ಸುಧಾರಣೆಯಾಗದ ರೈತರ ಜೀವನಮಟ್ಟ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 29
ಸ್ವಾತಂತ್ರ್ಯದ ದಿನಗಳಲ್ಲಿ ಕೇವಲ 50 ಮಿಲಿಯನ್ ಟನ್ ಆಹಾರ ಉತ್ಪಾದಿಸುತ್ತಿದ್ದ ಭಾರತ ಇಂದು 260-270 ಮಿಲಿಯನ್ ಟನ್ ಉತ್ಪಾದಿಸುತ್ತಿದೆ. ಇದರಿಂದ ಒಂದೆಡೆ ಕೃಷಿಯಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದರೂ, ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುವವರು ತಲುಪಿರುವ ಗುಣಮಟ್ಟ ರೈತಾಪಿ ವರ್ಗ ಇನ್ನೂ ತಲುಪಲು ಸಾಧ್ಯವಾಗಿಲ್ಲ. ಇದರಿಂದಾಗಿ ರೈತರ ಜೀವನಮಟ್ಟ ಇನ್ನು ಸುಧಾರಣೆಯಾಗಿಲ್ಲ ಎಂದು ರಾಜ್ಯದ ಕೃಷಿ ಸಚಿವ ಕೃಷ್ಣ ಬೈರೇಗೌಡ ಬೇಸರ ವ್ಯಕ್ತಪಡಿಸಿದರು.
ನಗರದಲ್ಲಿ ಭಾನುವಾರ ಏರ್ಪಡಿಸಿದ್ದ ಸಿಂಧೂರಿ ಆಗ್ರೋಸ್ ಕಂಪನಿಯ 15ನೇ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕೃಷಿ ಕಾರ್ಮಿಕರ ಸಂಖ್ಯೆ ದಿನದಿಂದ ದಿನಕ್ಕೆ ಕ್ಷಿಣಿಸುತ್ತಿದ್ದು, ನಿರ್ದಿಷ್ಟ ಕೃಷಿ ಭೂಮಿಯಲ್ಲಿ ಇಳುವರಿ ಹೆಚ್ಚಿಸುತ್ತಾ, ಆದಾಯ ಹೆಚ್ಚಿಸಿಕೊಳ್ಳಬೇಕು. ಆಗ ಮಾತ್ರ ಉತ್ಪಾದನೆಯೊಂದಿಗೆ ಲಾಭ ಹೆಚ್ಚಲಿದೆ. ಈ ಮೊದಲು ಅಧಿಕವಾಗಿ ಬಳಸುತ್ತಿದ್ದ ಹಸಿರೆಲೆ, ಕೊಟ್ಟಿಗೆ ಗೊಬ್ಬರ ಇಂದು ಕಾಣದಾಗಿದ್ದು, ಸುಲಭವಾಗಿ ದೊರೆಯುವ ರಾಸಾಯನಿಕ ರಸಗೊಬ್ಬರಗಳ ಬಳಕೆಗೆ ಆದ್ಯತೆ ನೀಡಲಾಗುತ್ತಿದೆ. ಕೇವಲ ಯೂರಿಯಾ, ಪೊಟ್ಯಾಶಿಯಂಗಳಂಥ ಗೊಬ್ಬರಗಳ ಕಡೆ ಗಮನ ಹರಿಸುತ್ತಿದ್ದು, ಲಘು ಪೋಷಕಾಂಶಗಳಿಗೆ ಆದ್ಯತೆ ನೀಡುತ್ತಿಲ್ಲ. ಹೀಗಾಗಿ ಮಣ್ಣಿನ ಫಲವತ್ತತೆ ಕಡಿಮೆಯಾಗಿ ಇಳುವರಿ ಕ್ಷಿಣಿಸುತ್ತದೆ. ಈ ನಿಟ್ಟಿನಲ್ಲಿ ಭೂಚೇತನ ಕಾರ್ಯಕ್ರಮದಲ್ಲಿ ರೈತರ ಜಮೀನಿನಲ್ಲಿ ಮಣ್ಣಿನ ಪರೀಕ್ಷೆ ಮಾಡಿಸಿ, ಅಗತ್ಯ ಲಘು ಪೋಷಕಾಂಶಗಳ ಬಳಕೆ ಕುರಿತು ಮನವರಿಕೆ ಮಾಡಿಕೊಡಲಾಗುತ್ತಿದೆ ಎಂದರು.
ಪ್ರಸ್ತುತ ದೇಶದಲ್ಲಿ ಸುಧಾರಣೆ ಕಂಡಿರುವ ಆಹಾರ ಭದ್ರತೆ, ಭವಿಷ್ಯದಲ್ಲಿ ಸುಧಾರಣೆ ಕಾಣಬೇಕಾದರೆ, ಎಚ್ಚರಿಕೆ ವಹಿಸಬೇಕಿದೆ. ಶೇ. 2-3ರಷ್ಟು ಆಹಾರ ಉತ್ಪಾದನೆ ಇದ್ದರೆ, ಜಿಡಿಪಿ ಬೆಳವಣಿಗೆ ದರ 6, 7, 8, 9ಕ್ಕೆ ಏರುತ್ತಿದೆ. ದೇಶದ ಅಭಿವೃದ್ಧಿಯೊಂದಿಗೆ ಕೃಷಿ ಅಭಿವೃದ್ಧಿಯಾಗುತ್ತಿಲ್ಲ. ಇದರಿಂದ ಭವಿಷ್ಯದಲ್ಲಿ ಆಹಾರ ಭದ್ರತೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಕಳವಳ ವ್ಯಕ್ತಪಡಿಸಿದರು.
ಮಣ್ಣು ಪರೀಕ್ಷಿಸಿ ಗೊಬ್ಬರ ನೀಡಿ: ಆಂಧ್ರದ ಕಂದಾಯ ಸಚಿವ ರಘುವೀರಾರೆಡ್ಡಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಕೃಷಿಗೆ ಅಧಿಕವಾಗಿ ರಾಸಾಯನಿಕ ಗೊಬ್ಬರವನ್ನೇ ಬಳಕೆ ಮಾಡುತ್ತಿರುವುದರಿಂದಾಗಿ ಮಣ್ಣಿನ ಫಲವತ್ತತೆ ಕಡಿಮೆಯಾಗುತ್ತಿದ್ದು, ಈ ಮೊದಲು ಕೇವಲ ಒಂದು ಚೀಲ ಸಾವಯವ ಗೊಬ್ಬರದಿಂದ ಉತ್ತಮ ಬೆಳೆ ಬೆಳೆಯಲಾಗುತ್ತಿತ್ತು. ಆದರೀಗ ಹಲವಾರು ಚೀಲಗಳ ಗೊಬ್ಬರ ಹಾಕಿದರೂ, ರೈತ ಯಾವಾಗಲೂ ನಷ್ಟದಲ್ಲೇ ಇದ್ದಾನೆ. ಹೀಗಾಗಿ ಖಾಸಗಿ ಕಂಪನಿಗಳು ರೈತರಿಗೆ ಗೊಬ್ಬರ ನೀಡುವ ಮುನ್ನ ಅಲ್ಲಿನ ಮಣ್ಣು ಪರೀಕ್ಷೆ ಮಾಡಿ, ಸೂಕ್ತ ಮಾಹಿತಿ ನೀಡಿದ ನಂತರ ಗೊಬ್ಬರ ನೀಡುವಂತೆ ಮನವಿ ಮಾಡಿದರು.
ಮಿಶ್ರ ಬೇಸಾಯ ಅಳವಡಿಸಿಕೊಳ್ಳಿ: ರೈತರ ಅಭಿವೃದ್ಧಿಗೆ ಸರ್ಕಾರ ಯಾವುದೇ ಯೋಜನೆ ಜಾರಿಗೆ ತಂದರೂ, ಅದಕ್ಕೆ ಸಮಾನವಾಗಿ ಸಮಸ್ಯೆಗಳು ಉದ್ಭವಿಸುತ್ತಿವೆ. ರೈತರು ವೈಜ್ಞಾನಿಕವಾಗಿ ಅಭಿವೃದ್ಧಿ ಹೊಂದಬೇಕು. ದೇಶದಲ್ಲಿ ಶೇ. 85ರಷ್ಟು ಸಣ್ಣ ರೈತರಿದ್ದು, ಅವರೆಲ್ಲ ವೈಜ್ಞಾನಿಕ ಉಪಕರಣಗಳನ್ನು ಬಳಕೆ ಮಾಡಬೇಕು. ಎಲ್ಲರೂ ವಾಣಿಜ್ಯ ಬೆಳೆಗಳನ್ನೇ ಉತ್ಪಾದನೆ ಮಾಡದೆ, ಮಿಶ್ರ ಬೇಸಾಯ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದರು. ಯಾವ ವ್ಯವಸ್ಥೆ ಬಲಹೀನವಾದರೂ ದೇಶಕ್ಕೆ ನಷ್ಟವಿಲ್ಲ. ಆದರೆ, ರೈತ (ಕೃಷಿ) ಕ್ಷೇತ್ರದ ಶಕ್ತಿ ಕುಂದಬಾರದು. ನಷ್ಟಯುಂಟಾದರೆ ದೇಶಕ್ಕೆ ನಷ್ಟ ಖಂಡಿತ ಎಂದರು.
ಆಂಧ್ರ ಕೃಷಿ ಸಚಿವ ಕನ್ನಾ ಲಕ್ಷ್ಮೀನಾರಾಯಣ, ಶಾಸಕ ಉಗ್ರ ನರಸಿಂಹರೆಡ್ಡಿ, ಸಿಂಧೂರಿ ಆಗ್ರೋಸ್ ಸಂಸ್ಥೆ ಮುಖ್ಯಸ್ಥ ಸತ್ಯನಾರಾಯಣ, ಸಿರುಗುಪ್ಪ ಶಾಸಕ ಬಿ.ಎಂ. ನಾಗರಾಜ ಉಪಸ್ಥಿತರಿದ್ದರು.
ಸುಧಾರಣೆಯಾಗದ ಜೀವನ ಮಟ್ಟ
ಹಳ್ಳಿಗಳಲ್ಲಿ ಉತ್ತಮ ರಸ್ತೆಗಳಿವೆ. ವಿದ್ಯುತ್ ತಲುಪಿದೆ. ಹಳ್ಳಿಗಳ ಜನರು ಕಾರು, ಬೈಕ್ಗಳಲ್ಲಿ ಓಡಾಡುತ್ತಿದ್ದಾರೆ. ಮನೆಗಳಲ್ಲಿ ಟಿ.ವಿ.ಗಳಿವೆ. ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕೃಷಿಯಲ್ಲಿ ಟ್ರ್ಯಾಕ್ಟರ್ ಬಳಕೆಯಾಗುತ್ತಿದೆ. ಇಷ್ಟೆಲ್ಲ ಪ್ರಗತಿಯಾಗಿದ್ದರೂ, ರೈತರ ಜೀವನಮಟ್ಟ ಇನ್ನು ಸುಧಾರಣೆಯಾಗುತ್ತಿಲ್ಲ.
- ಕೃಷ್ಣ ಬೈರೇಗೌಡ,
ಕೃಷಿ ಸಚಿವ