ಚುನಾವಣಾ ಆಯೋಗದಿಂದ ಸದಸ್ಯತ್ವ ರದ್ದತಿ ದೂರು ವಜಾ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಡಿ. 31
ಬಿಜೆಪಿಯಿಂದ ಬಳ್ಳಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ, ಬಿಎಸ್‌ಆರ್ ಪಾರ್ಟಿಯಿಂದ ವಿಧಾನಸಭಾ ಚುನಾವಣೆಗೆ ಕುಷ್ಟಗಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಗೋನಾಳ್ ರಾಜಶೇಖರ್ ಅವರ ಜಿಲ್ಲಾ ಪಂಚಾಯ್ತಿ ಸದಸ್ಯತ್ವ ರದ್ದುಪಡಿಸಬೇಕು ಎಂದು ಘನಮಲ್ಲನಗೌಡ ಹಾಗೂ ಬಿ. ವೆಂಕಟೇಶ್ ಅವರು ರಾಜ್ಯ ಚುನಾವಣೆ ಆಯೋಗಕ್ಕೆ ಸಲ್ಲಿಸಿದ ದೂರನ್ನು ಚುನಾವಣೆ ಆಯೋಗವು ವಜಾಗೊಳಿಸಿದೆ.
ಮೋಕಾ ಜಿಲ್ಲಾ ಪಂಚಾಯ್ತಿ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಸದಸ್ಯರಾಗಿರುವ ಗೋನಾಳ್ ರಾಜಶೇಖರ ಗೌಡ ಅವರು ಬಿಎಸ್‌ಆರ್ ಪಾರ್ಟಿಯಿಂದ ಕುಷ್ಟಗಿ ವಿಧಾನಸಭೆಗೆ ಸ್ಪರ್ಧಿಸುವ ಮೂಲಕ ಕರ್ನಾಟಕ ಲೋಕಲ್ ಅಥಾರಿಟಿಸ್ (ಪ್ರೋಹಿಬಿಷನ್ ಆಫ್ ಡಿಫೆಕ್ಷನ್) ಆಕ್ಟ್ 1987ರ ಕಲಂ 3 ಮತ್ತು 4ರ ಉಲ್ಲಂಘನೆಯಾಗಿದ್ದರಿಂದ ಅವರ ಜಿಲ್ಲಾ ಪಂಚಾಯ್ತಿ ಸದಸ್ಯತ್ವವನ್ನು ರದ್ದುಪಡಿಸಬೇಕು ಎಂದು ರಾಜಕೀಯ ಪಕ್ಷವೊಂದರ ಮುಖಂಡರಾದ ಘನಮಲ್ಲನಗೌಡ ಹಾಗೂ ಬಿ. ವೆಂಕಟೇಶ್ ಅವರು ರಾಜ್ಯ ಚುನಾವಣೆ ಆಯೋಗಕ್ಕೆ ದೂರು ಸಲ್ಲಿಸಿದ್ದರು.
ಬಿಎಸ್‌ಆರ್ ಪಕ್ಷದಿಂದ ಚುನಾವಣೆಗೆ ಸ್ಪರ್ಧಿಸುವ ಸಂದರ್ಭದಲ್ಲಿ ಬಿಜೆಪಿಯಿಂದ ಯಾವುದೇ ಅನುಮತಿ ಪಡೆದಿಲ್ಲ, ಇದರಿಂದಾಗಿ ಅವರು ಕರ್ನಾಟಕ ಲೋಕಲ್ ಅಥಾರಿಟಿಸ್ ಆಕ್ಟ್ ಅಡಿಯಲ್ಲಿ ಅವರ ಜಿಲ್ಲಾ ಪಂಚಾಯ್ತಿ ಸದಸ್ಯತ್ವ ರದ್ದುಪಡಿಸಬೇಕೆಂದು ಆಯೋಗದ ಮುಂದೆ ವಾದ ಮಂಡಿಸಿದ್ದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಚುನಾವಣೆಯಲ್ಲಿ ಬಿಎಸ್‌ಆರ್ ಅಭ್ಯರ್ಥಿ ಪರ ಕ್ರಾಸ್ ವೋಟಿಂಗ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ಸದಸ್ಯತ್ವ ರದ್ದುಪಡಿಸಬೇಕೆಂದು ದೂರಿನಲ್ಲಿ ತಿಳಿಸಿದ್ದರು.
ಈ ಕುರಿತಾಗಿ ವಿಚಾರಣೆ ನಡೆಸಿದ ರಾಜ್ಯ ಚುನಾವಣಾ ಆಯೋಗವು ಅವರು ಮುಖಂಡರು ನೀಡಿದ ದೂರಿನ ಅರ್ಜಿಯನ್ನು ರಾಜ್ಯ ಚುನಾವಣೆ ಆಯೋಗವು ವಜಾಗೊಳಿಸಿ ಆದೇಶ ಹೊರಡಿಸಿದೆ.
ಈ ಕುರಿತು ಗೋನಾಳ್ ರಾಜಶೇಖರ್‌ಗೌಡ ಮಾತನಾಡಿ, ದೂರು ಯಾವುದೇ ರಾಜಕೀಯ ಪಕ್ಷದಿಂದ ಮಾಡಿದ ಆರೋಪವಲ್ಲ, ಆದರೆ, ಕೆಲವು ವ್ಯಕ್ತಿಗಳು ಅನಗತ್ಯವಾಗಿ ತಮ್ಮ ವಿರುದ್ಧ ಆರೋಪ ಮಾಡಿದ್ದರು.
ಆದರೆ, ಚುನಾವಣೆ ಆಯೋಗ ಅವರ ದೂರನ್ನು ವಜಾಗೊಳಿಸಿರುವುದರಿಂದ ತಮಗೆ ನ್ಯಾಯ ದೊರಕಿದಂತಾಗಿದೆ. ಇದರಿಂದಾಗಿ ನನಗೆ ಸಂತೋಷವಾಗಿದೆ ಎಂದು ತಿಳಿಸಿದರು.