ಸಂಗೀತದ ಜತೆಗೆ ಸಾಹಿತ್ಯವನ್ನೂ ಸವಿದೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 3
ಶಿಕ್ಷಕನಾಗಿ ಸೇವೆ ಸಲ್ಲಿಸುವಾಗಿನಿಂದಲೂ ಸಂಗೀತದ ಆಸಕ್ತಿ ಹೆಚ್ಚಾಗಿತ್ತು. ಬರೀ ಗೀತೆಗಳನ್ನಷ್ಟೇ ಕೇಳುತ್ತಿರಲಿಲ್ಲ. ಜೊತೆಗೆ ಅದರ ಸಾಹಿತ್ಯವನ್ನೂ ಸವಿಯುತ್ತಿದ್ದೆ. ಇದು ನನ್ನನ್ನು ಅಕ್ಷರ ಜಾಡಿನತ್ತ ವಾಲಲು ಪ್ರೇರಣೆ ನೀಡತು ಎಂದು ಹಿರಿಯ ಲೇಖಕ ಟಿ. ಗುರುರಾಜಾಚಾರ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗುರುರಾಜಾಚಾರ್ ಅವರ ನಿವಾಸದಲ್ಲಿ ಭಾನುವಾರ ಹಮ್ಮಿಕೊಂಡಿದ್ದ 'ಕವಿ ಮನ-ಮನೆ' ಕಾರ್ಯಕ್ರಮದಲ್ಲಿ ಮಾತನಾಡಿ, ಸಂಗೀತದತ್ತ ಭಾರಿ ಒಲವು ಇಟ್ಟುಕೊಂಡಿದ್ದ ನಾನು, ಶಿಕ್ಷಕನಾಗಿ ನಿವೃತ್ತಿಗೊಂಡ ಬಳಿಕ ಸಾಹಿತ್ಯ ಕ್ಷೇತ್ರದತ್ತ ಆಸಕ್ತಿ ಬೆಳಸಿದೆ. ಇದರಿಂದಾಗಿಯೇ 'ಭಾವಬಿಂದು' ಕವನ ಸಂಕಲನ ಹಾಗೂ ಸಿಂಗಾಪೂರ ದೇಶದ ಪ್ರವಾಸಕಥನ 'ಚಾಂಗಿಚೆಲುವೆ' ಕೃತಿ ಸಾಹಿತ್ಯ ಲೋಕಕ್ಕೆ ಸಮರ್ಪಿಸಲು ಸಾಧ್ಯವಾಯಿತು ಎಂದರು.
ಸಂಗೀತ ಕುರಿತ ಕೃತಿಯನ್ನು ಇನ್ನು ಆರು ತಿಂಗಳೊಳಗೆ ಬಿಡುಗಡೆಗೊಳಿಸಲಾಗುವುದು. ಈಗಾಗಲೇ ಅದರ ತಯಾರಿ ನಡೆದಿದೆ. ಹಲವಾರು ಗ್ರಂಥಗಳು ಹಾಗೂ ಸಂಗೀತಗಾರರನ್ನು ಭೇಟಿ ಮಾಡಿ ವಿಶೇಷ ಎನಿಸಿದ ಕೃತಿಯನ್ನು ನೀಡುವ ಉತ್ಸುಕದಲ್ಲಿರುವೆ ಎಂದರು.
ಸಿಂಗಾಪೂರ ದೇಶಕ್ಕೆ ಏಳು ಬಾರಿ ತೆರಳಿ ಕವನ ವಾಚನ ಮಾಡಿರುವೆ. ನಾನು ವಿದೇಶಕ್ಕೆ ಹೋದಾಗ ಕನ್ನಡಿಗರು, ಕನ್ನಡ ಸಂಘಗಳು, ಕನ್ನಡ ಸಾಹಿತಿಗಳನ್ನು ಭೇಟಿ ಮಾಡುವ ಹವ್ಯಾಸ ಇಟ್ಟುಕೊಂಡಿದ್ದೆ. ಹೀಗಾಗಿ ಇಂದು ಸಾಹಿತ್ಯ ಕ್ಷೇತ್ರದಲ್ಲಿ ಸಾಕಷ್ಟು ಮಹಾನೀಯರ ಸಂಪರ್ಕ ಇಟ್ಟುಕೊಳ್ಳಲು ಸಾಧ್ಯವಾಗಿದೆ ಎಂದು ಹೇಳಿದರು.
ಕಾನೂನು ಪಾಲನೆ ಮಾದರಿ: ಸಿಂಗಾಪೂರ ದೇಶದ ರಾಜಕೀಯ, ಆರ್ಥಿಕ ವ್ಯವಸ್ಥೆ ಹಾಗೂ ಅಲ್ಲಿನ ಆಡಳಿತವ್ಯವಸ್ಥೆ ಕುರಿತು ಮಾತನಾಡಿದ ಗುರಾರಾಜಾಚಾರ್, ಅಲ್ಲಿನ ಜನರ ಬದುಕು ಹಾಗೂ ಕಾನೂನು ಪಾಲನೆಗಳು ಉಳಿದ ದೇಶಗಳಿಗೂ ಮಾದರಿಯಂತಿವೆ. ಮನೆಗೆ ಕೆಲಸದಾಕೆ ಬೇಕೆನಿಸಿದರೂ ಸರ್ಕಾರಕ್ಕೆ ಅರ್ಜಿ ಹಾಕಬೇಕು. ಡ್ರೈವರ್ ಬೇಕೆನೆಸಿದರೂ ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಕಾನೂನು ರೀತಿಯಲ್ಲಿಯೇ ಪಡೆದುಕೊಳ್ಳಬೇಕು. ಸಿಂಗಾಪೂರದಲ್ಲಿ ಸುಮಾರು 45 ಲಕ್ಷ ಜನಸಂಖ್ಯೆ ಇದ್ದು, ಶೇ. 76ರಷ್ಟು ಚೀನಿಯರಿದ್ದಾರೆ. ಶೇ. 9ರಷ್ಟು ಭಾರತೀಯರಿದ್ದು, ಈ ಪೈಕಿ ಶೇ. 8ರಷ್ಟು ತಮಿಳರು ಇದ್ದಾರೆ. ಶೇ. 14ರಷ್ಟು ಮುಸ್ಲಿಂರಿದ್ದು, ಶೇ. 2ರಷ್ಟು ಮಾತ್ರ ಕೃಷಿ ಇದೆ. ಕನ್ನಡಿಗರು ಕೂಡ ಸಾಕಷ್ಟು ಜನರು ನೆಲೆಸಿದ್ದು, ಕನ್ನಡ ಸಂಘಗಳು ಕನ್ನಡ ಕಟ್ಟುವ ಕೆಲಸದಲ್ಲಿ ತೊಡಗಿಸಿಕೊಂಡಿವೆ ಎಂದು ಹೇಳಿದರು.
ತಾವೇ ರಚಿಸಿದ ಹಲವು ಕವನಗಳನ್ನು ಸಮಾರಂಭದಲ್ಲಿ ಪ್ರಸ್ತುತಪಡಿಸಿ, ಇಡೀ ಕಾರ್ಯಕ್ರಮಕ್ಕೆ ಮೆರಗು ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಟಿ. ಕೊಟ್ರಪ್ಪ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಕಸಾಪ ಅಧ್ಯಕ್ಷ ಸಿರಿಗೇರಿ ಎರ್ರಿಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.