ಪಾರ್ಕಿಂಗ್ ಜಾಗದಲ್ಲಿ ಡಬ್ಬಾ ಅಂಗಡಿ
ಕನ್ನಡಪ್ರಭ ವಾರ್ತೆ, ಧಾರವಾಡ, ಫೆ. 4
ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸಂಚಾರ ದಟ್ಟಣೆಯಿಂದ ಧಾರವಾಡ ನಗರ ಮೊದಲಿನ ಶಾಂತ ವಾತಾವರಣ ಉಳಿಸಿಕೊಂಡಿಲ್ಲ. ಇನ್ನು, ಮಾರುಕಟ್ಟೆ ಪ್ರದೇಶದಲ್ಲಂತೂ ಇಕ್ಕಟ್ಟಿನ ಸ್ಥಳಗಳಲ್ಲಿ ನಿತ್ಯ ವಾಹನ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ತೀವ್ರ ಕಿರಿಕಿರಿ ಉಂಟಾಗುತ್ತಿದೆ.
ಇತ್ತೀಚೆಗೆ ಪಾಲಿಕೆ ಗಟ್ಟಿ ಮನಸ್ಸು ಮಾಡಿ ಮಾರುಕಟ್ಟೆಯ ಪ್ರಮುಖ ರಸ್ತೆಗಳಾದ ಸುಭಾಸ ರಸ್ತೆ, ಟಿಕಾರ ರಸ್ತೆ, ವಿವೇಕಾನಂದ ವೃತ್ತ, ಸೂಪರ್ ಮಾರುಕಟ್ಟೆ ರಸ್ತೆಯನ್ನು ಅಗಲೀಕರಣ ಮಾಡಿತ್ತು. ಆದರೆ, ಇದಾದ ಕೆಲವೇ ದಿನಗಳಲ್ಲಿ ಸಣ್ಣ ಸಣ್ಣ ಡಬ್ಬಾ ಅಂಗಡಿ ಇಟ್ಟುಕೊಂಡು ಬಟ್ಟೆ, ಪಾದರಕ್ಷೆ, ಪ್ಲಾಸ್ಟಿಕ್ ಸಾಮಾನು, ಎಗ್ರೈಸ್ ಸೇರಿದಂತೆ ಹೋಲ್ಸೇಲ್ ವ್ಯಾಪಾರ ಮಾಡುವ ವ್ಯಾಪಾರಸ್ಥರು ರಸ್ತೆಯ ಮೇಲೆಯೇ ತಮ್ಮ ವ್ಯಾಪಾರ ಶುರು ಮಾಡಿದ್ದು, ಸಂಚಾರ ದಟ್ಟಣೆಗೆ ಕಾರಣವಾಗಿದೆ. ಅಲ್ಲದೇ, ಕಾಯಂ ಅಂಗಡಿಕಾರರಿಗೆ ತೀವ್ರ ಕಿರಿಕಿರಿಯಾಗಿದೆ.
ಇದಕ್ಕೆ ಉತ್ತಮ ಉದಾಹರಣೆಯಾಗಿ ನಗರದ ಜಕಣಿ ಭಾವಿ ರಸ್ತೆ ಬದಿಗೆ ಇರುವ ವಿಜಯಾ ಸ್ವೀಟ್ಸ್ ಅಂಗಡಿ ಪಕ್ಕದ ಗಟಾರ ಮೇಲೆ ರಾತ್ರೋ ರಾತ್ರಿ ನಿರ್ಮಾಣಗೊಂಡ ಡಬ್ಬಾ ಅಂಗಡಿಗಳಿಂದಾಗಿ ಇಲ್ಲಿನ ಕಾಯಂ ಅಂಗಡಿ ಮಾಲಿಕರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗಿದೆ. ಈ ಅಂಗಡಿಗಳ ನಿರ್ಮಾಣದ ಹಿಂದೆ ಪಾಲಿಕೆ ಅಧಿಕಾರಿಗಳ, ಪಾಲಿಕೆ ಸದಸ್ಯರ ಕೈಗಳು ಕೆಲಸ ಮಾಡಿವೆ ಎಂಬ ಆರೋಪ ಕೇಳಿ ಬಂದಿವೆ.
ಈ ರಸ್ತೆಯಲ್ಲಿ ಹಲವು ವರ್ಷಗಳಿಂದ ಅಂಗಡಿ ನಿರ್ಮಿಸಿ ವ್ಯಾಪಾರ ಮಾಡುತ್ತಿರುವ ಕಾಯಂ ಅಂಗಡಿ ಮಾಲೀಕರು ಪಾಲಿಕೆ ಜಂಟಿ ಆಯುಕ್ತರಿಗೆ ಮನವಿ ಸಲ್ಲಿಸಿ, ಇಲ್ಲಿ ನಿರ್ಮಾಣಗೊಂಡ ಡಬ್ಬಾ ಅಂಗಡಿ ತೆರವುಗೊಳಿಸುವಂತೆ ಮನವಿ ಕೂಡಾ ಸಲ್ಲಿಸಿದ್ದಾರೆ. ಈ ಕುರಿತು ಕ್ರಮ ಕೈಗೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರಷ್ಟೇ. ಆದರೆ, ಭರವಸೆ ಕಾರ್ಯಗತವಾಗಿಲ್ಲ. ಅಲ್ಲದೇ, ಡಬ್ಬಾ ಅಂಗಡಿ ನಿರ್ಮಾಣ ಮಾಡುವ ಮೊದಲು ಅಕ್ಕಪಕ್ಕದ ಅಂಗಡಿ ಮಾಲೀಕರ ಅಭಿಪ್ರಾಯ ಕೇಳಬೇಕಿತ್ತು. ಆದರೆ, ಇದಾವುದನ್ನೂ ಮಾಡದೆ, ರಾತ್ರೋರಾತ್ರಿ ಡಬ್ಬಾ ಅಂಗಡಿ ಹುಟ್ಟಿಕೊಂಡಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ. ನಿಯಮ ಮೀರಿ ಪಾಲಿಕೆ ಅಧಿಕಾರಿಗಳು ಡಬ್ಬಾ ಅಂಗಡಿ ನಿರ್ಮಿಸಲು ಅನುಮತಿ ನೀಡಿರುವುದು ಹೇಗೆ ಎಂಬುದು ಸಾರ್ವಜನಿಕರ ಪ್ರಶ್ನೆ.
ಈ ಮಧ್ಯೆ ಸುಪ್ರಿಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಬೀದಿ ಬದಿ ವ್ಯಾಪಾರಸ್ಥರಿಗೆ ಹಾಕರ್ಸ್ ಝೋನ್ ನಿರ್ಮಿಸಿ ಅವರಿಗೆ ಪ್ರತ್ಯೇಕ ಸ್ಥಳ ಒದಗಿಸಬೇಕೆಂದು ಹೈಕೋರ್ಟ್ ಸಂಚಾರಿ ಪೀಠ ಹಲವು ಬಾರಿ ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆಯನ್ನು ಸೂಚಿಸಿದೆ. ಈ ಕುರಿತು ದಾಖಲಾಗಿದ್ದ ಪ್ರಕರಣದಲ್ಲಿ ನಾಲ್ಕು ತಿಂಗಳಲ್ಲಿ ಬೀದಿ ಬದಿ ವ್ಯಾಪಾರಸ್ಥರ ಸಮೀಕ್ಷೆ ನಡೆಸಿ, ಎಂಟು ತಿಂಗಳೊಳಗಾಗಿ ಬೀದಿ ಬದಿ ವ್ಯಾಪಾರಸ್ಥರನ್ನು ಹಾಕರ್ಸ್ ಝೋನ್ಗೆ ಸ್ಥಳಾಂತರಿಸುವಂತೆ ಕೂಡಾ ಸೂಚಿಸಿದೆ.
ಈ ಕುರಿತು ಗಂಭೀರ ಚಿಂತನೆ ನಡೆಸದ ಪಾಲಿಕೆ ನಗರದ ಮಧ್ಯೆ ಭಾಗದಲ್ಲಿ ಡಬ್ಬಾ ಅಂಗಡಿ ನಿರ್ಮಿಸಲು ಅನುಮತಿ ನೀಡುತ್ತಿರುವುದು ನಗರದ ಸೌಂದರ್ಯಿಕರಣಕ್ಕೂ ಧಕ್ಕೆಯಾದಂತಾಗಿದೆ.
ಆದ್ದರಿಂದ ಕೂಡಲೇ ಅನಧಿಕೃತವಾಗಿ ಉದ್ಭವಗೊಂಡ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಿ ಸಾರ್ವಜನಿಕರಿಗೆ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡುವ ಅಗತ್ಯವಿದೆ.