ಪ್ರತಿಭಟಿಸಲಾಗದೇ ಧರಣಿ ಹಿಂದಕ್ಕೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 7
ಬಿಎಸ್ಸಾರ್ ಪಕ್ಷದ ರಾಜ್ಯಾಧ್ಯಕ್ಷ ಶ್ರೀರಾಮುಲು ಪ್ರತಿಭಟಿಸಲಾಗದೆ, ಧರಣಿ ಮಾಡಲು ಸಾಧ್ಯವಾಗದೆ ಧರಣಿ ಅಂತ್ಯಗೊಳಿಸಿದ್ದಾರೆಯೇ ಹೊರತು, ಎಲ್ಎಲ್ ಕಾಲುವೆಗೆ ನೀರು ಬಿಟ್ಟಿಲ್ಲ ಎಂದು ವಿಧಾನಪರಿಷತ್ ಮಾಜಿ ಸದಸ್ಯ ಕೆ.ಸಿ. ಕೊಂಡಯ್ಯ, ಮಾಜಿ ಸಚಿವ ಅಲ್ಲಂ ವೀರಭದ್ರಪ್ಪ, ಇತರ ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.
ನಗರದ ಮುನ್ಸಿಪಾಲ್ ಕಾಲೇಜು ಮೈದಾನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಎಲ್ಸಿಗೆ ನೀರು ಬಿಡಲಾಗಿದೆ ಎಂದು ಶುದ್ಧ ಸುಳ್ಳು ಹರಿಬಿಟ್ಟಿರುವ ಬಿಎಸ್ಸಾರ್ ಕಾಂಗ್ರೆಸ್ನದು ಬೂಟಾಟಿಕೆ. ಬಿಎಸ್ಸಾರ್ ಹಾಗೂ ಬಿಜೆಪಿಗೆ ರೈತರ ಹಿತಕಾಯುವ ಯಾವುದೇ ಇಚ್ಛಾಶಕ್ತಿ ಇಲ್ಲ. ಕಾಲುವೆಗೆ ನೀರು ಬಿಡಲಾಗಿದೆ ಎಂದು ಹೇಳಿ ರೈತರನ್ನು ದಾರಿ ತಪ್ಪಿಸಲಾಗಿದೆ. ಮುನಿರಾಬಾದ್ನಲ್ಲಿ ಧರಣಿ ನಡೆಸಿದ ಶ್ರೀರಾಮುಲು, ಸೋಮಶೇಖರ ರೆಡ್ಡಿ ಮತ್ತಿತರರು, ಗೇಟ್ ಎತ್ತಲಾಗಿದೆ. ಇನ್ನೇನು ನೀರು ಬಂದೇ ಬಿಡುತ್ತದೆ ಎಂದು ಸುಳ್ಳು ಹೇಳಿದ್ದಾರೆ ಎಂದರು.
ಕಾಲುವೆಗೆ ನೀರು ಬಿಡುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕುಳಿತ ಸಿರುಗುಪ್ಪ ಶಾಸಕ ಎಂ.ಎಸ್. ಸೋಮಲಿಂಗಪ್ಪ ಅವರು ಮುಖ್ಯಮಂತ್ರಿಗಳ ಮೇಲೆ ಒತ್ತಡ ತಂದು ರೈತರ ನೆರವಿಗೆ ಏಕೆ ಮುಂದಾಗಲಿಲ್ಲ? ವಿಪ್ ಜಾರಿಯಾಗುತ್ತದೆ ಎಂಬ ಕಾರಣಕ್ಕೆ ಬೆಂಗಳೂರಿಗೆ ತೆರಳಿರುವ ಅವರು, ರೈತರ ಹಿತ ಕಾಪಾಡುವ ನಿಟ್ಟಿನಲ್ಲಿ ಏಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ದಾರಿ ತಪ್ಪಿಸಬೇಡಿ: ಜೆಪಿ, ಬಿಎಸ್ಸಾರ್ ಕಾಂಗ್ರೆಸ್ನವರಂತೆ ನಾಟಕವಾಡಲು ನಮಗೆ ಬರುವುದಿಲ್ಲ, ರೈತರ ಹಿತ ಕಾಯುವುದು ಎಲ್ಲ ಪಕ್ಷಗಳ ಜವಾಬ್ದಾರಿಯೂ ಆಗಿದೆ. ರೈತರ ಸಮಸ್ಯೆಗಳನ್ನು ರಾಜಕೀಯ ಗಾಳವಾಗಿ ಬಳಸಿಕೊಳ್ಳಬಾರದು. ವಾಸ್ತವ ಸ್ಥಿತಿಯನ್ನು ರೈತರಿಗೆ ಮನವರಿಕೆ ಮಾಡಿಕೊಡಬೇಕೇ ವಿನಃ ಎಲ್ಎಲ್ಸಿಗೆ ನೀರು ಬಿಡಲಾಗಿದೆ ಎಂದು ಸುಳ್ಳು ಹೇಳಿಕೆಗಳನ್ನು ನೀಡಿ ರೈತ ಸಮುದಾಯವನ್ನು ದಾರಿ ತಪ್ಪಿಸುವ ಕೆಲಸ ಮಾಡಬಾರದು ಎಂದು ತಿಳಿಸಿದರು.
ನಾಳೆ ಸನ್ಮಾನ: ಹೈದರಾಬಾದ್-ಕರ್ನಾಟಕ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಸ್ಥಾನಮಾನ ಕಲ್ಪಿಸುವ 371 (ಜೆ) ಕಲಂಗೆ ತಿದ್ದುಪಡಿ ತರುವ ನಿಟ್ಟಿನಲ್ಲಿ ಬಹುವಾಗಿ ಶ್ರಮಿಸಿದ ಕೇಂದ್ರದ ಸಚಿವರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಧರ್ಮಸಿಂಗ್ ಅವರಿಗೆ ಫೆ. 9ರಂದು ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದ್ದು, ಸುಮಾರು 20 ಸಾವಿರ ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ವೇದಿಕೆಗೆ ಮಾಜಿ ಉಪ ಮುಖ್ಯಮಂತ್ರಿ ದಿ.ಎಂ.ಪಿ. ಪ್ರಕಾಶ್ ಹೆಸರನ್ನಿಡಲಾಗಿದೆ ಎಂದರು.
ರಾಜ್ಯಸಭಾ ಸದಸ್ಯ ಅನಿಲ್ ಲಾಡ್, ಪಕ್ಷದ ಹಿರಿಯ ಮುಖಂಡರಾದ ಅಬ್ದುಲ್ ವಹಾಬ್, ಎನ್. ಪ್ರತಾಪ ರೆಡ್ಡಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆಂಜನೇಯಲು, ಕಮಲಾ ಮರಿಸ್ವಾಮಿ, ನಾಸಿರ್ ಹುಸೇನ್, ಕಲ್ಲುಕಂಬ ಪಂಪಾಪತಿ, ಬಿ. ರಾಂಪ್ರಸಾದ್, ಎಲ್. ಮಾರೆಣ್ಣ, ಹೊನ್ನೂರಪ್ಪ, ಎಚ್. ಅರ್ಜುನ್, ವಿ.ಕೆ. ಬಸಪ್ಪ, ಗೋಪಾಲಕೃಷ್ಣ, ಬೆಣಕಲ್ ಬಸವರಾಜ್, ಅಸುಂಡಿ ನಾಗರಾಜ್, ಅರುಣ್ಕುಮಾರ್ ಇದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.