ಜಿಎಸ್ಸೆಸ್ ಬರವಣಿಗೆಯಿಂದಲೇ ಸಾಹಿತ್ಯದಲ್ಲಿ ಛಾಪು: ಶೇಖರ್
ಬಳ್ಳಾರಿ: ತಮ್ಮ ಬರವಣಿಗೆ ಮೂಲಕ ಇಡೀ ಸಾಹಿತ್ಯ ಪ್ರಪಂಚದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಜಿ.ಎಸ್. ಶಿವರುದ್ರಪ್ಪ ಅವರು ಆಧುನಿಕ ಕಾವ್ಯಲೋಕಕ್ಕೆ ತಮ್ಮದೇ ಆದ ಬಳುವಳಿ ನೀಡುವುದರ ಮೂಲಕ ಮೇರು ವ್ಯಕ್ತಿತ್ವದ ಸಾಹಿತಿಯಾಗಿದ್ದರು ಎಂದು ನವಕರ್ನಾಟಕ ನಿರ್ಮಾಣ ವೇದಿಕೆ ಜಿಲ್ಲಾಧ್ಯಕ್ಷ ಪಿ. ಶೇಖರ್ ಅಭಿಪ್ರಾಯಪಟ್ಟರು.
ನವಕರ್ನಾಟಕ ನಿರ್ಮಾಣ ವೇದಿಕೆ ಜಿಲ್ಲಾ ಘಟಕವು ಸಂಘದ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಸಂತಾಪ ಸೂಚಕ ಸಭೆಯಲ್ಲಿ ಜಿಎಸ್ಸೆಸ್‌ರ ಭಾವಚಿತ್ರಕ್ಕೆ ಪುಷ್ಪಹಾರ ಹಾಕಿ ಪೂಜೆ ಸಲ್ಲಿಸಿದ ಬಳಿಕ ಅವರು ಮಾತನಾಡಿದರು.
ಜಿ.ಎಸ್. ಶಿವರುದ್ರಪ್ಪ ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕವು ಓರ್ವ ಸಾಹಿತ್ಯ ದಿಗ್ಗಜರನ್ನು ಕಳೆದುಕೊಂಡಂತಾಗಿದೆ ಎಂದರು.
ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರು ಸಮನ್ವಯದ ಕವಿಯಾಗಿದ್ದು, ಮುಂದಿನ ಪೀಳಿಗೆಗೆ ಸಮನ್ವಯದ ಹಣತೆ ಹಚ್ಚಿಟ್ಟು, ಅದು ವೈಚಾರಿಕ ಬೆಳಕು ಚೆಲ್ಲುವಂತೆ ಮಾಡಿದ್ದಾರೆ. ಅವರು ಜೀವಂತವಾಗಿಲ್ಲದಿದ್ದರೂ ಅವರ ಕವನಗಳು ಮತ್ತು ಅವುಗಳಲ್ಲಿರುವ ಮಾನವೀಯ ಮೌಲ್ಯಗಳು ಜೀವಂತವಾಗಿರುತ್ತವೆ ಎಂದು ತಿಳಿಸಿದರು. ನಂತರ ಜಿಎಸ್ಸೆಸ್ ಅವರ ಆತ್ಮಕ್ಕೆ ಶಾಂತಿ ಕೋರಿ ಸಂಘದ ಪದಾಧಿಕಾರಿಗಳು ಶ್ರದ್ಧಾಂಜಲಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವೇದಿಕೆ ಪದಾಧಿಕಾರಿಗಳಾದ ಕೆ. ಕುಪ್ಪುಸ್ವಾಮಿ, ಎಂ. ವಿಶ್ವನಾಥ, ಬಿ. ನಾರಾಯಣಸ್ವಾಮಿ, ಕೃಷ್ಣಮೂರ್ತಿ, ಕರುಣ, ದಿಲೀಪ್, ಉದಯಕುಮಾರ್, ಶಿವಾಜಿ, ರವಿ ಹಾಗೂ ಪಿ. ರಾಜಾಸಾಬ್ ಸೇರಿದಂತೆ ವೇದಿಕೆ ಕಾರ್ಯಕರ್ತರು ಮತ್ತು ಇತರರು ಇದ್ದರು.