ಕಾಮಗಾರಿಗೆ ರು. 1.01 ಕೋಟಿ ಕ್ರಿಯಾಯೋಜನೆ
ಹೂವಿನಹಡಗಲಿ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಿಂದ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ರು. 1.01 ಕೋಟಿ ಕ್ರಿಯಾ ಯೋಜನೆಗೆ ಮುಂಜೂರಾತಿ ನೀಡಲಾಗಿದೆ ಎಂದು ಅಧ್ಯಕ್ಷ ಪಿ. ವಿಜಯಕುಮಾರ್ ತಿಳಿಸಿದರು. ಅವರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಪಿಎಂಸಿ ಅಭಿವೃದ್ಧಿ ನಿಧಿಯನ್ನು ಬಳಸಿಕೊಂಡು ಅಗತ್ಯ ಕಾಮಗಾರಿ ಕೈಗೊಳ್ಳಲು ಎಪಿಎಂಸಿ ಆಡಳಿತ ಮಂಡಳಿ ನಿರ್ಧರಿಸಿದೆ ಎಂದು ಹೇಳಿದರು. ಹೊಳಲು ಉಪಮಾರುಕಟ್ಟೆಯ 2ನೇ ರಸ್ತೆ ಕಾಂಕ್ರಿಟ್ ಕಾಮಗಾರಿಗೆ ರು. 45 ಲಕ್ಷ, ಹೂವಿನಹಡಗಲಿ ಮುಖ್ಯ ಮಾರುಕಟ್ಟೆ ಪ್ರಾಂಗಣ ಕಚೇರಿ ಕಟ್ಟಡ ಸುಧಾರಣೆಗೆ ರು. 8 ಲಕ್ಷ, ಮುಖ್ಯ ರಸ್ತೆಯ ಅಕ್ಕ ಪಕ್ಕದಲ್ಲಿ ಖಾಲಿ ಇರುವ ನೆಲ ಹಾಸಿಗೆ ಮತ್ತು ಕಾಂಕ್ರಿಟ್ ಕಾಮಗಾರಿಗೆ ರು. 45 ಲಕ್ಷ ಕಾಮಗಾರಿಗೆ ಅನುಮೋದನೆ ನೀಡಲಾಗಿದೆ. ತಾಲೂಕಿನ ಮಾಗಳ, ಸೋಗಿ, ಇಟ್ಟಿಗಿ, ಹ್ಯಾರಡ ಗ್ರಾಮಗಳಲ್ಲಿ ಜಾನುವಾರುಗಳ ಕುಡಿಯುವ ನೀರಿನ ತೊಟ್ಟಿ ನಿರ್ಮಾಣಕ್ಕೆ ತಲಾ ರು. 75 ಸಾವಿರ ಮಂಜೂರಾಗಿದೆ. ಶೀಘ್ರದಲ್ಲೇ ಕಾಮಗಾರಿ ಕೈಗೊಳ್ಳಲಾಗುವುದೆಂದು ತಿಳಿಸಿದರು.
ಬೇಡ ಜಂಗಮ ಸಂಘ ಅಸ್ತಿತ್ವಕ್ಕೆ
ಹೂವಿನಹಡಗಲಿ: ನಿವೃತ್ತ ಮತ್ತು ಸೇವಾನಿರತ ಬೇಡ ಜಂಗಮ ಕ್ಷೇಮಾಭಿವೃದ್ಧಿ ಸಂಘ ಅಸ್ತಿತ್ವಕ್ಕೆ ಬಂದಿದೆ. ಸಂಘದ ಗೌರವಾಧ್ಯಕ್ಷರಾಗಿ ಎಚ್.ಎಂ. ಬೆಟ್ಟಯ್ಯ, ಅಧ್ಯಕ್ಷರಾಗಿ ಡಾ. ಎಂ.ಪಿ.ಎಂ. ಮಂಜುನಾಥ, ಉಪಾಧ್ಯಕ್ಷರಾಗಿ ಪರಮೇಶ್ವರಯ್ಯ, ಕಾರ್ಯದರ್ಶಿಯಾಗಿ ಎಚ್.ಎಂ. ಕೊಟ್ರಯ್ಯ, ಸಹಕಾರ್ಯದರ್ಶಿಯಾಗಿ ಎನ್.ಎಂ. ಬಸವರಾಜಯ್ಯ, ಸಂಘಟನಾ ಕಾರ್ಯದರ್ಶಿ ಎಚ್.ಎಂ. ಮರುಳಸಿದ್ದಯ್ಯ, ಎಚ್.ಎಂ. ಮಂಜುನಾಥಯ್ಯ, ಖಜಾಂಚಿಯಾಗಿ ಎಚ್.ಎಂ. ಬಸವರಾಜಯ್ಯ ಅವರನ್ನು ನೇಮಕ ಮಾಡಿ ಇಲಾಖಾವಾರು ಸಂಚಾಲಕರನ್ನು ಆಯ್ಕೆ ಮಾಡಲಾಯಿತು. ಸಮಾಜದ ಮುಖಂಡ ಎಚ್.ಎಂ. ಶಶಿಧರಸ್ವಾಮಿ, ಡಿ.ಕೆ.ಎಂ. ಚನ್ನಬಸವಯ್ಯ, ಎಸ್.ಎಂ. ಕೂಡ್ಲಯ್ಯ, ಎಚ್.ಎಂ. ಕೊಟ್ರಯ್ಯ, ಎನ್.ಎಂ. ಚನ್ನಯ್ಯ ಇದ್ದರು.