ಸರ್ಕಾರ ಪ್ರಶ್ನಿಸುವಲ್ಲಿ ವಿಪಕ್ಷಗಳು ವಿಫಲ
ಕಂಪ್ಲಿ: ಶಾಸಕರು ರಾಜಿನಾಮೆ ನೀಡಿರುವುದರಿಂದ ರಾಜ್ಯ ಬಿಜೆಪಿ ಸರ್ಕಾರ ಅಲ್ಪಮತಕ್ಕೆ ಕುಸಿದಿದ್ದು, ಇದನ್ನು ಪ್ರಶ್ನಿಸುವಲ್ಲಿ ಕಾಂಗ್ರೆಸ್, ಜೆಡಿಎಸ್ ವಿಫಲವಾಗಿವೆ ಎಂದು ವಿರಾಜಪೇಟೆ ಮಾಜಿ ಶಾಸಕ, ಕೆಜೆಪಿ ರಾಜ್ಯ ಮುಖಂಡ ಎಚ್.ಡಿ. ಬಸವರಾಜ್ ಆರೋಪಿಸಿದರು. ಕಂಪ್ಲಿಯ ಸಾಂಗಾತ್ರಯ ಸಂಸ್ಕೃತ ಪಾಠಶಾಲೆ ಆವರಣದಲ್ಲಿ ಕೆಜೆಪಿ ಸೋಮವಾರ ಹಮ್ಮಿಕೊಂಡಿದ್ದ ವಿಧಾನಸಭಾ ಕ್ಷೇತ್ರದ ಕೆಜೆಪಿ ಕಾರ್ಯಕರ್ತರ ಸಮಾವೇಶ, ಸದಸ್ಯತ್ವ ನೋಂದಣಿ ಅಭಿಯಾನ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಧಿಕಾರ ಇದ್ದಾಗ ಮಾತ್ರವಲ್ಲ, ಅಧಿಕಾರ ಇಲ್ಲದಿದ್ದಾಗ ಜನಪರವಾಗಿ ಮುಖಂಡರು ನಿಲ್ಲಬೇಕು. ಕೆಜೆಪಿ ಅನ್ಯ ಪಕ್ಷಗಳಿಗಿಂತ ಭಿನ್ನವಾಗಿ ಜಾತ್ಯತೀತವಾಗಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವುದರೊಂದಿಗೆ ಮಾದರಿ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ತಿಳಿಸಿದರು.
ಕೆಜೆಪಿ ಬೆಂಬಲಿಸಿ: ಕೆಜೆಪಿ ಪೂರ್ವ ವಲಯ ಜಿಲ್ಲಾಧ್ಯಕ್ಷ ಪಾರ್ಥಸಾರಥಿ ಮಾತನಾಡಿ, ಜಿಲ್ಲೆಗೆ ಹೊಸ ಆಯಾಮ ನೀಡಲು ಕೆಜೆಪಿ ಆಸಕ್ತಿ ಹೊಂದಿದ್ದು, ಮತದಾರರು ಸಮರ್ಪಕ ಮೂಲಭೂತ ಸೌಲಭ್ಯಗಳನ್ನು ಪಡೆಯಲು ಕೆಜೆಪಿ ಅಭ್ಯರ್ಥಿಗಳನ್ನು ಬೆಂಬಲಿಸಬೇಕು ಎಂದು ಕೋರಿದರು. ಕೆಜೆಪಿ ನೂತನ ಪದಾಧಿಕಾರಿಗಳ ಘೋಷಣೆ ಮಾಡಲಾಯಿತು. ಕೆಜೆಪಿ ಕಂಪ್ಲಿ ನಗರ ಅಧ್ಯಕ್ಷ ಡಿ. ಶ್ರೀಧರಶೆಟ್ಟಿ, ಕಂಪ್ಲಿ ಗ್ರಾಮೀಣ ಘಟಕಾಧ್ಯಕ್ಷ ಹರ್ಷವರ್ಧನ, ಪೂರ್ವ ವಲಯ ಜಿಲ್ಲಾ ಉಪಾಧ್ಯಕ್ಷ ಕಲ್ಗುಡಿ ಮಂಜುನಾಥ್, ಹೊಸಪೇಟೆ ಅಲ್ಪಸಂಖ್ಯಾತ ಘಟಕ ಉಪಾಧ್ಯಕ್ಷ ಅಬ್ದುಲ್ ಲತೀಫ್ ಸಾಹೇಬ್, ಜಿಲ್ಲಾ ಯುವ ಘಟಕ ಅಧ್ಯಕ್ಷ ಜಿ. ಮಂಜುನಾಥ್, ಬಳ್ಳಾರಿ ನಗರ ಘಟಕ ಅಧ್ಯಕ್ಷ ರಾಮ್ದಾಸ್, ಪೂರ್ವ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮನಗೌಡ ಕಾಶಿರೆಡ್ಡಿ ಮತ್ತು ನಾಗಿರೆಡ್ಡಿ ಇವರ ನೇಮಕ ಮಾಡಲಾಯಿತು.
ಪಕ್ಷಕ್ಕೆ ಸೇರ್ಪಡೆ: ನೂರಾರು ಕಾರ್ಯಕರ್ತರು ಸದಸ್ಯತ್ವ ಅಭಿಯಾನದಲ್ಲಿ ಹೆಸರನ್ನು ನೋಂದಾಯಿಸಿದರು. ಹಲವರು ಕೆಜೆಪಿ ಸೇರ್ಪಡೆಗೊಂಡರು. ಸೋಮೇಶ್ವರ ದೇವಸ್ಥಾನದಿಂದ ಸಾಂಗತ್ರಯ ಸಂಸ್ಕೃತ ಪಾಠಶಾಲೆವರೆಗೆ ಕೆಜೆಪಿ ಮೆರವಣಿಗೆ ನಡೆಯಿತು. ಕಂಪ್ಲಿ ವಿಧಾನಸಭಾ ಕ್ಷೇತ್ರದ ವಿವಿಧ ಗ್ರಾಮಗಳ ಕೆಜೆಪಿ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.ಕೆಜೆಪಿ ಪಶ್ಚಿಮ ವಲಯ ಜಿಲ್ಲಾಧ್ಯಕ್ಷ ಗುಡೇಕೋಟೆ ನಾಗರಾಜ್ ವಕೀಲರು, ಮುಖಂಡರಾದ ಕೆ. ಗವಿಸಿದ್ದಪ್ಪ, ವಾಲ್ಮೀಕಿ ಬಸಪ್ಪ, ಪಿ.ಎಸ್. ಬಸಪ್ಪ, ಮೇದಾರ ಗಾಳೆಪ್ಪ, ಮೇದಾರ ರಾಮಣ್ಣ, ಮೇದಾರ ಹನುಮಂತಪ, ಬಿ.ಎಸ್. ವೆಂಕಟಸ್ವಾಮಿ, ಗೌಳೇರು ಬಸವರಾಜ, ಮಹಾದೇವಿ, ಎಂ. ಯಶೋದಮ್ಮ, ಗೀತಾ, ಚಂದ್ರಶೇಖರ, ಮೆಟ್ರಿ ಜಗದೀಶ, ಪೆನಕಲಪಾಟಿ ಹನುಮಂತರಾಯುಡು, ಎಂ. ಗಾಳಿಕುಮಾರ ಇದ್ದರು.