ನವೀಕೃತ ಸರ್ಕಾರಿ ಆಯುರ್ವೇದ ಆಸ್ಪತ್ರೆ ಕಟ್ಟಡ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಸಂಡೂರು, ಫೆ. 3
ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಯಡಿ ರು. 20 ಲಕ್ಷ ವೆಚ್ಚದಲ್ಲಿ ನವೀಕರಣಗೊಂಡ ಸಂಡೂರಿನ ಸರ್ಕಾರಿ ಆಯುರ್ವೇದ ಆಸ್ಪತ್ರೆ ಕಟ್ಟಡವನ್ನು ಶಾಸಕ ಈ. ತುಕಾರಾಂ ಭಾನುವಾರ ಉದ್ಘಾಟಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆಯುಷ್ ಅಧಿಕಾರಿ ಡಾ. ವೀರನಗೌಡ ಎಸ್. ಪಾಟೀಲ್, ನವೀಕರಣಗೊಂಡ ಸರ್ಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಈಗ ಮೂವರು ಮಹಿಳಾ ವೈದ್ಯರು, ಒಬ್ಬ ಪುರುಷ ವೈದ್ಯರು, ಇತರ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಆಸ್ಪತ್ರೆಯಲ್ಲಿ ಪಾರ್ಶ್ವವಾಯು, ಸಂಧಿವಾತ, ಮೂಲವ್ಯಾಧಿ, ಜಾಂಡಿಸ್ ಮುಂತಾದ ರೋಗಗಳಿಗೆ ಉತ್ತಮ ರೀತಿಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಪಂಚಕರ್ಮ ಸೇವೆಯನ್ನೂ ಭಾನುವಾರದಿಂದಲೇ ಒದಗಿಸಲಾಗಿದೆ. ಮಾ. 31ರೊಳಗೆ ಆಸ್ಪತ್ರೆಗೆ ಅಗತ್ಯವಾದ ಇನ್ನೂ ಕೆಲವು ಸಲಕರಣೆಗಳನ್ನು ಒದಗಿಸಲಾಗುವುದು. ಜನತೆ ರೋಗರಹಿತವಾಗಿ ಉತ್ತಮ ಆರೋಗ್ಯವನ್ನು ಹೊಂದುವಂತೆ ಮಾಡುವ ಉದ್ದೇಶ ನಮ್ಮದಾಗಿದೆ ಎಂದು ಹೇಳಿದರು.
ತಾಲೂಕಿನ ಯಶವಂತನಗರದಲ್ಲಿಯೂ ಒಂದು ಆಸ್ಪತ್ರೆ ತೆರೆಯಲು ಯೋಜಿಸಿದ್ದು, ಸೂಕ್ತ ಜಾಗಕ್ಕಾಗಿ ಶಾಸಕರಿಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು.
ಕಟ್ಟಡ ಉದ್ಘಾಟಿಸಿ ಮಾತನಾಡಿದ ಶಾಸಕ ಈ. ತುಕಾರಾಂ, ಸಂಡೂರು ಪಟ್ಟಣದಲ್ಲಿ ಆಯುರ್ವೇದ ಆಸ್ಪತ್ರೆ ನವೀಕರಣಗೊಂಡು ಉತ್ತಮ ಸೌಲಭ್ಯಗಳನ್ನು ಹೊಂದಿ ಜನತೆಗೆ ಉತ್ತಮ ಚಿಕಿತ್ಸೆ ನೀಡಲು ಮುಂದಾಗಿರುವುದು ಉತ್ತಮ ಬೆಳವಣಿಗೆ. ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.
ತಾಪಂ ಉಪಾಧ್ಯಕ್ಷ ಬಿ.ಜಿ. ಉಜ್ಜಿನಗೌಡ, ಪುರಸಭೆ ಉಪಾಧ್ಯಕ್ಷೆ ಆಶಾಲತಾ ಸೋಮಪ್ಪ ಮಾತನಾಡಿದರು. ತಾಪಂ ಅಧ್ಯಕ್ಷೆ ಭರಮಕ್ಕ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಗಡಂಬ್ಲಿ ಚೆನ್ನಪ್ಪ, ಸದಸ್ಯ ಟಿ. ನಾಗರಾಜ, ಡಾ. ರಾಮಶೆಟ್ಟಿ, ಡಾ. ವರಪ್ರಸಾದ್, ಡಾ. ತಿಪ್ಪೇಸ್ವಾಮಿ, ನೋಡೆಲ್ ಅಧಿಕಾರಿ ಡಾ. ಸಿದ್ದರಾಮಯ್ಯ ಕುರ್ತಕೋಟಿ ಉಪಸ್ಥಿತರಿದ್ದರು. ಡಾ. ಸುಜಾತಾ ಪ್ರಾರ್ಥಿಸಿದರು. ಡಾ. ವಿರೂಪಾಕ್ಷಿ ಸ್ವಾಗತಿಸಿದರು. ಡಾ. ಶಿವಾನಂದ್ ಕಾರ್ಯಕ್ರಮ ನಿರೂಪಿಸಿದರು. ಡಾ. ಪೂರ್ಣಿಮ ವಂದಿಸಿದರು.