ಹೆಣ್ಣು ಮಕ್ಕಳಿಗೆ ಪೌಷ್ಟಿಕ ಆಹಾರ ಅಗತ್ಯ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 6
ಹೆಣ್ಣು ಮಕ್ಕಳಲ್ಲಿ ಪ್ರಾಕೃತಿಕ ಹಾಗೂ ಭೌತಿಕ ಬದಲಾವಣೆಯ ಹಿನ್ನೆಲೆಯಲ್ಲಿ ಪೌಷ್ಟಿಕ ಆಹಾರ ಅತ್ಯಗತ್ಯವಾಗಿದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಂಜುನಾಥ್ ನಾಯಕ್ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ನೌಕರರಿಗೆ ಪೌಷ್ಟಿಕಾಂಶದ ಪರಿಣಾಮ ಅನುಷ್ಠಾನದ ಕುರಿತಾಗಿ ಏರ್ಪಪಡಿಸಿದ್ದ 2 ದಿನಗಳ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಹೆಣ್ಣು ಮಕ್ಕಳಿಗೆ ಪೌಷ್ಟಿಕ ಆಹಾರದ ಅಗತ್ಯ ಹೆಚ್ಚಾಗಿದೆ. ಪೋಷಕರು ಹಾಗೂ ಇಲಾಖೆಗಳು ಇದನ್ನರಿತು ಕಾರ್ಯೋನ್ಮುಖರಾಗಬೇಕು ಎಂದು ತಿಳಿಸಿದರು.
ಪೌಷ್ಟಿಕ ಆಹಾರ ಸೇವಿಸದ ಯುವತಿಯರಿಗೆ ಹುಟ್ಟುವ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತವೆ. ಗರ್ಭಪಾತವಾಗುವ ಸಾಧ್ಯತೆಯೂ ಇರುತ್ತದೆ. ಅತಿ ಗರ್ಭಪಾತದಿಂದಲೂ ಅಪೌಷ್ಟಿಕತೆಯೂ ಹೆಚ್ಚಾಗುತ್ತದೆ. ಲಿಂಗಾನುಪಾತ ಸಮಪ್ರಮಾಣದಲ್ಲಿರಬೇಕು. ಹೀಗಿದ್ದಾಗ ಸಮಾಜದ ಸ್ವಾಸ್ಥ್ಯ ಚೆನ್ನಾಗಿರುತ್ತದೆ.
ಮಕ್ಕಳಿಗೆ ಸಮತೋಲನ ಆಹಾರದೊಂದಿಗೆ ಶಿಕ್ಷಣ ನೀಡಬೇಕು. ಪೋಷಕರು ಹಾಗೂ ಸಂಬಂಧಿಸಿದ ಎಲ್ಲಾ ಇಲಾಖೆಗಳು ಈ ನಿಟ್ಟಿನಲ್ಲಿ ಮುಂದಾಗಬೇಕು. ಇದರ ಬಗ್ಗೆ ಜಾಗೃತಿ ಮೂಡಿಸಬೇಕು. ಅದರಲ್ಲೂ ವಿಶೇಷವಾಗಿ ಹೈದ್ರಾಬಾದ್ ಕರ್ನಾಟಕ ಪ್ರದೇಶದಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜೊತೆಗೆ ಪೋಷಕರಿಗೆ ಅರಿವು ಮೂಡಿಸಬೇಕು ಎಂದರು.
ದೇಹಕ್ಕೆ ಅಗತ್ಯವಿರುವ ಪೋಷಕಾಂಶ, ಜೀವಸತ್ವ, ಖನಿಜಾಂಶ, ಕಬ್ಬಿಣಾಂಶ, ನಾರಿನಂಶ, ನೀರಿನಂಶವುಳ್ಳ ಆಹಾರ ಸೇವಿಸಬೇಕು. ಪ್ರೌಢಾವಸ್ಥೆಯಲ್ಲಿರುವ ಬಾಲಕಿಯರಿಗೆ ಪೌಷ್ಠಿಕ ಆಹಾರ ಅತ್ಯಾವಶ್ಯಕ. ಪೌಷ್ಟಿಕ ಆಹಾರ ಸೇವಿಸಿದ ಬಾಲಕಿಯರು ಮಾತ್ರ ಮುಂದೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಬಲ್ಲರು. ಮಗುವಿನ ಬೆಳವಣಿಗೆಗೆ ದ್ವಿದಳ, ಏಕದಳ ಧಾನ್ಯ, ರಾಗಿ, ಸಜ್ಜೆ, ಗೋದಿ, ಮೊಳಕೆ ಕಾಳು, ಎ,ಬಿ,ಸಿ,ಡಿ, ಅನ್ನಾಂಗಗಳಿರುವ ಶಕ್ತಿಯುತ ಆಹಾರ ಪೂರಕವಾಗಿರುತ್ತದೆ. ಹಾಲು, ಮೊಟ್ಟೆಯ ಹಳದಿ ಭಾಗದಿಂದ ಪ್ರೋಟಿನ್ ದೊರೆಯುತ್ತದೆ. ಪ್ರೋಟಿನ್‌ನಿಂದ ಮಾಸಖಂಡ ಬೆಳವಣಿಗೆಯಾಗುವುದು ಎಂದು ಹೇಳಿದರು.
ಡಿಟಿಐ ಪ್ರಾಚಾರ್ಯ ಶ್ರೀಹರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಚಾಲಕ ಜಿ. ಎಂ. ಸರ್ವೇಶ್ವರ ವಂದಿಸಿದರು.