ಸ್ಲಂ ಮಕ್ಕಳ ಪ್ರತಿಭೆ ಗುರುತಿಸುವಂತಾಗಲಿ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಡಿ. 30
ಮಕ್ಕಳ ಜಾತ್ರೆ ಕೇವಲ ನಗರ ಮಟ್ಟದಲ್ಲಿ ಮಕ್ಕಳ ಪ್ರತಿಭೆ ಗುರುತಿಸಬಾರದು, ಸ್ಲಂ ಪ್ರದೇಶದಲ್ಲಿರುವ ಮಕ್ಕಳ ಪ್ರತಿಭೆಯೂ ಗುರುತಿಸುವಂತಾಗಲಿ ಎಂದು ರೋಟರಿ ಕ್ಲಬ್ ಅಧ್ಯಕ್ಷ ಎಚ್. ಶ್ರೀನಿವಾಸ್ ರಾವ್ ಹೇಳಿದರು.
ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಕ್ಕಳ ಜಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರತಿಭಾ ವೇದಿಕೆಗಳ ಮೂಲಕ ಮಕ್ಕಳ ಪ್ರತಿಭೆಗಳು ಗುರುತಿಸಲು ತುಂಬ ಉಪಯುಕ್ತವಾಗಿವೆ. ಪ್ರತಿಭಾವಂತರಿಗೆ ಸೂಕ್ತ ವೇದಿಕೆಗಳ ಅಗತ್ಯವಿದೆ. ಸಂಘ-ಸಂಸ್ಥೆಗಳು ಪ್ರತಿಭಾವಂತರ ಪ್ರತಿಭೆಯನ್ನು ಅನಾವರಣಗೊಳಿಸಲು ಸಾಂಸ್ಕೃತಿಕ ಕಾರ್ಯಕ್ರಮ, ಕ್ರೀಡಾಕೂಟ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ನಡೆಸುವ ಮೂಲಕ ಪ್ರತಿಭಾವಂತರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ರೋಟರಿ ಕ್ಲಬ್ ಕಾರ್ಯದರ್ಶಿ ಸಯ್ಯದ್ ಮಹಮ್ಮದ್ ಮಾತನಾಡಿ, ಮಕ್ಕಳಿಗೆ ಓದುವಿನ ಜತೆಗೆ ಸಾಮಾಜಿಕ ಬೆಳವಣಿಗೆ ಮತ್ತು ಸಾರ್ವಜನಿಕವಾಗಿ, ಸರ್ವತೋಮುಖ ಅಭಿವೃದ್ಧಿಯಾಗಲು ಇಂತಹ ಕಾರ್ಯಕ್ರಮಗಳು ಮಕ್ಕಳಿಗೆ ಅವಶ್ಯವಾಗಿವೆ. ಮಕ್ಕಳಿಗೆ ಗಮನಿಸುವ ಹಾಗೂ ಜ್ಞಾಪಕ ಶಕ್ತಿ ಹೆಚ್ಚಾಗಿರುತ್ತದೆ. ಒಂದು ಚಿತ್ರ ನೋಡಿ ಅದರ ಚಿತ್ರವನ್ನು ಬಿಡಿಸುತ್ತಾರೆ. ಇದೇ ರೀತಿ ಶಿಕ್ಷಣದಲ್ಲಿ ಆಸಕ್ತಿ ವಹಿಸಿದ್ದರೆ ಎಲ್ಲರೂ ಪ್ರಥಮ ದರ್ಜೆಯಲ್ಲಿ ಪಾಸಾಗುತ್ತಾರೆ ಎಂದರು.
ಶಿಶು ಮತ್ತು ಮಹಿಳಾ ಅಭಿವೃದ್ಧಿ ಯೋಜನಾಧಿಕಾರಿ ಪರಮೇಶ್ವರಪ್ಪ, ಸರ್ಕಾರಿ ಪ್ರೌಢಶಾಲೆ ಮುಖ್ಯಗುರು ಧನರಾಜ್ ಸೇರಿದಂತೆ ಇತರರು ಸಭೆಯಲ್ಲಿ ಮಾತನಾಡಿದರು. ಸಮಾನ ಮಕ್ಕಳ ಮಂಟಪದ ಅಭಿಷೇಕ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಹೊಸಪೇಟೆ ಸ್ಲಂ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್. ಹುಲಿಗೆಮ್ಮ, ಅಧ್ಯಕ್ಷ ಕೆ. ಸುನೀಲ್, ಯುವಘಟಕದ ಎಂ. ಹನುಮಂತರಾಯ ಇತರರು ಸಭೆಯಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಜಾನಪದ ಹಾಡು ಮತ್ತು ನೃತ್ಯ, ಸ್ಥಳೀಯ ಸಂಪ್ರದಾಯಗಳನ್ನು ತೋರಿಸುವ ವೇಷಧಾರಣೆ, ಏಕಪತ್ರಾಭಿನಯ, ನಾಟಕ, ಕೋಲಾಟ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಭೆಯಲ್ಲಿ ಯಶಸ್ವಿಯಾಗಿ ನಡೆದವು.
ಸಮಾನ ಮಕ್ಕಳ ಮಂಟಪದ ಸಂಯೋಜಕ ಕೆ. ವೆಂಕಟೇಶುಲು ಪ್ರಾಸ್ತಾವಿಕ ಮಾತನಾಡಿದರು.