ಮಕ್ಕಳನ್ನೆ ಪರಿಸರ ರಾಯಭಾರಿಗಳನ್ನಾಗಿಸಿ
ಕನ್ನಡಪ್ರಭವಾರ್ತೆ, ಹಗರಿಬೊಮ್ಮನಹಳ್ಳಿ, ಡಿ. 30
ಮರಗಳ ಉಪಯುಕ್ತತೆ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವುದು ಪ್ರಸಕ್ತ ದಿನಗಳಲ್ಲಿ ತೀರಾ ಅಗತ್ಯವಿದೆ. ಮಕ್ಕಳನ್ನೆ ಪರಿಸರ ರಾಯಭಾರಿಗಳನ್ನಾಗಿ ರೂಪಿಸಿ, ಆ ಮೂಲಕ ಪಾಲಕರಲ್ಲಿ ಪರಿಸರ ಕಾಳಜಿ, ಜಾಗೃತಿ ಮೂಡಿಸುವ ಪ್ರಯತ್ನಗಳು ಆಗಬೇಕು ಎಂದು ಹಗರಿಬೊಮ್ಮನಹಳ್ಳಿ ತಾಲೂಕು ಕಸಾಪ ಮಾಜಿ ಅಧ್ಯಕ್ಷ ಮಾತಾಗ್ಯಾಸ್ ಯರ್ರಿಸ್ವಾಮಿ ಶಿಕ್ಷಕರಿಗೆ ಸಲಹೆ ನೀಡಿದರು.
ಹಗರಿಬೊಮ್ಮನಹಳ್ಳಿ ತಾಲೂಕಿನ ಅಂಕಸಮುದ್ರ ಗ್ರಾಮದ ಕೆರೆ ಏರಿಯಲ್ಲಿನ ಬೇವಿನಹೆಮ್ಮರದ ಬುಡದಲ್ಲಿ ಚಿಲಿಪಿಲಿ ಬಳಗ ಆಯೋಜಿಸಿದ್ದ ಮಕ್ಕಳಿಗಾಗಿ ಮಕ್ಕಳಿಗೋಸ್ಕರ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದರು.
ದೊಡ್ಡವರಿಗಿಂತಲೂ ಮಕ್ಕಳಲ್ಲಿ ಪರಿಸರವನ್ನು ಪ್ರೀತಿಸಬೇಕೆಂಬ ಹಂಬಲ ಹೆಚ್ಚಿಸುವುದು ಭವಿಷ್ಯತ್ತಿನ ದೃಷ್ಟಿಯಿಂದ ಉತ್ತಮ ಕಾರ್ಯ ಎನ್ನಬಹುದು. ಮುಖ್ಯವಾಗಿ ಶಾಲೆಗಳಲ್ಲಿ ಪಠ್ಯದ ಜೊತೆಯಲ್ಲಿಯೇ ಪರಿಸರ ಜ್ಞಾನ ಮತ್ತು ಸಾಮಾನ್ಯ ತಿಳಿವಳಿಕೆ ಮೂಡಿಸುವ ವಿಷಯಗಳನ್ನು ಕಲಿಸುವತ್ತ ಶಿಕ್ಷಕರು ಗಮನಹರಿಸಬೇಕೆಂದು ಮನವಿಮಾಡಿದರು.
ಸತ್ಸಂಗ ಸಮಿತಿ ಅಧ್ಯಕ್ಷ ಜಿ. ಲಕ್ಷ್ಮಿಪತಿ ಮಾತನಾಡಿ, ನಾವು ಮಕ್ಕಳಿಗೆ ಹಿಂದಿನ ಇತಿಹಾಸ ಮೆಲುಕು ಹಾಕುವಂತೆ ಮಾಡಬೇಕಿದೆ. ನಮ್ಮ ಋಷಿ ಮುನಿಗಳ ಆಧ್ಯಾತ್ಮಿಕ ಪರಂಪರೆ ಹುಟ್ಟಿ ಬೆಳೆದದ್ದೇ ಇಂತಹ ಮರಗಳ ಕೆಳಗೆ. ಮಕ್ಕಳಿಗೆ ಕಥೆಗಳೆಂದರೆ ಸಿಹಿಯಷ್ಟೇ ಇಷ್ಟ. ನಾವು ಯಾವುದನ್ನು ಅತಿ ಆಡಂಬರದಿಂದ ತೆಗೆದುಕೊಳ್ಳದೆ ಸರಳವಾಗಿ ಬದುಕು ರೂಪಿಸಿಕೊಳ್ಳಬೇಕೆಂದು ಹಿತವಚನ ನೀಡಿದರು.
ಚಿಲಿಪಿಲಿ ಬಳಗದ ಜಿಲ್ಲಾ ಅಧ್ಯಕ್ಷ ಎಲ್. ರೆಡ್ಡಿನಾಯ್ಕ, ತಾಲೂಕಾಧ್ಯಕ್ಷ ಹುರಕಡ್ಲಿ ಶಿವಕುಮಾರ, ಕ್ಷೇತ್ರ ಸಮನ್ವಯಾಧಿಕಾರಿ ಡಿಟಿತೇನ್ ಸಿಂಗ್ನಾಯ್ಕ, ಸಾಹಿತಿಗಳಾದ ಶಿವಾನಂದ ಶಿಶುವಿನಹಳ್ಳಿ, ಅಕ್ಕಿ ಬಸವೇಶ್, ಓಂಪ್ರಕಾಶ, ಶಿರೂರು ಮಲ್ಲಿಕಾರ್ಜುನ ಚಿಲಿಬಳಗದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ. ಕೊಟ್ರಪ್ಪ, ಕೆ.ಎಸ್. ವಿರೇಶ್, ಜಿಲ್ಲಾ ಖಜಾಂಚಿ ಎ. ಕರಿಬಸಪ್ಪ ಹಾಜರಿದ್ದರು.