ಶಾಂತಿ, ಸಹನೆ ಪರಂಪರೆ ಬುದ್ಧನಿಂದ ಪರಿಚಿತ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಜ. 3
ಶಾಂತಿ ಮತ್ತು ಸಹನೆಯ ಪರಂಪರೆಯನ್ನು ಜಗತ್ತಿಗೆ ಪರಿಚಯಿಸಿದ ಕೀರ್ತಿ ಬುದ್ಧನಿಗೆ ಸಲ್ಲುತ್ತದೆ. ಬುದ್ಧನ ಪರಂಪರೆಯನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಮೈಸೂರು ವಿವಿ ಪತ್ರಿಕೋದ್ಯಮ ಪ್ರಾಧ್ಯಾಪಕ ಪ್ರೊ. ಮಹೇಶ್ಚಂದ್ರ ಗುರು ಹೇಳಿದರು.
ನಗರದ ಮಲ್ಲಿಗೆ ಹೋಟೆಲ್ ಸಭಾಂಗಣದಲ್ಲಿ ಡಾ. ಸುಭಾಷ್ ಭರಣಿ ಸಾಂಸ್ಕೃತಿಕ ವೇದಿಕೆ 2012ನೇ ಸಾಲಿನ ರಾಜ್ಯ ಮಟ್ಟದ ಡಾ.ಎಚ್. ನರಸಿಂಹಯ್ಯ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ದಾಸ್ಯದ ದಿನಗಳ ಮೂಲಕ ಭಾರತವನ್ನು ಕಟ್ಟುವ ಪ್ರಯತ್ನದ ನಡುವೆ ಅದರಾಚೆಗೆ ವಿಶ್ವಕ್ಕೆ ಅಣ್ಣನಾಗಿರುವ ಭರತ ಖಂಡವನ್ನು ಪ್ರಸ್ತಾಪಿಸುವ ಅಗತ್ಯವಿದೆ. ಇಂದಿನ ಜಾಗತೀಕರಣದ ದಿನದಲ್ಲೂ ಬುದ್ಧ ಹಾಗೂ ಗಾಂಧೀಜಿ ಪರ್ಯಾಯವಾಗಿ ಕಾಣುತ್ತಾರೆ ಎಂಬುದನ್ನು ಮನಗಾಣಬೇಕು ಎಂದರು.
ಪಶು ವೈದ್ಯಾಧಿಕಾರಿ ಡಾ.ಜೆ.ಎಸ್. ಅಶ್ವತ್ಥಕುಮಾರ್ ಅವರ 'ಭಾವನಾತ್ಮಕ ಬದುಕು' ವ್ಯಕ್ತಿತ್ವ ವಿಕಸನ ಲೇಖನಗಳ ಸಂಕಲನ ಮತ್ತು ಕತೆಗಾರ ಬೆಂಗಳೂರಿನ ವಿ.ಎಂ. ಮಂಜುನಾಥ್ ಅವರ 'ಜಾನ್-ಗೋವಾ ಮತ್ತಿತರ ಕಥೆಗಳು' ಕಥಾ ಸಂಕಲನ ಕೃತಿಗಳನ್ನು ಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕ ಡಾ.ಬಿ.ಎಂ. ಪುಟ್ಟಯ್ಯ ಬಿಡುಗಡೆಗೊಳಿಸಿ ಮಾತನಾಡಿ, ವಸ್ತು ಪ್ರಪಂಚ, ಗ್ರಾಹಕ ಸಂಸ್ಕೃತಿಯ ಕಡೆ ಎಲ್ಲರೂ ಹೋಗುತ್ತಿರುವಾಗ ಸಾಹಿತ್ಯವು ಅದನ್ನು ಪ್ರಶ್ನಿಸುವ ಜೀವಪರ ಸಂಗತಿಗಳ ಕಡೆ ಮುಖ ಮಾಡುತ್ತದೆ. ಅಂತಹ ಪ್ರಯತ್ನ ಈ ಕೃತಿಗಳಲ್ಲಿ ಒಡಮೂಡಿವೆ ಎಂದು ಹೇಳಿದರು.
ಪ್ರಶಸ್ತಿ ಪ್ರದಾನ: ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಪ್ರೊ. ಮಹೇಶ್ಚಂದ್ರ ಗುರು, ಬಳ್ಳಾರಿ ಡಯಟ್ ಉಪಪ್ರಾಚಾರ್ಯ ಎ. ಹನುಮಕ್ಕ, ವಿಮ್ಸ್ ಪ್ರಾಧ್ಯಾಪಕ ಡಾ. ವಸಂತ ಶೇಟ್, ಡಿಡಿಪಿಐ ಟಿ. ನಾರಾಯಣ ಗೌಡ, ವಿಜಯನಗರ ಕಾಲೇಜು ಇತಿಹಾಸ ವಿಭಾಗದ ಸಹ ಪ್ರಾಧ್ಯಾಪಕ ಡಾ.ಎಚ್.ಎಂ. ಚಂದ್ರಶೇಖರ ಶಾಸ್ತ್ರಿ, ಕೂಡ್ಲಿಗಿ ಬಿಆರ್ಸಿ ಸಮನ್ವಯಾಧಿಕಾರಿ ಮೈಲೇಶ್ ಬೇವೂರ, ಬಸರಕೋಡಿನ ನಿವೃತ್ತ ಅಧ್ಯಾಪಕ ಕೊಟ್ರಯ್ಯ ಹಿರೇಮಠ್, ಕಮಲಾಪುರ ಸ.ಹಿ.ಪ್ರಾ. ಶಾಲಾ ಶಿಕ್ಷಕಿ ಜಿ. ನೀಲಮ್ಮ, ಬಳ್ಳಾರಿಯ ಮಹಾನಂದಿ ಕೊಟ್ಟಂ ಸಹಿಪ್ರಾ ಶಾಲಾ ಶಿಕ್ಷಕ ಕೆ. ಸೂರ್ಯಪ್ರಕಾಶ್ ಹಾಗೂ ಸಿರುಗುಪ್ಪ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಶಿಕ್ಷಕ ಜಿ. ವೆಂಕಟೇಶ್ ಅವರಿಗೆ ರಂಗಭೂಮಿ ಕಲಾವಿದ ಬೆಳಗಲ್ ವೀರಣ್ಣ ಪ್ರಶಸ್ತಿ ನೀಡಿ ಸನ್ಮಾನ ನಡೆಸಿದರು.
ಕಾರ್ಯಕ್ರಮಕ್ಕೆ ಗೈರಾಗಿದ್ದ ಹಂಪಿ ಕನ್ನಡ ವಿವಿ ಕುಲಪತಿ ಡಾ.ಹಿ.ಚಿ. ಬೋರಲಿಂಗಯ್ಯ ಅವರಿಗೆ ವಿವಿಗೆ ತೆರಳಿ ಸನ್ಮಾನ ನಡೆಸಲಾಗುವುದು ಎಂದು ಸಿ. ಮಂಜುನಾಥ ಪ್ರಕಟಿಸಿದರು. ವೇದಿಕೆಯ ಗೌರವಾಧ್ಯಕ್ಷ ಡಾ. ವೆಂಕಟಯ್ಯ ಅಪ್ಪಗೆರೆ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಕಲಾವಿದೆ ನಾಡೋಜ ದರೋಜಿ ಈರಮ್ಮ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್. ಚಂದ್ರಬಾಬು, ಭಾರತೀಯ ಬೌದ್ಧ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ವೀರ್ಶೆಟ್ಟಿ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಜೆ. ವಸಂತಕುಮಾರ್, ಸಿರಗುಪ್ಪ ಸೃಜನಾ ಫೌಂಡೇಷನ್ ಸಂಚಾಲಕ ಡಾ. ಮಧುಸೂಧನ ಕಾರಿಗನೂರು, ಡಿ. ಸೂರಿ ಮತ್ತು ದೇವದಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.