ಗೊಂದಲ, ಗೌರವ ಮಧ್ಯೆ ಗರಿಗೆದರಿದ ಗಣಿನಾಡು
ಬಳ್ಳಾರಿ: ಇತಿಹಾಸ ತಿಳಿಯದವ ಇತಿಹಾಸ ನಿರ್ಮಿಸಲಾರ ಹಾಗೇನೇ ಹಿಂದಿನ ವರ್ಷದ ಬೆಳವಣಿಗೆ ಅರಿಯದೆ, ಈ ವರ್ಷದಲ್ಲಿ ರಾಜಕೀಯ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಹೆಜ್ಜೆಗಳನ್ನಿಡಲು ಕಷ್ಟಸಾಧ್ಯ. ಆದರೂ 2013ರಲ್ಲಿ ನಡೆದ ಘಟನೆಗಳನ್ನು ಮೆಲುಕು ಹಾಕುತ್ತಾ, 2014ನೇ ವರ್ಷ ಸ್ವಾಗತಿಸೋಣ.
ಬಳ್ಳಾರಿಗರಿಗೆ ಸಿಹಿ-ಕಹಿ ನೀಡಿದ ವರ್ಷ 2013. ಗಣಿಗಾರಿಕೆಯಲ್ಲಿ ಅಕ್ರಮ ಮಾಡಿದವರಿಗೆ ಸಿಬಿಐ ತಕ್ಕಪಾಠ, ಕಾಂಗ್ರೆಸ್ ವಿರುದ್ಧ ಫಿನಿಕ್ಸ್‌ನಂತೆ ಮೇಲೆದ್ದ ಬಿಎಸ್ಸಾರ್, ಬಿಜೆಪಿ, ಜೆಡಿಎಸ್‌ಗೆ ಹಿನ್ನಡೆ, 'ಗಣಿ ತನಿಖೆ ಕುಣಿಯುತಲಿತ್ತು, ಗಣಿ ಆರೋಪದಲ್ಲಿ ಕಾಲಿಗೆ ಬಿದ್ದವರನ್ನು ತುಳಿಯುತಲಿತ್ತು...' ಎಂಬಂತೆ ತನಿಖೆ ಇನ್ನೂ ಸಾಗಿದೆ.
ರಾಜಕೀಯ ಘಟನಾವಳಿಗಳು: ಜಿಲ್ಲೆಯ 9 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ 4ರಲ್ಲಿ ಗೆದ್ದು, ಮಹಾನಗರ ಪಾಲಿಕೆ, ಬಹುತೇಕ ಸ್ಥಳೀಯ ಸಂಸ್ಥೆಗಳಲ್ಲಿ ಭದ್ರಕೋಟೆ ಭದ್ರಪಡಿಸಿಕೊಂಡಿದೆ. ಬಿಜೆಪಿ, ಬಿಎಸ್ಸಾರ್‌ಗೆ ಹಿನ್ನಡೆ. ವಿಧಾನಸಭೆಯಲ್ಲಿ ಜೆಡಿಎಸ್ ಎಚ್‌ಬಿ ಹಳ್ಳಿಯಲ್ಲಿ, ಬಿಜೆಪಿ ವಿಜಯನಗರದಲ್ಲಿ, ಬಿಎಸ್ಸಾರ್ ಬಳ್ಳಾರಿ ಗ್ರಾಮೀಣ, ಕಂಪ್ಲಿ, ಕೂಡ್ಲಿಗಿಯಲ್ಲಿ ಪಕ್ಷೇತರರು ಗೆದ್ದರು. ಕೈಬಿಟ್ಟ ಪಾಲಿಕೆ, ಜಿಪಂನಿಂದ ಶ್ರೀರಾಮುಲುರ ಬಿಎಸ್ಸಾರ್ ಪಡೆಗೆ ರಾಜಕೀಯದಲ್ಲಿ ಹಿನ್ನಡೆ ವರ್ಷ. ಬಿಜೆಪಿ ಅಧ್ಯಕ್ಷರಾಗಿ ನೇಮಿರಾಜ್ ನಾಯ್ಕ, ಕಾಂಗ್ರೆಸ್‌ನ ಭೀಮಾನಾಯ್ಕ ಬಿಎಸ್ಸಾರ್‌ಗೆ, ಅಲ್ಲಿಂದ ಜೆಡಿಎಸ್ ಸೇರ್ಪಡೆಯಾಗಿ ಶಾಸಕನಾದ. ಜೆಡಿಎಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸೂರ್ಯನಾರಾಯಣ ರೆಡ್ಡಿ ರಾಜಿನಾಮೆ, ಕಾಂಗ್ರೆಸ್‌ನಲ್ಲಿ ಕೊಂಡಯ್ಯ ವಿರುದ್ಧ ರಾಜೀವ್ ಗಾಂಧಿ ಮೆಮೋರಿಯಲ್ ಟ್ರಸ್ಟ್ ಭೂಮಿ ತೆಗೆದುಕೊಂಡಿದ್ದಾರೆಂಬ ಆರೋಪದಿಂದ ಅಸಮಾಧಾನದ ಹೊಗೆ. ಮತಪಟ್ಟಿಯಲ್ಲಿ ಎಂ.ಪಿ. ಶಾಂತಾ ಹೆಸರು ಮಾಯಾವಾಗಿದೆ ಎಂದು ಡಿಸಿ ವಿರುದ್ಧವೇ ಹರಿಹಾಯ್ದ ಸಂಸದೆ. ಜಿಪಂ ಅಧ್ಯಕ್ಷರಾಗಿ ಶೋಭಾ ಬೆಂಡಿಗೇರಿ ಆಯ್ಕೆ. ಮಂಗಳಮುಖಿ ಫರ್ವಿನ್ ಭಾನು ಮಹಾನಗರ ಪಾಲಿಕೆ ಸದಸ್ಯರಾಗಿದ್ದು, ಗಣಿ ನಾಡಿಗೆ ಡಾ. ಚೇತನಸಿಂಗ್ ರಾಥೋರ್ ಎಸ್ಪಿಯಾಗಿ ಬಂದಿದ್ದು...
ರಾಜಕೀಯದಲ್ಲಿ ತಾರಾ ಮೆರಗು, ಪ್ರತಿಭಟನೆ: ನಟಿ ಪೂಜಾ ಗಾಂಧಿ ಬಿಎಸ್ಸಾರ್ ಸೇರ್ಪಡೆ. ಗಣಿ ಜಿಲ್ಲೆಯ ಚುನಾವಣೆ ಪ್ರಚಾರಕ್ಕೆ ಅನಿಲ್ ಲಾಡ್ ಚಿರಂಜೀವಿಯನ್ನು ಬಳ್ಳಾರಿಗೆ ಕರೆಸಿದರೆ, ಅಬ್ದುಲ್ ವಹಾಬ್ ಸುನಿಲ್ ಶೆಟ್ಟಿ, ಆಪ್ತಾಬ್ ಖಾನ್, ಮಹಿಮಾ ಚೌಧರಿಯಿಂದ ಹೊಸಪೇಟೆಯಲ್ಲಿ ರೋಡ್ ಶೋ. ವಿಧಾನಸಭೆ ಚುನಾವಣೆ ಅಬ್ಬರಕ್ಕೆ ಶ್ರೀರಾಮುಲು ರು. 2 ಕೋಟಿ ವೆಚ್ಚದ ಹಮ್ಮರ್ ಕಾರ್ ಬಳಕೆ. ಫುಟ್‌ಪಾತ್ ವ್ಯಾಪಾರಿಗಳನ್ನು ಡಿಸಿ ಒಕ್ಕಲೆಬ್ಬಿಸಿದ್ದಾರೆ ಎಂದು ಆರೋಪಿಸಿ ಬಿಎಸ್ಸಾರ್‌ನ ಶ್ರೀರಾಮುಲು ನೇತೃತ್ವದಲ್ಲಿ ಪ್ರತಿಭಟಿಸಿದಾಗ ಶ್ರೀರಾಮುಲು, ಇತರರ ಬಂಧನ. ಗೊಂದಲದ ವಾತಾವರಣ. ಘಟನೆಯಲ್ಲಿ ಶ್ರೀರಾಮುಲು ಅಂಗಿ ಹರಿದಿತ್ತು. ಎಲ್‌ಎಲ್‌ಸಿ ಕಾಲುವೆಗೆ ಸಮರ್ಪಕ ನೀರು ಪೂರೈಕೆಗಾಗಿ ಜೆಡಿಎಸ್‌ನಿಂದ ನಿರಶನ- ಅಸ್ವಸ್ಥರಿಬ್ಬರು ಆಸ್ಪತ್ರೆಗೆ ದಾಖಲು. ಐಎಸ್‌ಆರ್ ಕಾರ್ಖಾನೆ ಆರಂಭಕ್ಕೆ ಆಗ್ರಹಿಸಿ ಶ್ರೀರಾಮುಲು ಹೊಸಪೇಟೆಯ ಐಎಸ್‌ಆರ್ ಕಾರ್ಖಾನೆ ಮುಂದೆ ಧರಣಿ.
ಜಿಲ್ಲೆಯಲ್ಲಿ ನಡೆದ ದುರಂತಗಳು: ಬೆಸ್ಟ್‌ಂ ಕಾಲೇಜು ವಿದ್ಯಾರ್ಥಿ ರವಿತೇಜಾ ಅನುಮಾನಾಸ್ಪದ ಸಾವು, ನಳಂದಾ ಕಾಲೇಜು ವಿದ್ಯಾರ್ಥಿ ಕೃಷ್ಣಮೂರ್ತಿ ಆತ್ಮಹತ್ಯೆ, ಬಳ್ಳಾರಿಯ ಬಸವನಕುಂಟೆಯಲ್ಲಿ 3 ಮಕ್ಕಳಿಗೆ ವಿಷವಿಟ್ಟು ತಾನು ಆತ್ಮಹತ್ಯೆ ಮಾಡಿಕೊಂಡ ತಂದೆ. ಕುಡಿತಿನಿ ಬಳಿ ಶಾಲೆ ವಾಹನ, ಸಾರಿಗೆ ಸಂಸ್ಥೆ ಬಸ್ ಡಿಕ್ಕಿ ಶಾಲೆಯಿಂದ ಮನೆಗೆ ಹೋಗುತ್ತಿದ್ದ 7 ವಿದ್ಯಾರ್ಥಿಗಳ ಸಾವು, 16 ಮಕ್ಕಳು ಆಸ್ಪತ್ರೆಗೆ ದಾಖಲು. ಅಲ್ಲೀಪುರ ಕಾಲುವೆಯಲ್ಲಿ ಎಂಜಿನಿಯರ್ ವಿದ್ಯಾರ್ಥಿಗಳಿಬ್ಬರು ಈಜಲು ಹೋಗಿ ನೀರುಪಾಲು. ಚೈತನ್ಯ ಕಾಲೇಜು ಪಿಯು ವಿದ್ಯಾರ್ಥಿ ಶಶಿಕುಮಾರ್ ಮಹಡಿಯಿಂದ ಬಿದ್ದು ಆತ್ಮಹತ್ಯೆ. ಸಿರುಗುಪ್ಪ ಹೊಳೆಯಲ್ಲಿ 3 ಹುಡುಗರು ಈಜಲು ಹೋಗಿ ನೀರುಪಾಲು. ಹೊಸಪೇಟೆ ಮಹೇಶಕುಮಾರ್, ರಾಘವತಿ ದಂಪತಿ ಆತ್ಮಹತ್ಯೆ 3 ಮಕ್ಕಳು ಅನಾಥ. ಕುಡಿತಿನಿಯಲ್ಲಿ ಬೆಂಕಿ ಆಕಸ್ಮಿಕ 20 ಗುಡಿಸಲುಗಳು ಭಸ್ಮ.
ಅಪಘಾತಗಳು, ಕೊಲೆ, ವಂಚನೆ, ಪರಾರಿ: ಸಿರುಗುಪ್ಪ ರಸ್ತೆಯ ಸೋಮಸಮುದ್ರ ಬಳಿ ರಸ್ತೆ ಅಪಘಾತ 6 ಜನರು ಸ್ಥಳದಲ್ಲೇ ಸಾವು. ಬಳ್ಳಾರಿ ತಾಲೂಕಿನ ಚೇಳ್ಳಗುರ್ಕಿ ಬಳಿ ಕಾರಿಗೆ ಬೆಂಕಿ ಇಬ್ಬರು ಸಜೀವ ದಹನ. ದಲಿತ ಮುಖಂಡ ಛಲಪತಿ ಹಾಡುಹಗಲೆ ಕೊಲೆ. ಸಂಡೂರಿನ ಪೆಟ್ರೋಲ್ ಬಂಕ್‌ನಲ್ಲಿ ಹಣಕ್ಕಾಗಿ ಸ್ನೇಹಿತನಿಂದಲೆ ಮಿತ್ರನ ಕೊಲೆ, ವಾಹನವೊಂದರ ನಂಬರ್‌ಪ್ಲೇಟ್‌ನಲ್ಲಿ ದೆಹಲಿ ಪತ್ರಿಕೆ ಹೆಸರಿನ ಜತೆ ರಾಷ್ಟ್ರೀಯ ಲಾಂಛನ, ಗವರ್ನ್‌ಮೆಂಟ್ ಆಫ್ ಇಂಡಿಯಾ ಎಂದು ಮುದ್ರಿಸಿ ಜನರನ್ನು ವಂಚಿಸುತ್ತಿದ್ದ ಮೂವರ ಸೆರೆ. ವಿಮ್ಸ್‌ನಲ್ಲಿ ಹೆಣ್ಣುಮಗುವೊಂದನ್ನು ಅಪಹರಿಸಲು ಯತ್ನಿಸಿದ ಇಬ್ಬರು ಮಹಿಳೆಯರ ಸೆರೆ. ಡಿಸಿ ನಗರದ ಮೇಲೆ ಜಸ್ಟೀಸ್ ಆ್ಯಂಡ್ ಕೇರ್ ಸಂಸ್ಥೆ ಹಾಗೂ ಪೊಲೀಸರು ಜಂಟಿ ದಾಳಿ: ವೇಶ್ಯಾವಾಟಿಕೆಗೆ ಬಳಸುತ್ತಿದ್ದ 70 ಮಹಿಳೆಯರ ರಕ್ಷಣೆ, ದಂಧೆ ನಡೆಸುತ್ತಿದ್ದ 20ಕ್ಕೂ ಹೆಚ್ಚು ಜನರ ಸೆರೆ. ಬಳ್ಳಾರಿ ಜೈಲಿನ ಇಬ್ಬರು ಕೈದಿಗಳು ಪರಾರಿ. ಸಿನಿಮೀಯ ಶೈಲಿಯಲ್ಲಿ ಗೋಡೆ ಹಾರಿ ಓಡಿ ಹೋದ ಕೈದಿಗಳು, ಓರ್ವನ ಸೆರೆ. ಅಕ್ರಮ ಮರಳು ದಂಧೆಕೋರರಿಂದ ಪೊಲೀಸರ ಮೇಲೆ ಹಲ್ಲೆ, ಆರೋಪಿಗಳ ಬಂಧನ. ಶಿಕ್ಷಕನ ಮೇಲೆ ಹಲ್ಲೆ ಆರೋಪ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಸದಸ್ಯ ಅಂದ್ರಾಳ್ ಸೀತಾರಾಂ ಎಪಿಎಂಸಿ ಠಾಣೆ ಪೊಲೀಸರಿಂದ ಬಂಧನ.
ಗಣಿ, ಕೋರ್ಟ್ ವಿಷಯ, ವಿವಾದ, ಸಿಬಿಐ ತನಿಖೆ: ಕಾರು ಬಿಡುಗಡೆಗಾಗಿ ಸುನಿಲ್ ರೆಡ್ಡಿಯಿಂದ ಆಂಧ್ರ ಸಿಬಿಐ ಕೋರ್ಟ್‌ಗೆ ಮನವಿ, ಹೈದ್ರಾಬಾದ್ ಸಿಬಿಐ ಕೋರ್ಟ್ ಆದೇಶದಂತೆ ಜನಾರ್ದನ ರೆಡ್ಡಿಯ ರೋಲ್ಸ್‌ರಾಯ ಕಾರು ಕೋರ್ಟಿನಿಂದ ಬಿಡುಗಡೆ. ಜೈಲಿನಲ್ಲೇ ಜನಾರ್ದನ ರೆಡ್ಡಿ ಜನ್ಮದಿನಾಚರಣೆ. ಜನಾರ್ದನ ರೆಡ್ಡಿ, ಶ್ರೀರಾಮುಲುಗೆ ಸೇರಿದ ರುಕ್ಮಣಮ್ಮ ಅವೆನ್ಯೂ ಕಾಂಪೌಂಡನ್ನು ಅತಿಕ್ರಮಣವಾಗಿ ಕಟ್ಟಿದ್ದಾರೆಂದು ಬುಡಾದಿಂದ 30 ಕಡೆ ತೆರವು ಮಾಡಿದ ಬುಡಾ-ಪೊಲೀಸ್ ಇಲಾಖೆ. ಅಕ್ರಮ ಗಣಿಗಾರಿಕೆ ಆರೋಪ ಹಿನ್ನೆಲೆಯಲ್ಲಿ ಹಲವು ಸಂದರ್ಭದಲ್ಲಿ ಸಿಬಿಐ ಅಧಿಕಾರಿಗಳು ಬಳ್ಳಾರಿಗೆ ಭೇಟಿ, ಪರಿಶೀಲನೆ, ರೆಡ್ಡಿ ಆಪ್ತರ ಬಂಧನ. ಗಣಿಗಾರಿಕೆ ವಿಷಯಕ್ಕೆ ಸಂಬಂಧಿಸಿದಂತೆ ಡೆಕ್ಕನ್ ಮೈನಿಂಗ್ ಸಿಂಡಿಕೇಟ್‌ನ ರಾಜೇಂದ್ರ ಕುಮಾರ್ ಜೈನ್, ರಿತೇಶ್ ಜೈನ್, ಸಿಪಿಐ ರಮಾಕಾಂತ ಸೆರೆ. ಅಮೇಜಿಂಗ್ ವ್ಯಾಲಿ ರೆಸಾರ್ಟ್‌ಗೆ ಸಂಬಂಧಿಸಿದಂತೆ ಅನಿಲ್ ಲಾಡ್ ಅತ್ತಿಗೆ ರಜನಿ ಲಾಡ್ ವಿರುದ್ಧ ಸಂಡೂರು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ದೋಷಾರೋಪಣ ಪಟ್ಟಿ ಸಲ್ಲಿಕೆ. 27 ಗಣಿ ಕಂಪನಿಗಳ ಮೇಲೆ ಎಫ್‌ಒಸಿ ಪ್ರಕರಣ ದಾಖಲು. ಸಿಬಿಐನಿಂದ ಅಕ್ರಮ ಗಣಿಗಾರಿಕೆ, ಬೇಲೆಕೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆ ಹಲವರ ವಿರುದ್ಧ ದೋಷಾರೋಪಣ ಪಟ್ಟಿ ಸಲ್ಲಿಕೆ. ತನಿಖೆ, ವಿಚಾರಣೆ. ರುಕ್ಮಣಮ್ಮ ಅವೆನ್ಯೂ ಕುರಿತು ಶ್ರೀರಾಮುಲು, ಇತರ 6 ಜನರ ಮೇಲೆ ಲೋಕಾ ತನಿಖೆಗೆ ಕೋರ್ಟ್ ಆದೇಶ.
ಕುತೂಹಲ, ನಿಧನ, ಥಳಿತ, ಹೋರಾಟ, ಇತರೆ: ಮಾಜಿ ಶಾಸಕ ಎನ್. ಸೂರ್ಯನಾರಾಯಣ ರೆಡ್ಡಿ ತಮ್ಮ ಮಗನ ಮದುವೆಗೆ ದೇಶದಲ್ಲಿಯೇ ದುಬಾರಿ ಲಗ್ನ ಪತ್ರಿಕೆ ಮುದ್ರಣ. ಒಂದು ಪತ್ರಿಕೆ ಬೆಲೆ ರು. 15 ಸಾವಿರ, ದೇಶದ ಅತಿ ದುಬಾರಿ ಲಗ್ನ ಪತ್ರಿಕೆ ಇದು. ಬಳ್ಳಾರಿ ಜಿಲ್ಲೆಯ ಸಿರುಗುಪ್ಪದ ಮಾಜಿ ಸಚಿವ ಬಿ.ಇ. ರಾಮಯ್ಯ ನಿಧನ. ಮಹಿಳೆಯೊಂದಿಗೆ ಅಸಭ್ಯ ವರ್ತನೆ- ಆರ್‌ಟಿಓ ಇನ್ಸ್‌ಪೆಕ್ಟರ್‌ಗೆ ಸಾರ್ವಜನಿಕರಿಂದ ಥಳಿತ. ಕಬ್ಬು ಬೆಳೆಗಾರರ ಸಂಕಷ್ಟ ಬೀದಿಗಿಳಿದು ರೈತರ ಹೋರಾಟ. ವಿಮ್ಸ್‌ನಲ್ಲಿ ಅದಲು ಬದಲಾದ ಮಕ್ಕಳ ಪ್ರಕರಣ, ಕೊನೆಗೆ ಹೆತ್ತಮ್ಮಳ ಮಡಿಲು ಸೇರಿದ ಮಕ್ಕಳು. ಸಂಡೂರು ಐಬಿಎಂ ಅಧಿಕಾರಿ ಇಬ್ರಾಹಿಂ ಷರೀಫ್ ನಾಪತ್ತೆ- ಮಗನ ಹುಡುಕಿಕೊಡಿ ಎಂದು ಡಿಸಿ ಮೊರೆ ಹೋದ ಇಬ್ರಾಹಿಂ ಪೋಷಕರು. ಯುವತಿ ಮೇಲೆ ಹಲ್ಲೆ ಆರೋಪಕ್ಕೆ ಸಂಬಂಧಿಸಿದಂತೆ ರಾಯಚೂರು ಸಂಸದ ಫಕ್ಕೀರಪ್ಪ ಪುತ್ರ ಸೇರಿ 6 ಜನರ ಬಂಧನ ಇವಿಷ್ಟು ಗತಿಸುತ್ತಿರುವ ವರ್ಷದ ಹೈಲೈಟ್ಸ್.
ಪದವಿ, ಪುರಸ್ಕಾರ, ವಿವಿ ಗೊಂದಲ
ಬಳ್ಳಾರಿ ವಿಜಯನಗರ ವಿವಿ ಚೊಚ್ಚಲ ಘಟಿಕೋತ್ಸವ, ರಂಗಕಲಾವಿದೆ ಕೆ. ನಾಗರತ್ನಮ್ಮ ಸೇರಿ ಐವರಿಗೆ ಗೌರವ ಡಾಕ್ಟರೇಟ್. ಬಳ್ಳಾರಿ ವಿವಿ ನುಡಿಹಬ್ಬದ ಹಿನ್ನೆಲೆಯಲ್ಲಿ ಅಣುಶಾಸ್ತ್ರಜ್ಞ ಪ್ರೊ. ಇಬ್ರಾಹಿಂ ಬಿಜಲಿಗೆ ಗೌರವ ಡಾಕ್ಟರೇಟ್ ಗೌರವ. ಹಂಪಿ ಕನ್ನಡ ವಿವಿಯಿಂದ ನ್ಯಾ. ಸಂತೋಷ್ ಹೆಗಡೆ, ಕೋ. ಚನ್ನಬಸಪ್ಪ, ವಿಜ್ಞಾನಿ ಶಿವಕುಮಾರ್‌ಗೆ ನಾಡೋಜ ಪದವಿ ಪ್ರದಾನ. ವಿಎಸ್‌ಕೆ ವಿವಿ ಕುಲಪತಿ ವಿರುದ್ಧ ಕುಲಸಚಿವರು ಜಾತಿ ನಿಂದನೆ ಕೇಸ್, ಕುಲಸಚಿವರ ಮೇಲೆ ಉನ್ನತ ಶಿಕ್ಷಣ ಇಲಾಖೆ ಕಾರ್ಯದರ್ಶಿಗಳಿಗೆ ದೂರು. ಬಳ್ಳಾರಿ ವಿವಿಯಲ್ಲಿ ವಿಸಿ-ರಜಿಸ್ಟ್ರಾರ್ ಜಗಳ, ಗೊಂದಲ ಗೂಡಾದ ಬಳ್ಳಾರಿ ವಿಶ್ವವಿದ್ಯಾಲಯ. ಕುಲಪತಿ ಬೆಂಬಲಕ್ಕೆ ನಿಂತಿದ್ದ ರಾಜ್ಯಪಾಲರು. ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ಲೋಕಾಯುಕ್ತರಿಂದ ಕ್ಲೀನ್‌ಚೀಟ್.
-ಶಶಿಧರ ಮೇಟಿ