲಾಯಿತು. ಅಧ್ಯಕ್ಷರ ಅನುಮತಿ ಪಡೆದು ಜಿಪಂ ಸಿಇಒ ಮಂಜುನಾಥ ನಾಯ್ಕ ಅವರು ಸಭೆ ಮುಂದೂಡಿದ ಬಗ್ಗೆ ಘೋಷಿಸಿದರು. ನಿರ್ದಿಷ್ಟ ವಿಷಯಗಳನ್ನಿಟ್ಟುಕೊಂಡು ಜ. 6ರಂದು ಸಭೆ ನಡೆಸಲಾಗುವುದು. ಎಲ್ಲ ಸದಸ್ಯರು ತಪ್ಪದೆ ಭಾಗವಹಿಸಬೇಕು ಎಂದು ಸಿಇಒ ತಿಳಿಸಿದರು.
ಜಿಪಂ ಅಧ್ಯಕ್ಷೆ ಶೋಭಾ ಬೆಂಡಿಗೇರಿ ಮಾತನಾಡಿ, ಡಿ. 18ರಂದು ಬಿಜೆಪಿ ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತಾವು ಸಿಂಧವಾಳ, ಮಿಂಚೇರಿ, ಸಂಜೀವರಾಯನಕೋಟೆ, ರೂಪನಗುಡಿ ಇತರ ಪ್ರದೇಶಗಳಿಗೆ ಭೇಟಿ ನೀಡಿ, ಕೆರೆ ಅಭಿವೃದ್ಧಿ ಹಾಗೂ ಜಿಲ್ಲಾ ಸಂಗ್ರಹ ಸಂಬಂಧಿಸಿದಂತೆ, ಮುಂದಿನ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಎಲ್ಲರೂ ಸಭೆಯಲ್ಲಿ ಪಾಲ್ಗೊಂಡಾಗ ಮಾತ್ರ ಅಧಿಕಾರಿಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಎಂದರು. ಈ ಹಿಂದೆ ಬಿಜೆಪಿ ಆಡಳಿತ ನಡೆಸುವಾಗ ಸಾಕಷ್ಟು ಸಹಕಾರ ನೀಡಿದ್ದೇನೆ ಎಂದರು.
ಜನರ ಹಿತಕಾಯುವ ದೃಷ್ಟಿಯಲ್ಲಿ ಯಾರು ರಾಜಕೀಯ ಮಾಡಬಾರದು ಎಂದು ಜಿಪಂ ಸದಸ್ಯರಾದ ಕೆಎಂ ಶಶಿಧರ, ತೋರಣಗಲ್ ಶರಣಪ್ಪ, ಅನ್ನದಾನ ಮೇಟಿ, ವಸಂತ ಮತ್ತಿತರರು ದೂರಿದರು.
ಎಲ್ಲವನ್ನು ಅಧಿಕಾರಿಗಳೆ ನಡೆಸುತ್ತಾರೆ. ಕ್ಷೇತ್ರದಲ್ಲಿ ಸಣ್ಣಪುಟ್ಟ ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ಇದರಿಂದಾಗಿ ಕ್ಷೇತ್ರದ ಮತದಾರರಿಗೆ ಏನು ಉತ್ತರ ಕೊಡಬೇಕು, ಸಭೆಯಲ್ಲಿ ಸಮಸ್ಯೆಗಳ ಬಗ್ಗೆ ಚರ್ಚಿಸಿದರೂ ಅಧಿಕಾರಿಗಳು ಸರಿಯಾಗಿ ಉತ್ತರಿಸುವುದಿಲ್ಲ ಎಂದು ಸದಸ್ಯರಾದ ಶಾರದಾ ಪ್ರಸಾದ್ ಅಸಮಾಧಾನ ವ್ಯಕ್ತಪಡಿಸಿದರು.
ಡಿ. 18ರಂದು ಸಭೆ ಬಹಿಷ್ಕರಿಸಿ ಬಂದರೂ, ಇನ್ನು ತಮ್ಮ ಕ್ಷೇತ್ರದ ಸಮಸ್ಯೆಗಳು ಈಡೇರಿಲ್ಲ. ನಾವು ಹೇಳಿದ ಸಮಸ್ಯೆಗಳಿಗೆ ಪೂರಕ ಕೆಲಸಗಳೇ ಆಗಿಲ್ಲ, ಜಿಲ್ಲಾ ಪಂಚಾಯ್ತಿ ಅಧ್ಯಕ್ಷರು ಕಾಟಾಚಾರದಿಂದ ಭೇಟಿ ಮಾಡಿದ್ದಾರೆ ಹೊರತು, ಕೆರೆಗಳಿಗೆ ನೀರು ತುಂಬುವ ಕೆಲಸಗಳು ಆಗಿಲ್ಲ, ಅವರ ಭೇಟಿಯಿಂದ ಪ್ರಯೋಜನವಾಗಿಲ್ಲ. ಇದರಿಂದಾಗಿ ಸಭೆಯಿಂದ ದೂರು ಉಳಿಯಬೇಕಾಯಿತು ಎಂದು ಜಿಪಂ ಬಿಜೆಪಿ ಸದಸ್ಯ ಗೋನಾಳ್ ರಾಜಶೇಖರ್ ಗೌಡ ಹೇಳಿದರು.
ಜಿಲ್ಲೆಯ ಅಭಿವೃದ್ಧಿ ಬಗ್ಗೆ ಪ್ರತಿಪಕ್ಷದ ಸದಸ್ಯರೆಲ್ಲರೂ ಸಹಕಾರ ನೀಡಬೇಕು. ಕ್ಷೇತ್ರದಲ್ಲಿನ ಸಮಸ್ಯೆಗಳ ಕುರಿತಾದ ಸಭೆಯಲ್ಲಿ ಚರ್ಚಿಸಿ, ಇತ್ಯರ್ಥಪಡಿಸಬೇಕು, ಇದನ್ನು ಬಿಟ್ಟು ಸಭೆಯಿಂದ ದೂರು ಉಳಿದರೆ ಯಾವುದೇ ಉಪಯೋಗವಾಗುವುದಿಲ್ಲ. ಜಿಲ್ಲೆಯಲ್ಲಿ ಕುಡಿವ ನೀರಿನ, ಬರಗಾಲದ ಸಮಸ್ಯೆಯಿಂದ ಕೂಡಿದ್ದು, ಇದರಿಂದಾಗಿ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದೆ. ಇಂಥ ಸಂದರ್ಭದಲ್ಲಿ ಪ್ರತಿಪಕ್ಷದ ಸದಸ್ಯರು ಸಭೆಯಿಂದ ದೂರ ಉಳಿಯದೆ, ಸಹಕರಿಸಬೇಕು.
- ಶೋಭಾ ಬೆಂಡಿಗೇರಿ,
ಜಿಪಂ ಅಧ್ಯಕ್ಷೆ