ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ತುಂಗಭದ್ರಾ ಹೂಳು: ಆಂಧ್ರ-ಕರ್ನಾಟಕ ಚರ್ಚಿಸಿ ನಿರ್ಧಾರ ಕೈಗೊಳ್ಳಲಿ: ರಘು ವೀರಾರೆಡ್ಡಿ

Vishwanath S
Updated On : 30 Dec 2013, 12:20 pm

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 29
ಕರ್ನಾಟಕ, ಆಂಧ್ರಪ್ರದೇಶದ ರೈತರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳು ತೆಗೆಯಲು ಎರಡು ಸರ್ಕಾರಗಳು ಪರಸ್ಪರ ಮುಕ್ತವಾಗಿ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕಿದೆ. ಇದಕ್ಕೆ ಆಂಧ್ರ ಸರ್ಕಾರ ಸಿದ್ಧ ಎಂದು ಆಂಧ್ರದ ಕಂದಾಯ ಸಚಿವ ರಘು ವೀರಾರೆಡ್ಡಿ ತಿಳಿಸಿದರು.
ಖಾಸಗಿ ಕಾರ್ಯಕ್ರಮದ ನಿಮಿತ್ತ ಭಾನುವಾರ ನಗರಕ್ಕೆ ಆಗಮಿಸಿದ ಅವರು, ಸುದ್ದಿಗಾರರೊಂದಿಗೆ ಮಾತನಾಡಿದರು.
ತುಂಗಭದ್ರಾ ಜಲಾಶಯದ ಹೂಳಿಗೆ ಸಂಬಂಧಿಸಿದಂತೆ ಪರ್ಯಾಯ ಮಾರ್ಗೋಪಾಯಗಳ ಬಗ್ಗೆ ಅಂದರೆ ಇದು ಅಂತಾರಾಜ್ಯಗಳಿಗೆ ಸಂಬಂಧಪಟ್ಟ ವಿಷಯ ಆಗಿರುವುದರಿಂದ ತುಂಬಿರುವ ಹೂಳು ತೆಗೆಯಬೇಕಾ ಅಥವಾ ಪ್ರತಿವರ್ಷ ಸಮುದ್ರ ಸೇರುವ ಲಕ್ಷಾಂತರ ಕ್ಯುಸೆಕ್ ನೀರಿನ ಬಳಕೆಗಾಗಿ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಬೇಕಾ ಎಂಬಿತ್ಯಾದಿ ವಿಷಯಗಳ ಕುರಿತು ಈಗಾಗಲೇ ಬೆಂಗಳೂರಿನಲ್ಲಿ ಎರಡೂ ರಾಜ್ಯ ಸರ್ಕಾರಗಳ ಅಧಿಕಾರಿಗಳು, ನೀರಾವರಿ, ಕಂದಾಯ ಸಚಿವರ ಸಭೆ ನಡೆಸಿರುವುದು ಸ್ವಾಗತಾರ್ಹ. ಹೂಳು ತೆಗೆಸಬೇಕೋ ಕಾಲುವೆಗಳ ಅಗಲೀಕರಣ, ಫ್ಲಡ್ ಕೆನಾಲ್‌ಗಳ ನಿರ್ಮಾಣ ಸೇರಿದಂತೆ ಎರಡೂ ರಾಜ್ಯಗಳ ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಪರ್ಯಾಯ ವ್ಯವಸ್ಥೆ, ಅದಕ್ಕಾಗುವ ಸಮಯ, ತಾಂತ್ರಿಕತೆ, ಬೇಕಾಗುವ ವೆಚ್ಚ ಇನ್ನಿತರ ಮಾಹಿತಿ ಕುರಿತು ಜಲಾಶಯದಲ್ಲಿನ ಎಂಜಿನಿಯರ್‌ಗಳು ಸೂಕ್ತ ವರದಿ ತಯಾರಿಸಬೇಕು. ಇದಕ್ಕೆ ಎರಡೂ ಸರ್ಕಾರಗಳು ಬದ್ಧವಾಗಲಿವೆ ಎಂದು ತಿಳಿಸಿದರು.
ವಿಶಾಲಾಂಧ್ರವಾಗಿರಲಿ: ತೆಲಂಗಾಣ ಪ್ರತ್ಯೇಕ ರಾಜ್ಯಕ್ಕೆ ಪಕ್ಷದ ಹಲವು ಶಾಸಕರ ವಿರೋಧವಿದೆ. ಒಂದೇ ರಾಜ್ಯವಿದ್ದಲ್ಲಿ ಅಭಿವೃದ್ಧಿ ಕಾರ್ಯಗಳು ಚೆನ್ನಾಗಿ ನಡೆಯಲಿವೆ. ಈ ನಿಟ್ಟಿನಲ್ಲಿ ಮುಂಬರುವ ಅಧಿವೇಶನದಲ್ಲಿ ಪ್ರತ್ಯೇಕ ರಾಜ್ಯ ವಿರೋಧಿಸಿ, ಬಹುತೇಕ ಶಾಸಕರು ಅಫಿಡವಿಟ್ ಸಲ್ಲಿಸಲಿದ್ದಾರೆ ಎಂದರು.
ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಇಲ್ಲ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಜಿಲ್ಲೆಯಿಂದ ಸ್ಪರ್ಧಿಸಲಿದ್ದೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನು ರಾಷ್ಟ್ರೀಯ ಮುಖಂಡನಲ್ಲ. ಪಕ್ಷದ ಸಾಮಾನ್ಯ ಕಾರ್ಯಕರ್ತ. 1989ರಿಂದಲೂ ರಾಜ್ಯದಲ್ಲಿ ಚುನಾವಣೆಗಳು ಬಂದಾಗ, ಚಿತ್ರದುರ್ಗ, ತುಮಕೂರು, ಕೋಲಾರ ಜಿಲ್ಲೆಗಳಲ್ಲಿ ನಮ್ಮ ಆತ್ಮೀಯರು ಇರುವುದರಿಂದ ಪಕ್ಷದ ಪರ ಪ್ರಚಾರ ಮಾಡುತ್ತಿದ್ದೇನೆ ಹೊರತು, ಸ್ಪರ್ಧಿಸುವ ಯೋಚನೆ ನನಗಿಲ್ಲ. ಇನ್ನು ಮುಂದೆಯೂ ಅನಂತಪುರ ಜಿಲ್ಲೆಯಿಂದಲೇ ಸ್ಪರ್ಧಿಸುವುದಾಗಿ ಸ್ಪಷ್ಟಪಡಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement