ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ವೃತ್ತಿಶಿಕ್ಷಣ ಬಿಕ್ಕಟ್ಟು ಶಾಶ್ವತ ಪರಿಹಾರಕ್ಕೆ ಆಗ್ರಹ

Lingaraj Badiger
Updated On : 31 Dec 2013, 1:37 am

ಬಳ್ಳಾರಿ: ಎರಡು ದಶಕಗಳಿಂದಲೂ ವರ್ಷದಿಂದ ವರ್ಷಕ್ಕೆ ಜಟಿಲವಾಗುತ್ತಿರುವ ವೃತ್ತಿ ಶಿಕ್ಷಣದ ಪ್ರವೇಶ ನೀತಿ, ಶುಲ್ಕ ನೀತಿಯ ಬಿಕ್ಕಟ್ಟಿನ ಶಾಶ್ವತ ಪರಿಹಾರವನ್ನು ಸರ್ಕಾರ ಕೈಗೊಳ್ಳಬೇಕು ಎಂದು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಶ್ರೀ ಕನಕದುರ್ಗಮ್ಮ ದೇವಸ್ಥಾನದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಅಂಡರ್ ಬ್ರಿಡ್ಜ್ ಮೂಲಕ ಗಡಿಗಿ ಚನ್ನಪ್ಪ ವೃತ್ತ ತಲುಪಿ, ಅಲ್ಲಿ ಮಾನವ ಸರಪಳಿ ರಚಿಸಿ, ರಸ್ತೆ ತಡೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಜಿಲ್ಲಾಡಳಿತ ಮೂಲಕ ಮುಖ್ಯಮಂತ್ರಿಗೆ ಎಬಿವಿಪಿ ಕಾರ್ಯಕರ್ತರು ಮನವಿ ಸಲ್ಲಿಸಿದರು.
ಶುಲ್ಕ ನಿರ್ಧರಿಸಿ: ಎಬಿವಿಪಿ ನಗರ ಕಾರ್ಯದರ್ಶಿ ವೈ. ವಿನೋದ್‌ಕುಮಾರ್ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ, ವೃತ್ತಿ ಶಿಕ್ಷಣ ಪಡೆಯಬೇಕೆಂದು ವಿದ್ಯಾರ್ಥಿಗಳಿಗೆ ಶೇ. 50್ಢ50 ಸೀಟು ಹಂಚಿಕೆ ಅನುಪಾತವನ್ನು ಜಾರಿಗೊಳಿಸಬೇಕು. (ಶೇ. 50 ಸರ್ಕಾರಿ ಸೀಟು, ಶೇ. 50 ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಸೀಟು) ಹಾಗೂ ಶೇ. 50ರಷ್ಟು ಸರ್ಕಾರದ ಸೀಟುಗಳಿಗೆ ವಿದ್ಯಾರ್ಥಿಗಳು ಭರಿಸಬಹುದಾದ ಕಡಿಮೆ ಶುಲ್ಕವನ್ನು ನಿರ್ಧರಿಸಬೇಕು. ಶೇ. 50 ಸೀಟು ಆಡಳಿತ ಮಂಡಳಿ ಸೀಟುಗಳಿಗೆ ಹೆಚ್ಚುವರಿ ಶುಲ್ಕ ನಿರ್ಧಾರ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.
ಮೇಲ್ವಿಚಾರಣಾ ಸಮಿತಿ ಮುಂದುವರಿಸಿ:
ಸರ್ಕಾರದ ಪ್ರತಿಶತ 100 ಸೀಟುಗಳನ್ನು ಸರ್ಕಾರ ಕೇಂದ್ರೀಯ ಪ್ರವೇಶ ನೀತಿ ಹಾಗೂ ಏಕಗವಾಕ್ಷಿ ಮೂಲಕ ಪ್ರವೇಶಾತಿ ನೀಡಬೇಕು. ರಾಜ್ಯದಲ್ಲಿ ವೃತ್ತಿ ಶಿಕ್ಷಣದ ಪ್ರವೇಶ ನೀತಿ, ಶುಲ್ಕ ನೀತಿಗಳಿಗೆ ಒಪ್ಪಂದ ಮಾಡಿಕೊಂಡು ಶೋಷಣೆಗೆ ಅವಕಾಶ ನೀಡುವುದನ್ನು ನಿಯಂತ್ರಿಸಲು ಕೂಡಲೇ ಶಾಸನ ರೂಪಿಸಬೇಕು. ವೃತ್ತಿ ಶಿಕ್ಷಣದ ಯಾವುದೇ ಸಮಸ್ಯೆಗೆ ಪರಿಹಾರ ನೀಡಲು ಸರ್ಕಾರ ಕೂಡಲೇ ದೂರು ಕೇಂದ್ರ ತೆರೆಯಬೇಕು ಹಾಗೂ ಶೇ. 100 ಪ್ರತಿಶತ ಸೀಟುಗಳ ಪ್ರವೇಶ ಮತ್ತು ಶುಲ್ಕ ನೀತಿಗಳನ್ನು ಗಮನಿಸಲು ಮೇಲ್ವಿಚಾರಣಾ ಸಮಿತಿಗಳನ್ನು ಮುಂದುವರಿಸಬೇಕು ಮತ್ತು ಕ್ರಮ ಜರುಗಿಸುವ ಅಧಿಕಾರವನ್ನು ನೀಡಬೇಕು ಎಂದು ಸಲ್ಲಿಸಿರುವ ಮನವಿಯಲ್ಲಿ ಆಗ್ರಹಿಸಿದೆ.
ರಾಜ್ಯ ಸರ್ಕಾರ ವೃತ್ತಿ ಶಿಕ್ಷಣ ಶುಲ್ಕನೀತಿ ಮತ್ತು ಪ್ರವೇಶ ನೀತಿ (ಸೀಟು ಹಂಚಿಕೆ) ಬಿಕ್ಕಟ್ಟಿಗೆ ಪರಿಹಾರ ಕಂಡು ಹಿಡಿಯುವ ಸಂದರ್ಭದಲ್ಲಿ ವಿದ್ಯಾರ್ಥಿಗಳು, ಪೋಷಕರುಗಳ ಆರ್ಥಿಕ-ಶೈಕ್ಷಣಿಕ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಅವರು ಭರಿಸಬಹುದಾದ ಶುಲ್ಕ ಭರಿಸಬಹುದಾದ ಸಾಮರ್ಥ್ಯ ಆಧರಿಸಿ, ಸಾಮಾಜಿಕ ನ್ಯಾಯ ಒದಗಿಸುವ ಹಿನ್ನೆಲೆಯಲ್ಲಿ ಶುಲ್ಕ, ಪ್ರವೇಶ ನೀತಿಗಳನ್ನು ನಿರ್ಧರಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಎಬಿವಿಪಿಯ ತಾಲೂಕು ಸಂಚಾಲಕ ವಿವೇಕ್, ರಾಜ್ಯ ಕಾರ್ಯಕಾರಿಣಿ ಸದಸ್ಯ ರವಿಗೌಡ, ಮಂಜುನಾಥ ರಾಠೋಡ್, ಕೇದಾರ್‌ನಾಥ್, ಸಿ.ಕೆ. ರಾಮಾಂಜಿನಿ ಸೇರಿದಂತೆ ಅನೇಕ ಎಬಿವಿಪಿ ಕಾರ್ಯಕರ್ತರು, ಬಳ್ಳಾರಿಯ ನಾರಾಯಣ ಕಾಲೇಜು, ನಳಂದ ಕಾಲೇಜು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement