ಕೊಟ್ಟೂರು ನೂತನ ತಾಲೂಕು: ಸಂಭ್ರಮಾಚರಣೆ
ಕೊಟ್ಟೂರು: ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಈ ಬಾರಿಯ ಬಜೆಟ್ನಲ್ಲಿ ಕೊಟ್ಟೂರನ್ನು ತಾಲೂಕು ರಚನೆಗೆ ಕ್ರಮಕೈಗೊಂಡಿರುವುದಕ್ಕೆ ಸಂಭ್ರಮ ವ್ಯಕ್ತಪಡಿಸಿ ಶುಕ್ರವಾರ ಪಟ್ಟಣದ ಜನತೆ ಸಂತಸ ಹಂಚಿಕೊಂಡರು. ಅತ್ತ ವಿಧಾನಸೌಧದಲ್ಲಿ ಅಧಿಕೃತ ತಾಲೂಕು ರಚನೆ ಘೋಷಣಾ ವರದಿ ಪ್ರಕಟಗೊಳ್ಳುತ್ತಿದ್ದಂತೆ ಪಟ್ಟಣದೆಲ್ಲೆಡೆ ಸಡಗರ ಸಂಭ್ರಮ ಮನೆಮಾಡಿತ್ತು.
ಶಾಸಕ ಕೆ. ನೇಮಿರಾಜ್ ನಾಯ್ಕ್ ಕೊಟ್ಟೂರು ತಾಲೂಕು ಘೋಷಣೆಯಾಗುವ ಕುರಿತು ಬಜೆಟ್ ಮಂಡನೆಗೆ ಮುಂಚಿತವಾಗಿ ಸ್ಥಳೀಯ ಕಾರ್ಯಕರ್ತರಿಗೆ ದೂರವಾಣಿ ಮೂಲಕ ವಿಷಯ ತಿಳಿಸುತ್ತಿದ್ದಂತೆಯೇ ಬಿಜೆಪಿ, ಬಿಎಸ್ಸಾರ್, ಕಾಂಗ್ರೆಸ್, ಕರವೇ ಕಾಯಕರ್ತರು ಪ್ರತ್ಯೇಕವಾಗಿ ವಿಜಯೋತ್ಸವ ಆಚರಿಸಿದರು. ಇಲ್ಲಿನ ಬಸ್ ನಿಲ್ದಾಣ ವೃತ್ತ, ಎಪಿಎಂಸಿ ಬಳಿ ಮತ್ತು ಉಜ್ಜಯಿನಿ ರಸ್ತೆಯ ಪ್ರಮುಖ ವೃತ್ತಗಳಲ್ಲಿ ಭಾರಿ ಪ್ರಮಾಣದ ಪಟಾಕಿಗಳನ್ನು ಸಿಡಿಸಿ ಸಿಹಿ ಹಂಚಿದರು. ಬಿಜೆಪಿಯ ಪಪಂ ಉಪಾಧ್ಯಕ್ಷ ಎಚ್. ಗುರುಬಸವರಾಜ, ಸದಸ್ಯರಾದ ಕೊಟ್ರೇಶ್ ಕಾಮಶೆಟ್ಟಿ, ಬಿ.ದುರುಗೇಶ್, ಭರಮನಗೌಡ ಪಾಟೇಲ್, ಮರಬದ ನಾಗರಾಜ, ಎಂ.ಎಂ.ಜೆ. ಕುಮಾರಸ್ವಾಮಿ, ವೀರೇಶ್ಗೌಡ, ಚಿರಿಬಿ ಕೊಟ್ರೇಶ್, ಕೆ.ಎಸ್. ವಿವೇಕಾನಂದಗೌಡ ಪಾಲ್ಗೊಂಡಿದ್ದರು. ಕರವೇಯ ಬೈಕ್ರ್ಯಾಲಿಯಲ್ಲಿ ಎಂ.ಎಂ.ಜೆ. ಹರ್ಷವರ್ಧನ್, ದ್ವಾರಕೇಶ, ಶಿವಕುಮಾರಗೌಡ, ಕರಿಬಸವನಗೌ, ಸಂತೋಷ್, ಪ್ರಕಾಶ್ ಪಾಲ್ಗೊಂಡಿದ್ದರು. ಬಿಎಸ್ಸಾರ್ನ ಸಂಭ್ರಮಾಚರಣೆಯಲ್ಲಿ ಎಂ.ಎಂ.ಜೆ. ಸ್ವರೂಪಾನಂದ, ಮೂಗಪ್ಪ, ಆಟೋಚಾಲಕ ಸಂಘದವರು ಭಾಗವಹಿಸಿ ತಾಲೂಕುಪರ ಘೋಷಣೆಗಳನ್ನು ಕೂಗಿದರು.
ಅಭಿನಂದನೆ: ಕೊಟ್ಟೂರು ತಾಲೂಕು ರಚನೆಗೆ ಕಾರಣಕರ್ತರಾದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತಿ ಶಾಸಕ ನೇಮಿರಾಜ್ಗೆ ಸ್ಥಳೀಯ ಮುಖಂಡರು ಅಭಿನಂದನೆಗಳ ಮಹಾಪೂರವನ್ನೇ ಪಕ್ಷಾತೀತವಾಗಿ ಸಲ್ಲಿಸಿದರು. ಕಟ್ಟೇಮನಿ ಹಿರೇಮಠಾಧ್ಯಕ್ಷ ಶ್ರೀ ಯೋಗಿರಾಜೇಂದ್ರ ಶಿವಾಚಾರ್ಯರು, ಸ್ವರೂಪಾನಂದ, ಹರ್ಷವರ್ಧನ್, ಸಾವಜ್ಜಿ ರಾಜೇಂದ್ರಪ್ರಸಾದ್, ಸತ್ಯಪ್ರಕಾಶ್, ತಾಲೂಕು ಹೋರಾಟ ಸಮಿತಿಯ ಪಿ. ಶ್ರೀಧರಶೆಟ್ಟಿ, ಡಿ.ಎಸ್. ಶಿವಮೂರ್ತಿ, ಶಿಕ್ಷಕರ ಸಂಘದ ಈಶ್ವರಪ್ಪ, ಮತ್ತಿಹಳ್ಳಿ ಪ್ರಕಾಶ್, ಹುಡೇದ ಮೃತ್ಯುಂಜಯ, ಬಿ.ಎಸ್. ಕೊಟ್ರೇಶ್, ವರ್ತಕ ಸಂಘಧ ಅಧ್ಯಕ್ಷ ಪಿ. ಗಣೇಶ್, ಬಿ.ಎಸ್. ವೀರೇಶ್, ಎಸ್. ತಿಂದಪ್ಪ, ಸೋಮಯ್ಯ ಮತ್ತಿತರರು ಸ್ವಾಗತಿಸಿ, ಹರ್ಷ ವ್ಯಕ್ತಪಡಿಸಿದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.