ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಟಿಕೆಟ್‌ಗಾಗಿ ಲಾಬಿ ಶುರು

Parashurama
Updated On : 8 Feb 2013, 11:04 am

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 7
ಒಂದಡೆ ರಾಜಕೀಯ ಪಕ್ಷಗಳು ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸಿದ್ದರೆ, ಇತ್ತ ಸ್ಥಳೀಯ ಸಂಸ್ಥೆ ಚುನಾವಣೆಗೆ ರಾಜ್ಯ ಚುನಾವಣೆ ಆಯೋಗ ಅಸ್ತು ನೀಡಿರುವ ಹಿನ್ನೆಲೆಯಲ್ಲಿ ವಿಧಾನಸಭೆಯನ್ನು ಬಿಟ್ಟು, ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಪಕ್ಷಗಳು ಒಲ್ಲದ ಮನಸ್ಸಿನಿಂದ ಅಣಿಗೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ಅಲ್ಲದೇ ಸ್ಥಳೀಯ ಸಂಸ್ಥೆ ಚುನಾವಣೆಗೆ ಸ್ಪರ್ಧಿಸಲು ಆಕಾಂಕ್ಷಿಗಳು ಇದೀಗ ಟಿಕೆಟ್‌ಗಾಗಿ ಲಾಬಿ ಮಾಡಲಿದ್ದಾರೆ.
ಚುನಾವಣೆಯ ಘೋಷಣೆ ಪೂರ್ವದಲ್ಲೇ ವಿಧಾನಸಭೆ ಟಿಕೆಟ್ ಆಕಾಂಕ್ಷಿಗಳು ಪ್ರಚಾರ ಕಾರ್ಯವನ್ನು ಬಹಿರಂಗವಾಗಿ ಶುರು ಮಾಡಿದ್ದರು. ಇದೀಗ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಸುಪ್ರೀಂ ಕೋರ್ಟ್ ಆದೇಶದಂತೆ ಮಾಡಬೇಕೆಂದು ರಾಜ್ಯ ಚುನಾವಣೆ ಆಯೋಗ ಸಿದ್ಧತೆ ನಡೆಸಲು ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಿದೆ. ಹೀಗಾಗಿ ರಾಜಕಾರಣಿಗಳು ಒಲ್ಲದ ಮನಸ್ಸಿನಿಂದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಣಿಗೊಳ್ಳುವಂತೆ ಆಗಿದೆ.
ಗಲ್ಲಿ ರಾಜಕಾರಣ ಆರಂಭ: ಒಂದೊಂದು ಚುನಾವಣೆ ಒಂದೊಂದು ರೀತಿಯಲ್ಲಿರುತ್ತವೆ. ರಾಜಕಾರಣಿಗಳು ಗಲ್ಲಿ ರಾಜಕಾರಣದಿಂದಲೇ ತಮ್ಮ ರಾಜಕೀಯ ಜೀವನ ಆರಂಭಿಸುತ್ತಾರೆ. 2007ರ ಚುನಾವಣೆ ಮೀಸಲಾತಿಯನ್ನೇ 2013ರ ಚುನಾವಣೆಗೆ ಬಳಸುವಂತೆ ಅಧಿಸೂಚನೆ ಹೊರಡಿಸಿದ ಹಿನ್ನೆಲೆಯಲ್ಲಿ ವಿಧಾನಸಭೆ ಚುನಾವಣೆಗಿಂತ ಸ್ಥಳೀಯ ಸಂಸ್ಥೆಗಳ ಚುನಾವಣೆ ಮಾತೇ ಹೆಚ್ಚಾಗುತ್ತಿದೆ. ವಾರ್ಡ್‌ಗಳ ಮೀಸಲಾತಿ ಪಟ್ಟಿಯನ್ನು ಜಿಲ್ಲಾ ಚುನಾವಣಾಧಿಕಾರಿ ಬುಧವಾರ ಮಾಧ್ಯಮಗಳಿಗೆ ಬಿಡುಗಡೆ ಮಾಡಿದ್ದರಿಂದ ಟಿಕೆಟ್ ಆಕಾಂಕ್ಷಿಗಳು ಆಗಲೇ ರಾಜಕೀಯ, ಟಿಕೆಟ್ ಬಗ್ಗೆ ಚಿಂತಿಸ ತೊಡಗಿದ್ದಾರೆ.
ರಾಜಕೀಯ ಭವಿಷ್ಯ: ಮಾಧ್ಯಮಗಳಲ್ಲಿ ಪ್ರಕಟವಾದ ವಾರ್ಡ್‌ಗಳ ಮೀಸಲಾತಿ ವಿವರಗಳನ್ನು ಕೈಯಲ್ಲಿಟ್ಟುಕೊಂಡು, ತಮ್ಮ ವಾರ್ಡ್‌ಗಳ ಮೀಸಲಾತಿ ಯಾವುದು? ಯಾರಿಗೆ ಟಿಕೆಟ್ ಕೊಡಬಹುದು? ಎಂಬ ಲೆಕ್ಕಾಚಾರ ಈಗಲೇ ಶುರುವಾಗಿದೆ. ಈಗಿನ ಬಹುತೇಕ ರಾಜಕಾರಣಿಗಳು ಸ್ಥಳೀಯ ಸಂಸ್ಥೆಗಳ ಚುನಾವಣೆ ಮೂಲಕವೇ ರಾಜಕಾರಣದ ಉತ್ತುಂಗ ಶಿಖರಕ್ಕೆ ಏರಿದ್ದಾರೆ.
ಇಂತಹ ಲೆಕ್ಕಾಚಾರದಲ್ಲಿರುವ ಬಹುತೇಕರು, ಸ್ಥಳೀಯ ಸಂಸ್ಥೆಗಳಲ್ಲಿ ಸ್ಪರ್ಧಿಸುವ ಮೂಲಕ ರಾಜಕೀಯ ಭವಿಷ್ಯ ಕಂಡುಕೊಳ್ಳಲು ಹವಣಿಸುತ್ತಿದ್ದಾರೆ.
ಪಕ್ಷಗಳಿಗೆ ಅಸ್ತಿತ್ವದ ಪ್ರಶ್ನೆ: ವಿಧಾನಸಭೆ ಚುನಾವಣೆ ಇರುವುದರಿಂದ ಸ್ಥಳೀಯ ಸಂಸ್ಥೆಗಳ ಅಧಿಕಾರದ ಚುಕ್ಕಾಣಿ ಹಿಡಿಯುವುದು ರಾಜಕೀಯ ಪಕ್ಷಗಳಿಗೆ ಮುಖ್ಯವಾಗಿದೆ. ಸ್ಥಳೀಯ ಸಂಸ್ಥೆಗಳಲ್ಲಿ ಅಸ್ತಿತ್ವ ಕಂಡುಕೊಂಡರೆ, ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಭವಿಷ್ಯ ಉತ್ತಮವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ರಾಜಕೀಯ ಪಕ್ಷಗಳಿಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆಸಲು ಇಷ್ಟವಿಲ್ಲದಿದ್ದರೂ, ಮುಂದಿನ ವಿಧಾನಸಭೆ ಚುನಾವಣೆ ದೃಷ್ಟಿಕೋನದಿಂದ ಆಸಕ್ತಿ ವಹಿಸಬೇಕಾದ ಪರಿಸ್ಥಿತಿ ಉದ್ಭವವಾಗಿದೆ.
ಕಳೆದ ಬಾರಿ ಬಳ್ಳಾರಿ ಮಹಾನಗರ ಪಾಲಿಕೆ ಸೇರಿದಂತೆ ಪುರಸಭೆ, ಪಟ್ಟಣ ಪಂಚಾಯ್ತಿ, ನಗರ ಸಭೆಗಳ ಬಹುತೇಕ ಸ್ಥಾನದಲ್ಲಿ ಬಿಜೆಪಿ ಗೆಲವು ಸಾಧಿಸುವ ಮೂಲಕ ವಿಧಾನಸಭೆ, ಲೋಕಸಭೆ, ವಿಧಾನಪರಿಷತ್ ಸೇರಿದಂತೆ ಇತರ ಚುನಾವಣೆಯಲ್ಲಿ ಗೆಲವು ಸಾಧಿಸಲು ನೆರವಾಗಿರುವುದನ್ನು ಮರೆಯುವಂತಿಲ್ಲ. ಇನ್ನೊಂದು ದೃಷ್ಟಿಯಲ್ಲಿ ಸ್ಥಳೀಯ ಸಂಸ್ಥೆಯ ಟಿಕೆಟ್ ಆಕಾಂಕ್ಷಿಗೆ ಅವಕಾಶ ಸಿಗದೇ ಹೋದರೆ, ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ತಪ್ಪಿಸಿದ ಪಕ್ಷಕ್ಕೆ ಬೆಂಬಲ ನೀಡದಿರುವ ಅಪಾಯ ಪಕ್ಷಗಳನ್ನು ಕಾಡುತ್ತಿದೆ.
ಈ ಬಾರಿ ಪ್ರಕಟವಾಗಿರುವ ಮೀಸಲಾತಿಯಲ್ಲಿ ಯಾರು ಯಾವ ಪಕ್ಷದಿಂದ ಟಿಕೆಟ್ ಪಡೆದು ಸ್ಥಳೀಯ ಸಂಸ್ಥೆಗಳಿಗೆ ಆಯ್ಕೆಯಾಗುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ ಬರುವ ವಿಧಾನಸಭೆ ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು ಎಂಬ ಲೆಕ್ಕಾಚಾರ ಈಗಾಗಲೇ ಆರಂಭವಾಗಿದೆ.
-ಶಶಿಧರ ಮೇಟ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments