ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ದಲಿತರಿಗೆ ಬಹಿಷ್ಕಾರ, ದಂಡ: ಸಿಪಿಐ(ಎಂ) ಖಂಡನೆ

Vishwanath S
Updated On : 1 Jan 2014, 1:00 am

ಬಳ್ಳಾರಿ: ಬಾಗಲಕೋಟೆ ಜಿಲ್ಲೆಯ ಜಮುಖಂಡಿ ತಾಲೂಕಿನ ಗದ್ಯಾಳ ಗ್ರಾಮದಲ್ಲಿ ದಲಿತರಿಗೆ ಬಹಿಷ್ಕಾರ ಹಾಕಿರುವುದನ್ನು ಖಂಡಿಸಿ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಅವಮಾನವೆಸಗಿದ ಕ್ರಮ ವಿರೋಧಿಸಿ ಸಿಪಿಐ (ಎಂ) ಪಕ್ಷದ ಕಾರ್ಯಕರ್ತರು ನಗರದ ಡಿಸಿ ಕಚೇರಿ ಎದುರು ಮಂಗಳವಾರ ಪ್ರತಿಭಟನಾ ಧರಣಿ ನಡೆಸಿದರು.  
ಸಿಪಿಐ (ಎಂ) ಪಕ್ಷದ ಜಿಲ್ಲಾ ಕಾರ್ಯದರ್ಶಿ ಆರ್.ಎಸ್. ಬಸವರಾಜ್ ಪ್ರತಿಭಟನೆ ನೇತೃತ್ವ ವಹಿಸಿ ಮಾತನಾಡಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಅಪಮಾನವೆಸಗಿದ್ದಾರೆ ಎಂದು ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಲು ಹೋದ ದಲಿತರನ್ನು ಸ್ಥಳೀಯ ಭೂ ಮಾಲೀಕರು, ಪಟ್ಟಭದ್ರರು ಸಾಮೂಹಿಕ ಬಹಿಷ್ಕಾರ ಹಾಕಿದ್ದಾರೆ. ಇದನ್ನು ವಿರೋಧಿಸಿದ ಇಬ್ಬರು ದಲಿತ ಮುಖಂಡರಿಗೆ ರು. 5,000 ದಂಡ ವಿಧಿಸಿದ್ದಾರೆ. ಇದರಿಂದಾಗಿ ಬಹಿಷ್ಕಾರಗೊಂಡ ದಲಿತರಿಗೆ ನಾಲ್ಕು ತಿಂಗಳಿಂದ ಕೆಲಸವಿಲ್ಲ, ಹೊಲಗಳಲ್ಲಿ ಯಾರೂ ಕೆಲಸ ಕೊಡಲು ಮುಂದೆ ಬರುತ್ತಿಲ್ಲ. ಇದರಿಂದಾಗಿ ಗ್ರಾಮದ ಎಲ್ಲ ದಲಿತರು ಸಂಕಷ್ಟ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ಆರೋಪಿಸಿದರು.
ಗದ್ಯಾಳ ಗ್ರಾಮದ ಎಲ್ಲ ದಲಿತರನ್ನು ಸಾಮೂಹಿಕವಾಗಿ ಬಹಿಷ್ಕರಿಸಿದ ಹಿನ್ನೆಲೆಯಲ್ಲಿ ಅಂಗಡಿಗಳಲ್ಲಿ ಅಗತ್ಯ ವಸ್ತುಗಳನ್ನು ನೀಡುತ್ತಿಲ್ಲ. ಕ್ಷೌರ ಮಾಡಲು ಕ್ಷೌರಿಕರು ಬರುತ್ತಿಲ್ಲ. ಇತರೆ ಯಾವುದೇ ಕೆಲಸ, ಕಾರ್ಯಗಳು ಗ್ರಾಮದಲ್ಲಿ ಲಭ್ಯವಿದ್ದರೂ, ಬಹಿಷ್ಕಾರದ ಹಿನ್ನೆಲೆಯಿಂದ ಯಾವುದೂ ಆಗುತ್ತಿಲ್ಲ. ಇದಕ್ಕಾಗಿ ಗ್ರಾಮದಿಂದ ಸುಮಾರು 10-12 ಕಿ.ಮೀ. ದೂರದ ಗ್ರಾಮಗಳಿಗೆ ತೆರಳಬೇಕಾಗಿದೆ. ಅಲ್ಲದೇ, ಬಹಿಷ್ಕಾರಕ್ಕೆ ಕಾರಣರಾದವರನ್ನು ಬಂಧಿಸಿದರೂ, ದಲಿತರಿಗೆ ಹಾಕಿದ ಬಹಿಷ್ಕಾರ ಮಾತ್ರ ಇಂದಿಗೂ ಮುಂದುವರಿಯುತ್ತಿದೆ. ಹೀಗಾಗಿ ಈ ಘಟನೆಯನ್ನು ಸಿಪಿಐ (ಎಂ) ಪಕ್ಷವು ತೀವ್ರವಾಗಿ ಖಂಡಿಸುತ್ತಿದ್ದು, ಸ್ಥಳೀಯ ಜಿಲ್ಲಾಡಳಿತ ಕೂಡಲೇ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲು ಮುಂದಾಗಬೇಕು ಎಂದು ಒತ್ತಾಯಿಸಿದರು.
ನಾಲ್ಕು ತಿಂಗಳಿಂದ ತೊಂದರೆ ಅನುಭವಿಸುತ್ತಿರುವ ಗ್ರಾಮದ ಪ್ರತಿಯೊಂದು ದಲಿತ ಕುಟುಂಬಕ್ಕೆ ಕನಿಷ್ಠ ರು. 25 ಸಾವಿರ ನಿರುದ್ಯೋಗ ಪರಿಹಾರ ನೀಡಬೇಕು. ಬಹಿಷ್ಕಾರ ನೆಪದಿಂದ ದಲಿತರಿಗೆ ಸೇವೆ ಒದಗಿಸುವಲ್ಲಿ ನಿರಾಕರಿಸಿದ ಗ್ರಾಮದ ಹೋಟೆಲ್, ಅಂಗಡಿಗಳ ಮಾಲೀಕರ ವಿರುದ್ಧ ಎಸ್ಸಿ, ಎಸ್ಟಿ ಕಾಯ್ದೆಯಡಿ ಕ್ರಿಮಿನಲ್ ಮೊಕದ್ದಮೆ ಹೂಡಬೇಕು. ಬಹಿಷ್ಕಾರಕ್ಕೆ ಕಾರಣರಾದವರಿಗೂ ಕಾಯ್ದೆಯಡಿ ಕ್ರಮಕೈಗೊಳ್ಳಬೇಕು. ಬಹಿಷ್ಕಾರದಿಂದಾಗಿ ನಿರುದ್ಯೋಗ, ಬಡ ವಿದ್ಯಾವಂತ ಯುವಕರಿಗೆ ಉದ್ಯೋಗ ಖಾತ್ರಿಯಡಿ ಕೂಲಿ ಕೆಲಸ ನೀಡಬೇಕು. ದಲಿತ ಪ್ರದೇಶಗಳಲ್ಲಿನ ಎಲ್ಲ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವುದು ಸೇರಿದಂತೆ ಇತರೆ ಬೇಡಿಕೆಗಳನ್ನು  ಈಡೇರಿಸಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ನಂತರ ಜಿಲ್ಲಾಡಳಿತದ ಮೂಲದ ರಾಜ್ಯದ ಮುಖ್ಯಮಂತ್ರಿಗೆ ಸಿಪಿಐ (ಎಂ) ಪಕ್ಷದ ಕಾರ್ಯಕರ್ತರು ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆ ಧರಣಿಯಲ್ಲಿ ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಯು. ಬಸವರಾಜ, ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಕೆ. ನಾಗರತ್ನಮ್ಮ, ಎಚ್. ತಿಪ್ಪಯ್ಯ, ರಂಗಪ್ಪ ದಾಸರ, ಜಿಲ್ಲಾ ಸಮಿತಿ ಸದಸ್ಯ ಎಸ್. ಜಗನ್ನಾಥ್, ಭಾಸ್ಕರ್ ರೆಡ್ಡಿ, ಗೋಪಾಲ, ಗಾಳಿ ಬಸವರಾಜ, ಕೆ. ಗಾದಿಲಿಂಗಪ್ಪ, ವಿ.ಎಸ್. ಶಿವಶಂಕರ್, ಬಿ.ಅಡಿವೆಪ್ಪ, ಕೆ. ದುರ್ಗಪ್ಪ, ಇ.ಆರ್. ಯಲ್ಲಪ್ಪ, ಚಂದ್ರ ಕುಮಾರಿ, ತಾಲೂಕು ಮುಖಂಡ ತಾತಪ್ಪ, ವೆಂಕಮ್ಮ, ಯಲ್ಲಮ್ಮ, ವಸಂತಮ್ಮ, ವಿಜಯಲಕ್ಷ್ಮಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement