ಇಂದು ದಾಸವಾಣಿ ಕಾರ್ಯಕ್ರಮ
ಬಳ್ಳಾರಿ: ಸ್ಥಳೀಯ ಗುರುಶ್ರೀ ವಿಠ್ಠಲ ಸೇವಾ ಸಮಿತಿಯು ನಗರದ ಗಾಂಧಿಭವನದಲ್ಲಿ ಡಿ. 31ರಂದು ಸಂಜೆ ದಾಸವಾಣಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು, ಕೊಯಮತ್ತೂರಿನ ಚಿನ್ಮಯ ಕಾಲೇಜಿನ ಸಂಗೀತ ವಿಭಾಗದ ಮುಖ್ಯಸ್ಥ ಪಂ. ರಮೇಶ ಕುಲಕರ್ಣಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಟಿ. ಗುರುರಾಜಾಚಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರವೇಶ: ಅವಧಿ ವಿಸ್ತರಣೆ
ಬಳ್ಳಾರಿ: ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ವಿವಿಧ ಕೋರ್ಸ್‌ಗಳಿಗೆ ಪ್ರವೇಶಾತಿ ಹೊಂದುವ ಕೊನೆಯ ದಿನಾಂಕವನ್ನು 2014ರ ಜ. 4ರ ವರೆಗೂ ವಿಸ್ತರಿಸಲಾಗಿದೆ ಎಂದು ವಿವಿಯ ಕುಲ ಸಚಿವರು ತಿಳಿಸಿದ್ದಾರೆ. ಬಿಎ, ಬಿಕಾಂ, ಎಂಎ, ಎಂಕಾಂ, ಎಂಎಸ್ಸಿ, ಬಿಎಲ್ ಐಎಸ್ಸಿ, ಎಂಎಲ್ ಐಎಸ್ಸಿ, ಎಲ್‌ಎಲ್‌ಎಂ, ಡಿಪ್ಲೊಮಾ ಹಾಗೂ ಸರ್ಟಿಫಿಕೇಟ್ ಕೋರ್ಸ್‌ಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳು ಜನವರಿ 4ರೊಳಗಾಗಿ ರು. 400 ದಂಡ ಶುಲ್ಕದೊಂದಿಗೆ ಪಾವತಿಸಿ ವಿದ್ಯಾಭ್ಯಾಸ ಮುಂದುವರಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಯಕರ್ನಾಟಕ ಜಿಲ್ಲಾಘಟಕಕ್ಕೆ ನೇಮಕ
ಬಳ್ಳಾರಿ: ಜಯಕರ್ನಾಟಕ ಸಂಘಟನೆಯ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಎಸ್. ಮುಜಂಮಿಲ್(ಮುಜ್ಜು) ನೇಮಕವಾಗಿದ್ದಾರೆ. ಜಯಕರ್ನಾಟಕ ಸಂಘಟನೆ ಜಿಲ್ಲಾಧ್ಯಕ್ಷ ಪಿ. ರವೀಂದ್ರ ರೆಡ್ಡಿ ಸಂಘಟನೆ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾ ಉಪಾಧ್ಯಕ್ಷರನ್ನಾಗಿ ಎಸ್. ಮುಜಂಮಿಲ್ ಅವರನ್ನು ಆರಿಸಿ, ಆದೇಶ ಹೊರಡಿಸಿದ್ದಾರೆ.
ನಾಳೆ ಜಕಣಾಚಾರಿ ಸ್ಮರಣೆ
ಬಳ್ಳಾರಿ: ಬಳ್ಳಾರಿ ಜಿಲ್ಲಾ ಶ್ರೀ ವಿಶ್ವಕರ್ಮ ಮಹೋತ್ಸವ ಸಮಿತಿಯಿಂದ ನಗರದ ಗಾಂಧಿಭವನದಲ್ಲಿ ಅಮರಶಿಲ್ಪಿ ಜಕಣಾಚಾರಿ ಸ್ಮರಣೆ ದಿನಾಚರಣೆ ಪ್ರಯುಕ್ತ ಜಿಲ್ಲಾ ಮಟ್ಟದ ಪೂರ್ವಭಾವಿ ಸಭೆ ಜರುಗಿತು. ಸಭೆಯಲ್ಲಿ ಸಮಿತಿ ಅಧ್ಯಕ್ಷ ಚಂದ್ರಕಾಂತ್ ಸೋನಾರ್ ಮಾತನಾಡಿ, ಜ. 1ರಂದು ಬೆಂಗಳೂರಿನ ಮಲ್ಲೇಶ್ವರಂ ಆಟದ ಮೈದಾನದಲ್ಲಿ ಅಮರಶಿಲ್ಪಿ ಜಕಣಾಚಾರಿ ಅವರ ಸ್ಮರಣಾದಿನವನ್ನು ಸಮಿತಿ ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿ ಅವರ ನೇತೃತ್ವದಲ್ಲಿ ಹಮ್ಮಿಕೊಳ್ಳಲಾಗಿದ್ದು, ವಿಶ್ವಕರ್ಮ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಲಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಮಾಜದ ಬಾಂಧವರು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಮಾರಂಭವನ್ನು ಯಶಸ್ವಿಗೊಳಿಸುವಂತೆ ಮನವಿ ಮಾಡಿದರು. ವಿಶ್ವಕರ್ಮ ಸಮಾಜದ ಮುಖಂಡರಾದ ಕೃಷ್ಣಾನಂದ, ಎಂ.ಕೆ. ರವೀಂದ್ರ, ವಿ.ಬಿ. ಕೃಷ್ಣಾಚಾರಿ, ಬಿ. ವೀರಭದ್ರಾಚಾರಿ, ತಿಪ್ಪೇಸ್ವಾಮಿ, ಚಂದ್ರಶೇಖರಾಚಾರಿ ಕಪ್ಪಗಲ್ಲು, ಚಂದ್ರಶೇಖರಾಚಾರಿ ಶ್ರೀಧರಗಡ್ಡೆ, ಸೂರ್ಯನಾರಾಯಣಾಚಾರಿ ಮತ್ತಿತರ ಮುಖಂಡರು ಪಾಲ್ಗೊಂಡಿದ್ದರು.