ಮಠಾಧೀಶ್ವರ ಧರ್ಮ ಪರಿಷತ್ ಕಾರ್ಯಾಲಯ ಉದ್ಘಾಟನೆ
ಬಳ್ಳಾರಿ: ಸ್ಥಳೀಯ ಮಠಾಧೀಶ್ವರ ಧರ್ಮ ಪರಿಷತ್‌ನಿಂದ ನಗರದ ಮಿಲ್ಲರ್ ಪೇಟೆಯಲ್ಲಿರುವ ಕಲ್ಯಾಣಸ್ವಾಮಿ ಮಠದಲ್ಲಿ ಭಾನುವಾರ ಮಠಾಧೀಶ್ವರ ಧರ್ಮ ಪರಿಷತ್‌ನ ಕಾರ್ಯಾಲಯದ ಉದ್ಘಾಟನೆ ಹಾಗೂ ವಾರ್ಷಿಕ ದಿನದರ್ಶಿಕೆ (ಕ್ಯಾಲೆಂಡರ್) ಬಿಡುಗಡೆ ಕಾರ್ಯಕ್ರಮ ಜರುಗಿತು. ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ್ ಅವರು, ಮಠಾಧೀಶ್ವರ ಧರ್ಮ ಪರಿಷತ್ ಕಾರ್ಯಾಲಯದ ಉದ್ಘಾಟನೆ ಹಾಗೂ ವಿಜಯನಾಮ ಸಂವತ್ಸರದ ವಾರ್ಷಿಕ ದಿನದರ್ಶಿಕೆ (ಕ್ಯಾಲೆಂಡರ್) ಬಿಡುಗಡೆಗೊಳಿಸಿದರು. ನಂತರ ಅವರು ಮಾತನಾಡಿ, ವ್ಯಕ್ತಿ ಎಷ್ಟೆ ಎತ್ತರಕ್ಕೆ ಬೆಳೆದರೂ ಆ ವ್ಯಕ್ತಿಗೆ ಗುರು-ಹಿರಿಯರ ಆಶೀರ್ವಾದ ಬಹಳ ಮುಖ್ಯ. ಪ್ರತಿಯೊಬ್ಬರೂ ಆದರ್ಶ ವ್ಯಕ್ತಿಗಳ ತತ್ವ, ಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದರು. ಶ್ರೀಗುರು ಕಲ್ಯಾಣ ವಿದ್ಯಾಲಯ ಸಂಸ್ಥಾಪಕ ಅಧ್ಯಕ್ಷರು, ಕಮ್ಮರಚೇಡುನ ಕಲ್ಯಾಣ ಸ್ವಾಮೀಜಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಎಮ್ಮಿಗನೂರು ಶ್ರೀಗಳು, ತೆಕ್ಕಲಕೋಟೆ ಶ್ರೀಗಳು, ಮರಿಯಮ್ಮನಹಳ್ಳಿ ಶ್ರೀಗಳು, ಚಾನುಕೋಟಿ ಶ್ರೀಗಳು, ಬೆಣ್ಣೆಹಳ್ಳಿ ಶ್ರೀ, ಕೊಟ್ಟೂರು ಶಂಕರ ಶ್ರೀಗಳು, ಶಾನವಾಸಪುರದ ಶ್ರೀಗಳು, ನಂದೀಪುರ ಶ್ರೀಗಳು, ಉರವಕೊಂಡ ಕಿರಿಯ ಶ್ರೀಗಳು, ಹರಗಿನಡೋನಿ ಶ್ರೀಗಳು, ಕರವೇ ಜಿಲ್ಲಾಧ್ಯಕ್ಷ ಜೆ.ಎಂ.ಬಸವರಾಜಸ್ವಾಮಿ, ಓ.ಎಂ. ಚನ್ನಬಸವಸ್ವಾಮಿ, ರುದ್ರಪ್ಪ ಇದ್ದರು.