ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಹಗರಿಬೊಮ್ಮನಹಳ್ಳಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಖಾಲಿ ಖಾಲಿ

Vishwanath S
Updated On : 30 Dec 2013, 12:20 pm

 ಕನ್ನಡಪ್ರಭ ವಾರ್ತೆ, ಹಗರಿಬೊಮ್ಮನಹಳ್ಳಿ, ಡಿ. 29
ರೈತರಿಗೆ ಅಗತ್ಯ ಮಾಹಿತಿ ನೀಡಿ ನೆರವಾಗಬೇಕಾದ ಹಗರಿಬೊಮ್ಮನಹಳ್ಳಿ ಕೃಷಿ ಇಲಾಖೆ ಕಳೆದ ಹಲವು ವರ್ಷಗಳಿಂದ ಇಲ್ಲಿನ ಹುದ್ದೆಗಳು ಭರ್ತಿಯಾಗದೇ ಖಾಲಿ ಇರುವುದರಿಂದ ಇಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಇದ್ದು ಇಲ್ಲದಂತಾಗಿದೆ.
ಹೌದು, ಪ್ರಖರ ಬಿಸಿಲು, ಬರಗಾಲಕ್ಕೆ ಖ್ಯಾತಿ ಪಡೆದ ಹಗರಿಬೊಮ್ಮನಹಳ್ಳಿ ತಾಲೂಕಿನಲ್ಲಿ ಕೃಷಿ ಕ್ಷೇತ್ರ ಅವಲಂಬಿತ ರೈತ ಕುಟುಂಬಗಳಿಗೆ ಸರ್ಕಾರ ರೂಪಿಸುವ ಯೋಜನೆ, ಕಾರ್ಯಕ್ರಮಗಳು ಸಮರ್ಪಕವಾಗಿ ತಲುಪುತ್ತಿಲ್ಲ ಎಂಬ ಕೂಗು ರೈತ ಸಂಘಟನೆಗಳಿಂದ ಹಾಗೂ ಗ್ರಾಪಂ, ತಾಪಂಗಳ ಪ್ರತಿ ಸಾಮಾನ್ಯ ಸಭೆಗಳಲ್ಲಿ ಜನಪ್ರತಿನಿಧಿಗಳಿಂದ ಪ್ರತಿಧ್ವನಿಸುತ್ತಲೇ ಇರುತ್ತದೆ. ಆದರೆ, ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕಾದ ಸರ್ಕಾರ ಮಾತ್ರ ಜಾಣ ಕುರುಡುತನ ತೋರುತ್ತಿದೆ.
28 ಹುದ್ದೆಗಳು ಖಾಲಿ
ತಾಲೂಕಿಗೆ ಸರ್ಕಾರದಿಂದ ಮಂಜೂರಾಗಿರುವ ಹುದ್ದೆಗಳ ಸಂಖ್ಯೆ-37. ಆದರೆ, ಪ್ರಸ್ತುತ ಸಹಾಯಕ ಕೃಷಿ ನಿರ್ದೇಶಕರ ಹುದ್ದೆ ಸೇರಿದಂತೆ ಒಟ್ಟು 28 ವಿವಿಧ ಹುದ್ದೆಗಳು ಖಾಲಿ ಇದ್ದು ಹಲವು ವರ್ಷಗಳೇ ಕಳೆದಿವೆ.
ಸದ್ಯ ಹಗರಿಬೊಮ್ಮನಹಳ್ಳಿ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿಯೇ ಪ್ರಭಾರಿ ಸಹಾಯಕ ಕೃಷಿ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೆ, ಇತ್ತ ದಿನಗೂಲಿ ಅಲ್ಲದ ವ್ಯಕ್ತಿಯೊಬ್ಬ ಇಡೀ ಹಗರಿಬೊಮ್ಮನಹಳ್ಳಿ ರೈತ ಸಂಪರ್ಕ ಕೇಂದ್ರದ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾನೆ. ಇದರಿಂದಾಗಿ ಕೃಷಿ ಇಲಾಖೆ ಪರಿಸ್ಥಿತಿ ಅಧೋಗತಿಯಾಗಿದೆ.
ಖಾಲಿ ಇರುವ ಹುದ್ದೆಗಳು
ಸಹಾಯಕ ಕೃಷಿ ನಿರ್ದೇಶಕರ ಹುದ್ದೆ, ಕೃಷಿ ಅಧಿಕಾರಿ-4, ಸಹಾಯಕ ಕೃಷಿ ಅಧಿಕಾರಿ-3, ಕೃಷಿ ಸಹಾಯಕ-4, ಸಹಾಯಕ ಕೃಷಿ ಅಧಿಕಾರಿ (ತಾಪಂ ಯೋಜನೆ)-2, ಅಧಿಕ್ಷಕರು-1, ಕೃಷಿ ಸಹಾಯಕ (ಯೋಜನೇತರ- ತಾಪಂ)-9, ಬೆರಳಚ್ಚುಗಾರ-1, ವಾಹನ ಚಾಲಕ-1, ಕೃಷಿ ಅಧಿಕಾರಿ (ಜಿಲ್ಲಾ ವಲಯ)-1 ಹೀಗೆ ಒಟ್ಟು 28 ಹುದ್ದೆಗಳು ಖಾಲಿ ಇವೆ.
ಸರ್ಕಾರದ ಯೋಜನೆ ಅಲಭ್ಯ
37 ಹುದ್ದೆಗಳ ಪೈಕಿ ಕೇವಲ 9 ಹುದ್ದೆಗಳು ಮಾತ್ರ ಭರ್ತಿಯಾಗಿರುವುದರಿಂದ ಪ್ರಸಕ್ತ ತಾಲೂಕಿನಲ್ಲಿ ರೈತರ ಕೆಲಸ ಕಾರ್ಯಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಕೆಲಸದ ನಿಮಿತ್ತ ಕಚೇರಿಗೆ ಬಂದರೆ ಅಲ್ಲಿ ಅಧಿಕಾರಿಗಳಿಲ್ಲ, ಸಿಬ್ಬಂದಿ ಕೊರತೆ ಎಂದು ಸಾಗು ಹಾಕುವುದು ಇಲ್ಲಿ ಸರ್ವೆ ಸಾಮಾನ್ಯ ಎಂಬುವಂತಾಗಿದೆ. ಹೀಗಾಗಿ ತಾಲೂಕಿನ ರೈತ ವರ್ಗಕ್ಕೆ ಕೃಷಿ ಇಲಾಖೆಯ ಯಾವುದೇ ಪ್ರಯೋಜನೆಗಳು ಸರಿಯಾಗಿ ತಲುಪುತ್ತಿಲ್ಲ. ಬದಲಿಗೆ ಕೆಲವರಿಗೆ ಮಾತ್ರ ಸರ್ಕಾರದ ಯೋಜನೆಗಳು ಲಭ್ಯವಾಗುತ್ತಿವೆ ಎಂಬ ದೂರುಗಳಿಗೂ ಕಮ್ಮಿ ಇಲ್ಲ.
ಹಗರಿಬೊಮ್ಮನಹಳ್ಳಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಸಾಕಷ್ಟು ಹುದ್ದೆಗಳು ಖಾಲಿ ಇರುವುದರಿಂದ ಇಲಾಖೆಯಿಂದ ರೈತರಿಗೆ ಅನುಕೂಲವಾಗುವ ಬದಲು ಅನಾನುಕೂಲತೆಗಳೇ ಹೆಚ್ಚು. ಸರ್ಕಾರ ಜಾರಿಗೆ ತರುವಂತಹ ಯಾವುದೇ ಯೋಜನೆ ಹಾಗೂ ಕಾರ್ಯಕ್ರಮಗಳ ಮಾಹಿತಿ ರೈತರಿಗೆ ತಲುಪುತ್ತಿಲ್ಲ. ತಾಲೂಕಿನಲ್ಲಿ ಕೃಷಿ ಇಲಾಖೆ ಇದ್ದೂ ಇಲ್ಲದಂತಾಗಿದೆ.
- ಜೆ.ಎಂ. ವೀರಸಂಗಯ್ಯ,
ರಾಜ್ಯ ರೈತ ಸಂಘದ ಉಪಾಧ್ಯಕ್ಷ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement