ಹಂಪಿ ಉತ್ಸವದ ಹೆಸರಲ್ಲಿ ಪ್ರಕೃತಿ ಹಾಳು ಮಾಡಿದ್ರು
ಹೊಸಪೇಟೆ: ಹಂಪಿ ಉತ್ಸವದ ವೇದಿಕೆ ಮುಂದೆ ನೆಲ ಸಮತಟ್ಟು ಮಾಡಲು ಹಾಗೂ ಕೆಲ ತಗ್ಗು ಪ್ರದೇಶ ಮುಚ್ಚಲು ಹಂಪಿ ವ್ಯಾಪ್ತಿಯ ಪ್ರಾಕೃತಿಕ ಬೆಟ್ಟಗುಡ್ಡಗಳಿಂದ ಜೆಸಿಬಿಗಳಿಂದ ವ್ಯಾಪಕವಾಗಿ ಮಣ್ಣು ತೆಗೆದು ಲಾರಿ ಮತ್ತು ಟ್ರ್ಯಾಕ್ಟರ್ಗಳಿಗೆ ತುಂಬುತ್ತಿದ್ದು, ಅಲ್ಲಿನ ಪ್ರಕೃತಿ ಸೌಂದರ್ಯ ಪ್ರಾಣಿ, ಪಕ್ಷಿಗಳು ತೊಂದರೆ ಅನುಭವಿಸುವಂತಾಗಿದೆ.
ವಿಶ್ವವಿಖ್ಯಾತ ಹಂಪಿಯ ಯಾವುದೇ ಪ್ರದೇಶದಲ್ಲಿ ಭೂಮಿ ಅಗೆಯಬೇಕು ಎಂದರೆ ಕೇಂದ್ರ ಮತ್ತು ರಾಜ್ಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ಹಂಪಿ ವಿಶ್ವ ಪರಂಪರೆ ನಿರ್ವಹಣಾ ಪ್ರಾಧಿಕಾರ ಮತ್ತು ಹಂಪಿ ಪ್ರಾಧಿಕಾರದ ಪರವಾನಗಿಬೇಕು.
ಮಣ್ಣು, ಗರಸು ಸಾಗಾಟ: ಹಂಪಿಯ ಕುಸ್ತಿ ಅಖಾಡದಿಂದ ಅನತಿ ದೂರದಲ್ಲಿರುವ ಐತಿಹಾಸಿಕ ಸ್ಮಾರಕಗಳು ಮತ್ತು ದೇವಸ್ಥಾನಗಳನ್ನು ಹೊಂದಿರುವ ಸಿಂಗನಾಥಹಳ್ಳಿ ಮತ್ತು 82 ಡಣಾಪುರದ ಸಮೀಪದಲ್ಲಿ 4-5 ದಿನಗಳಿಂದ ನಿರಂತರ ಜೆಸಿಬಿ ಯಂತ್ರಗಳು ಸದ್ದು ಮಾಡುತ್ತಿದ್ದು, ಮಣ್ಣು ಮತ್ತು ಗರಸನ್ನು ತೆಗೆದು ಟ್ರ್ಯಾಕ್ಟರ್ಗಳಲ್ಲಿ ಸಾಗಿಸಲಾಗುತ್ತಿದೆ. ಇದರಿಂದ ಪ್ರಾಕೃತಿಕ ಬೆಟ್ಟಗುಡ್ಡಗಳ ಮಡಿಲಲ್ಲಿ ನೆಲ ಗುಬ್ಬಿಗಳು, ಕಲ್ಲು ಹೊಲಕ ಸೇರಿದಂತೆ ನೂರಾರು ಹಕ್ಕಿಗಳು ಹುಲ್ಲಿನ ಮೇಲೆ ಮೊಟ್ಟೆಗಳನ್ನಿರಿಸುವ ಪಕ್ಷಿಗಳಿಗೆ ತೊಂದರೆಯುಂಟಾಗಲಿದೆ. ಹಂಪಿ ಪ್ರದೇಶದಲ್ಲಿ ಸಣ್ಣ-ಪುಟ್ಟ ಗಿಡ, ಮರಗಳು ಬೆಳೆಯಲು ತಗ್ಗು ಪ್ರದೇಶಗಳನ್ನು ಮಾಡಿರುವುದರಿಂದ ಗಿಡ, ಮರಗಳ ಬೆಳವಣಿಗೆ ಕ್ಷೀಣಿಸುವುದಲ್ಲದೆ ಪ್ರಕೃತಿ ಸೌಂದರ್ಯಕ್ಕೆ, ಪಕ್ಷಿಗಳಿಗೆ ತೊಂದರೆ ಉಂಟಾಗಲಿದೆ ಎಂದು ಸ್ಥಳೀಯ ಪರಿಸರ ಪ್ರೇಮಿಗಳು ಆರೋಪಿಸಿದ್ದಾರೆ.
ಮೂಕ ಪ್ರೇಕ್ಷಕರಾದ ಸ್ಥಳೀಯರು: ಹಂಪಿಯ ನಿವಾಸಿಗಳು ಬಿದ್ದ ಮನೆ ದುರಸ್ತಿಗೊಳಿಸಿಕೊಳ್ಳಲು ಮತ್ತು ಮನೆಗಳಿಗೆ ಸುಣ್ಣಬಣ್ಣ ಹಚ್ಚಿಕೊಳ್ಳಬೇಕೆಂದರೂ ಕೇಂದ್ರ ಮತ್ತು ರಾಜ್ಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮತ್ತು ಹಂಪಿ ಪ್ರಾಧಿಕಾರದ ಪರವಾನಗಿ ಪಡೆಯಬೇಕು. ಅಂಥದರಲ್ಲಿ ಪ್ರಾಕೃತಿಕ ಬೆಟ್ಟಗುಡ್ಡಗಳ ಮಧ್ಯೆ ಮಣ್ಣು ತೆಗೆಯಲು ಈ ಇಲಾಖೆಗಳು ಪರವಾನಗಿ ನೀಡಿವೆಯೇ ಎನ್ನುವುದು ಸ್ಥಳೀಯ ನಿವಾಸಿಗಳಿಗೆ ಕುತೂಹಲ ಮೂಡಿಸಿದೆ.