ಕೊಟ್ಟೂರು: ಸ್ಥಳೀಯ ಬಿಜೆಪಿ ಮುಖಂಡ ಶೆಟ್ಟಿ ತಿಂದಪ್ಪ ಅವರನ್ನು ಸೆಳೆಯಲು ಜೆಡಿಎಸ್ ಪ್ರಯತ್ನ ನಡೆಸಿದೆ. ಹರಪನಹಳ್ಳಿಗೆ ಇತ್ತೀಚೆಗೆ ಆಗಮಿಸಿದ್ದ ಜೆಡಿಎಸ್ ಮಹಾ ಪ್ರಧಾನ ಕಾರ್ಯದರ್ಶಿ ಬಸವನಗೌಡ ಯತ್ನಾಳ್ ತಿಂದಪ್ಪ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಕರೆಸಿಕೊಂಡಿದ್ದಾರೆ. ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ. ಜೆಡಿಎಸ್ ಸೇರುವಂತೆ ಆಹ್ವಾನ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಬಿಜೆಪಿ ರಾಜ್ಯ ಮತ್ತು ಹಿರಿಯ ನಾಯಕರ ನಡವಳಿಕೆಯಿಂದ ರೋಸಿ ಹೋಗಿರುವ ಶೆಟ್ಟಿ ತಿಂದಪ್ಪ ಕೆಲವು ದಿನಗಳಿಂದ ಪಕ್ಷದ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿರಲಿಲ್ಲ. ಈ ಸಂಬಂಧ 'ಕನ್ನಡಪ್ರಭ' ತಿಂದಪ್ಪ ಅವರನ್ನು ಸಂಪರ್ಕಿಸಿದಾಗ, ಬಿಜೆಪಿ ರಾಜ್ಯ ನಾಯಕರ ಕಣ್ಣುಗಳು ಅಧಿಕಾರದ ಮದದಿಂದ ಮುಚ್ಚಿಹೋಗಿವೆ. ಬಳ್ಳಾರಿ ಮುಖಂಡರನ್ನೇ ಇಡೀ ಜಿಲ್ಲೆಯನ್ನು ಪ್ರತಿನಿಧಿಸುವ ಮಹಾನ್ ನಾಯಕರಂತೆ ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದರು. ಬಸವನಗೌಡ ಪಾಟೀಲ್ ಯತ್ನಾಳ್ ವಿಶ್ವಾಸದ ನಾಯಕರಾಗಿದ್ದು, ಅವರಿದ್ದ ಕಡೆ ತಾವು ತೆರಳಲು ಮನಸ್ಸು ಮಾಡಿದ್ದೇನೆ ಎಂದು ಅವರು ತಿಳಿಸಿದರು.