ಕೆಲಸ ಮಾಡಿ ಇಲ್ಲವೇ ತೊಲಗಿ
ಕನ್ನಡಪ್ರಭ ವಾರ್ತೆ, ಹಗರಿಬೊಮ್ಮನಹಳ್ಳಿ, ಡಿ. 31
ಕೆಲಸ ಮಾಡುವ ಇಷ್ಟ ಇಲ್ಲದಿದ್ದರೆ ದಯವಿಟ್ಟು ಬೇರೆ ಕಡೆಗೆ ವರ್ಗಾವಣೆ ಮಾಡಿಸಿಕೊಂಡು ಹೊರಟು ಹೋಗಿ ಬಿಡಿ. ಅದು ಬಿಟ್ಟು ಸುಮ್ಮನೆ ಕ್ಷೇತ್ರದ ಜನತೆಗೆ ಯಾಕೆ ತೊಂದರೆ ಕೊಡ್ತೀರಾ ಎಂದು ವಸತಿ ಯೋಜನೆ ಜಾರಿ ವಿಚಾರದಲ್ಲಿ ಬೇಜವಾಬ್ದಾರಿತನದಿಂದ ವರ್ತಿಸುತ್ತಿರುವ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳಿಗೆ ಹಗರಿಬೊಮ್ಮನಹಳ್ಳಿ ಶಾಸಕ ಎಸ್. ಭೀಮಾನಾಯ್ಕ ತರಾಟೆಗೆ ತೆಗೆದುಕೊಂಡರು.
ಮಂಗಳವಾರ ಮಧ್ಯಾಹ್ನ ಹಗರಿಬೊಮ್ಮನಹಳ್ಳಿ ತಾಪಂ ಮಹಾತ್ಮಾ ಗಾಂಧಿ ಸಭಾಂಗಣದಲ್ಲಿ ಜರುಗಿದ ವಸತಿ ಜಾಗೃತಿ ಸಭೆಯಲ್ಲಿ ಕ್ಷೇತ್ರದಲ್ಲಿ ಬಸವ ವಸತಿ ಯೋಜನೆ ಅನುಷ್ಠಾನದ ವಿಚಾರದಲ್ಲಿ ವಿಳಂಬವಾಗುತ್ತಿರುವುದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಿರ್ಲಕ್ಷ್ಯ ತೋರಿದರೆ ಪಿಡಿಒಗಳೇ ಹೊಣೆ: ನೀವು ಮಾಡುವ ಇಂತಹ ಕೆಲ್ಸದಿಂದ ಇವತ್ತು ನಾವು ಕ್ಷೇತ್ರದಲ್ಲಿ ಜನತೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಆಗದಂಥ ವಾತಾವರಣ ನಿರ್ಮಾಣವಾಗಿದೆ. ಇದೆ ಕೊನೆ, ಇನ್ಮುಂದೆ ವಸತಿ ಯೋಜನೆ ವಿಚಾರದಲ್ಲಿ ನಿರ್ಲಕ್ಷ್ಯ ತೋರಿಸಿದ್ದು ಕಂಡು ಬಂದರೆ ಅಂತಹ ಪಿಡಿಒಗಳನ್ನೇ ಹೊಣೆ ಮಾಡಿ ಅವರ ವಿರುದ್ಧ ಸೂಕ್ತಕ್ರಮಕ್ಕೆ ಶಿಫಾರಸು ಮಾಡುವ ಎಚ್ಚರಿಕೆಯನ್ನು ಶಾಸಕರು ಸಭೆಯಲ್ಲಿ ನೀಡಿದರು.
ಕ್ಷೇತ್ರಕ್ಕೆ ಬಸವ ವಸತಿ ಯೋಜನೆಯಡಿ ಪ್ರತಿ ಗ್ರಾಪಂಗೆ ತಲಾ 20ರಂತೆ 560 ಮನೆಗಳು ಮಂಜೂರಾಗಿದ್ದು, ಕ್ಷೇತ್ರದಲ್ಲಿ 28 ಗ್ರಾಪಂಗಳ ಪೈಕಿ ಡಣಾಪುರ, ಕಂದಗಲ್ಲು, ರಾಂಪುರ, ಕಡ್ಲಬಾಳು, ಕೊಗಳಿ, ಹಲಗಾಪುರ ಗ್ರಾಪಂಗಳನ್ನು ಹೊರತುಪಡಿಸಿ ಉಳಿದ 22 ಗ್ರಾಪಂಗಳ 440 ಮನೆಗಳಿಗೆ ಆಯ್ಕೆಯಾಗಿರುವ ಫಲಾನುಭವಿಗಳ ಪಟ್ಟಿಗೆ ಸಭೆಯಲ್ಲಿ ಶಾಸಕರು ಅನುಮೋದನೆ ಕೊಟ್ಟರು.
ಮೇಲಿನ 6 ಗ್ರಾಪಂಗಳಲ್ಲಿ ಸರಿಯಾದ ಗ್ರಾಮಸಭೆ ನಡೆಸದೆ, ಇಷ್ಟ ಬಂದವರಿಗೆ ಮನೆಗಳನ್ನು ಕೊಟ್ಟಿರುವ ಆರೋಪಗಳು ವ್ಯಾಪಕ ಪ್ರಮಾಣದಲ್ಲಿ ಬಂದಿರುವುದರಿಂದ ಈ ಪಂಚಾಯ್ತಿಗಳ ಫಲಾನುಭವಿಗಳ ಪಟ್ಟಿಯನ್ನು ತಾತ್ಕಲಿಕ ತಡೆಹಿಡಿಯುವಂತೆ ತಾಪಂ ಇಒಗೆ ಶಾಸಕರು ಸೂಚಿಸಿದರು.
ಸಭೆಗೂ ಮುನ್ನ ಇತ್ತೀಚೆಗೆ ನಿಧನರಾದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ, ದ. ಆಫ್ರಿಕಾ ಮಾಜಿ ಅಧ್ಯಕ್ಷ ನೆಲ್ಸನ್ ಮಂಡೇಲಾ, ಮೈಸೂರು ಅರಸ ಶ್ರೀಕಂಠದೇವರಾಯ ಒಡೆಯರ್ ಅವರ ಆತ್ಮಕ್ಕೆ ಶಾಂತಿ ಕೋರಿ ಎರಡು ನಿಮಿಷ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಮಮತಾ ಸುರೇಶ, ಜಿಪಂ ಸದಸ್ಯ ರೋಗಾಣಿ ಹುಲುಗಪ್ಪ, ತಾಲೂಕು ಪಂಚಾಯಿತಿ ಸದಸ್ಯರಾದ ಉಪ್ಪಾರ ಬಾಲಪ್ಪ, ಉಮೇಶ, ಭಾರತಮ್ಮ ಬೆಲ್ಲದ್, ಮಂಜುಳಾ ಕೃಷ್ಣನಾಯ್ಕ, ಅಂಜಿನಪ್ಪ, ಕ್ಯಾದಿಗಿಹಳ್ಳಿ ಲಕ್ಷ್ಮವ್ವ, ಹುಲಿಗೆಮ್ಮ ಹನುಮಜ್ಜ, ಚಿಂತ್ರಪಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಎಂ. ಆನಂದ್, ಹೊಸಪೇಟೆ ತಾಲೂಕು ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ತಳವಾರ, ಪಂರಾಇ ಎಇಇ ಆರ್. ಪ್ರಭು ಇತರರು ಸಭೆಯಲ್ಲಿ ಭಾಗವಹಿಸಿದ್ದರು. ಅನ್ನದಾನಯ್ಯ ನಿರೂಪಿಸಿದರು.