ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ನದಿ ಪಕ್ಕದಲ್ಲಿದ್ದರೂ ನೀಗದ ಕುಡಿಯುವ ನೀರಿನ ಸಮಸ್ಯೆ

Vishwanath S
Updated On : 30 Dec 2013, 12:21 pm

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ ಡಿ. 29
ಹೂವಿನಹಡಗಲಿ ಜನತೆಗೆ ಬೇಸಿಗೆ ಮುನ್ನವೇ ಕುಡಿವ ನೀರಿಗೆ ವಿಘ್ನಗಳು ಎದುರಾಗಿದೆ. ನಿತ್ಯ ಬೆಳಗಾದರೆ ಎಲ್ಲರಿಗೂ ಕುಡಿವ ನೀರಿನದ್ದೇ ಚಿಂತೆ. ನದಿ ತುಂಬಿದ್ದರೂ ಕುಡಿವ ನೀರಿನ ಸಮಸ್ಯೆಯಿಂದ ಜನತೆ ಇಂದಿಗೂ ಮುಕ್ತವಾಗಿಲ್ಲ.
ತುಂಗಭದ್ರಾ ತಟದಲ್ಲಿದ್ದರೂ ಕುಡಿವ ನೀರಿಗೆ ತತ್ವಾರ ನಿರಂತರವಾಗಿದೆ. ವಾರಕೊಮ್ಮೆ ನೀರು ಬಿಡುವ ಪುರಸಭೆ ಸಿಬ್ಬಂದಿ ಸಮರ್ಪಕ ನಿರ್ವಹಣೆ ಕೊರತೆಯಿಂದ ಜನರು ಪುರಸಭೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಈ ಹಿಂದೆ ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಕುರಿತು ಅನೇಕ ಬಾರಿ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅಧಿಕಾರಿಗಳ ಸಭೆ ಕರೆದು ಚರ್ಚಿಸಿದ್ದಾರೆ. ಈ ಸಂದರ್ಭ ಪಟ್ಟಣಕ್ಕೆ ಇನ್ನು ಮುಂದೆ 3 ದಿನಕ್ಕೊಮ್ಮೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಭರವಸೆ ನೀಡಿದ್ದರು. ಅದರಂತೆ 2-3 ದಿನಗಳು ಮಾತ್ರ 3 ದಿನಕ್ಕೊಮ್ಮೆ ನೀರು ಪೂರೈಕೆ ಬಿಟ್ಟರೆ ಮತ್ತೆ ಹಳೇ ಚಾಳಿ ಮುಂದುವರಿಸಿದ್ದಕ್ಕೆಜನರು ರೋಸಿ ಹೋಗಿದ್ದಾರೆ.
ಸಚಿವರ ಆದೇಶಕ್ಕೆ ಕಿಮ್ಮತ್ತಿಲ್ಲ: ಕುಡಿವ ನೀರಿನ ಸಮಸ್ಯೆ ಕುರಿತು ಮಂತ್ರಿಗಳ ಮಾತಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತಾಗಿದೆ. ಇದಕ್ಕೆ ಸಂಬಂಧ ಪಟ್ಟಂತೆ ಪುರಸಭೆ ಅಧಿಕಾರಿಗಳು ಸಮರ್ಪಕವಾಗಿ ನೀರು ಪೂರೈಕೆಗೆ ಕ್ರಮ ಕೈಗೊಂಡಿಲ್ಲ. ಮತ್ತೆ ಅದೇ ರಾಗ ಅದೆ ಹಾಡು ಎಂಬಂತೆ ಪರಿಸ್ಥಿತಿಗೆ ಪುರಸಭೆ ಬಂದು ನಿಂತಿದೆ. ಸಚಿವರೇ ಎಲ್ಲಿದೆ 3 ದಿನಕ್ಕೊಮ್ಮೆ ನೀರು? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.
ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವ ಈ ದಿನಗಳಲ್ಲಿ ವಾರಕ್ಕೊಮ್ಮೆ, ಐದಾರು ದಿನಗಳಿಗೊಮ್ಮೆ ಅಸಮರ್ಪಕ ನೀರು ಪೂರೈಕೆಯಾಗುತ್ತಿದೆ. ಲಕ್ಷಾಂತರ ಜನಸಂಖ್ಯೆ ಹೊಂದಿರುವ ಹೊಸಪೇಟೆಯಂತಹ ದೊಡ್ಡ ನಗರದಲ್ಲಿ ಪ್ರತಿದಿನವೂ ಶುದ್ಧ ಕುಡಿವ ನೀರು ಪೂರೈಕೆಗೆ ಕ್ರಮ ಕೈಗೊಂಡಿದ್ದಾರೆ. ಆದರೆ, ಬರೀ 30 ಸಾವಿರ ಜನಸಂಖ್ಯೆಯಷ್ಟಿರುವ ಹೂವಿನಹಡಗಲಿಯ ಜನತೆ ವಾರಕ್ಕೊಮ್ಮೆ ಕುಡಿವ ನೀರು ಕಾಣಬೇಕಾದ ದುಸ್ಥಿತಿಗೆ ಬಂದು ನಿಂತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement