ಖೊಟ್ಟಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಗುಳುಂ
ಸಂಡೂರು: ಖೊಟ್ಟಿ ದಾಖಲೆ ಸೃಷ್ಟಿಸಿ ತಾಲೂಕಿನ ದೇವಗಿರಿ ಹತ್ತಿರ ಸರ್ಕಾರಿ ಜಮೀನನ್ನು ಅಕ್ರಮವಾಗಿ ಪರಾಭಾರೆ ಮಾಡಲು ಸಹಕರಿಸಿದ ಈ ಹಿಂದೆ ಗ್ರಾಮ ಲೆಕ್ಕಿಗರಾಗಿದ್ದ ಎಂ. ಈಶ್ವರಪ್ಪ, ಕಂದಾಯ ನಿರೀಕ್ಷಕ ಎಚ್. ಲಂಕೆಪ್ಪನನ್ನು ಭಾನುವಾರ ಸಂಡೂರು ಪೊಲೀಸರು ಪ್ರಾಥಮಿಕ ವಿಚಾರಣೆ ನಡೆಸಿದ್ದಾರೆ.
ತಹಸೀಲ್ದಾರ್ ತಿಮ್ಮಯ್ಯ ನೀಡಿದ ದೂರಿನನ್ವಯ ಈ ವಿಚಾರಣೆ ನಡೆಸಲಾಗಿದೆ. ಪ್ರಕರಣದಲ್ಲಿ ಶಾಮೀಲಾಗಿರುವ ಆರೋಪಿ ತಾಲೂಕು ಕಚೇರಿ ಕಂಪ್ಯೂಟರ್ ಆಪರೇಟರ್ ಹೊನ್ನೂರು ಬಾಷಾ ಎಂಬುವವರಿಗಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ತಾಲೂಕಿನ ದೇವಗಿರಿ ಹತ್ತಿರವಿರುವ ಸರ್ವೆ ನಂ.33ರಲ್ಲಿನ 3 ಎಕರೆ 64 ಸೆಂಟ್ಸ್ ಸರ್ಕಾರಿ ಜಮೀನನ್ನು ತಾವು ಸಾಗುವಳಿ ಮಾಡುತ್ತಿರುವುದಾಗಿ ತಿಳಿಸಿ ಭೀಮಪ್ಪ ಎಂಬುವವರು ಖೊಟ್ಟಿ ದಾಖಲೆ ಸೃಷ್ಟಿಸಿ ತಮ್ಮದನ್ನಾಗಿ ಮಾಡಿಕೊಂಡಿದ್ದರು. ನಂತರ ಆ ಜಮೀನನ್ನು ವರಲಕ್ಷ್ಮಿ ಮೈನಿಂಗ್ ಕಂಪನಿ ಮಾಲೀಕ ಗಾದಿಲಿಂಗಪ್ಪ ಎಂಬುವವರಿಗೆ ಮಾರಾಟ ಮಾಡಿದ್ದಾರೆ. ಸರ್ವೆ ನಂ. 37ರಲ್ಲಿನ 5 ಎಕರೆ 53 ಸೆಂಟ್ಸ್ ಹಾಗೂ 2 ಎಕರೆ ಸರ್ಕಾರಿ ಜಮೀನನ್ನು ತಾವು ಸಾಗುವಳಿ ಮಾಡುತ್ತಿರುವುದಾಗಿ ತಿಳಿಸಿ ಯೂಸೂಫ್ ಎಂಬ ವ್ಯಕ್ತಿ ತಮ್ಮದನ್ನಾಗಿ ಮಾಡಿ ಪ್ರವೀಣ್ಕುಮಾರ್ ಎಂಬುವವರಿಗೆ ಮಾರಾಟ ಮಾಡಿದ್ದಾರೆ. ಇವರ ಕಡೆಯಿಂದ ಗಾದಿಲಿಂಗಪ್ಪ ಜಮೀನು ಖರೀದಿಸಿದ್ದಾರೆ.
ಸರ್ವೆ ನಂ.38ರಲ್ಲಿನ 2 ಎಕರೆ ಸರ್ಕಾರಿ ಜಮೀನನ್ನು ತಾವು ಸಾಗುವಳಿ ಮಾಡುತ್ತಿರುವುದಾಗಿ ನಲ್ಲಂಗಿ ಪಾಲಾಕ್ಷಿ ತಮ್ಮದನ್ನಾಗಿ ಮಾಡಿಕೊಂಡು, ಸದರಿ ಜಮೀನನ್ನು ಗಾದಿಲಿಂಗಪ್ಪಗೆ ಮಾರಾಟ ಮಾಡಿದ್ದಾರೆ. ಗಾದಿಲಿಂಗಪ್ಪ ಈ ಮೂವರ ಕಡೆಯಿಂದ ಒಟ್ಟು 13 ಎಕರೆ 17 ಸೆಂಟ್ಸ್ ಜಮೀನನ್ನು ಖರೀದಿಸಿ, ತಮ್ಮ ಹೆಸರಿಗೆ ಮ್ಯುಟೇಷನ್ ಮಾಡಿಸಿಕೊಂಡು ವರಲಕ್ಷ್ಮಿ ಮೈನಿಂಗ್ ಕಂಪನಿ ಹೆಸರಿನಲ್ಲಿ ಈ ಜಮೀನುಗಳಲ್ಲಿ ಗಣಿಗಾರಿಕೆ ನಡೆಸಲು ಪರವಾನಗಿ ಪಡೆದಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.