4ನೇ ದಿನಕ್ಕೆ ಕಾಲಿಟ್ಟ ಪಾದಯಾತ್ರೆ: ಶಾಸಕರ ವಿರುದ್ಧ ಆಕ್ರೋಶ
ಹಗರಿಬೊಮ್ಮನಹಳ್ಳಿ: ಬಯಲುಸೀಮೆಯ ಜೀವನಾಡಿ ಮಾಲ್ವಿ ಜಲಾಶಯಕ್ಕೆ ಶಾಶ್ವತ ನೀರೊದಗಿಸುವ ಯೋಜನೆಯ ಜಾರಿಗೆ ಆಗ್ರಹಿಸಿ ಜಾತ್ಯತೀತ ಜನತಾದಳ ಆರಂಭಿಸಿರುವ ಪಾದಯಾತ್ರೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಶನಿವಾರ ಮಧ್ಯಾಹ್ನ ಪಟ್ಟಣಕ್ಕೆ ಆಗಮಿಸಿದ ಪಾದಯಾತ್ರೆಗೆ ನಾಗರಿಕರಿಂದ ಉತ್ತಮ ಸ್ವಾಗತ ದೊರಕಿತು. ಬಳಿಕ ಇಲ್ಲಿನ ಬಸವೇಶ್ವರ ಬಜಾರ್ನಲ್ಲಿ ಬಹಿರಂಗ ಸಭೆ ನಡೆಯಿತು.
ಬಹಿರಂಗ ಸಭೆಯನ್ನುದ್ದೇಶಿಸಿ ಪಕ್ಷದ ಮುಖಂಡರಾದ ಮಾತಾಗ್ಯಾಸ್ ಯರ್ರಿಸ್ವಾಮಿ ಮಾತನಾಡಿ, ಪ್ರಸಕ್ತ ಬಜೆಟ್ನಲ್ಲಿ ಮಾಲ್ವಿ ಡ್ಯಾಂಗೆ ಶಾಶ್ವತ ನೀರೋದಗಿಸುವ ಯೋಜನೆ ಜಾರಿಗೊಳಿಸುವುದಾಗಿ, ನಾವು ಪಾದಯಾತ್ರೆ ಆರಂಭಿಸಿದ ಸಮಯದಲ್ಲಿ ಸ್ಥಳೀಯ ಶಾಸಕ ನೇಮಿರಾಜ ನಾಯ್ಕ ಜನತೆಗೆ ಭರವಸೆ ನೀಡಿದ್ದರು. ಆದರೆ, ಬಜೆಟ್ನಲ್ಲಿ ಮಾಲ್ವಿ ಬಗ್ಗೆ ಯಾವುದೇ ಪ್ರಸ್ತಾಪವಾಗಿಲ್ಲ. ಇದರಿಂದಾಗಿ ಶಾಸಕರ ಭರವಸೆ ಸಂಪೂರ್ಣ ಸುಳ್ಳಾಗಿದೆ ಎಂದರು.
ಶಾಸಕರಾಗಿ ಈ ಕ್ಷಣದವರೆಗೂ ಮಾಲ್ವಿ ಬಗ್ಗೆ ಮಾತನಾಡದ ಸ್ಥಳೀಯ ಶಾಸಕ ನೇಮಿರಾಜ ನಾಯ್ಕ, ಮಾಲ್ವಿಗಾಗಿ ಜೆಡಿಎಸ್ ಪಾದಯಾತ್ರೆ ಆರಂಭಿಸಿ, ಜನತೆಯಲ್ಲಿ ಜಾಗೃತಿ ಮೂಡಿಸಲು ಆರಂಭಿಸುತ್ತಿದ್ದಂತೆಯೇ ಬಜೆಟ್ನಲ್ಲಿ ಹಣ ಮುಂಜೂರು ಮಾಡಿಸುವುದಾಗಿ ಹೇಳಿಕೆ ನೀಡುವ ಮೂಲಕ ಜನತೆಯನ್ನು ಹಾದಿತಪ್ಪಿಸುವ ಕೆಲಸ ಮಾಡಿದರು. ಹಸಿ ಸುಳ್ಳು ಹೇಳಿ ಜನತೆಯನ್ನು ದಿಕ್ಕು ತಪ್ಪಿಸುತ್ತಿರುವ ನೇಮಿರಾಜ ನಾಯ್ಕಗೆ ಈ ಸಲದ ಚುನಾವಣೆಯಲ್ಲಿ ಸರಿಯಾದ ಪಾಠ ಕಲಿಸಬೇಕೆಂದು ಯರ್ರಿಸ್ವಾಮಿ ಜನತೆಯಲ್ಲಿ ಮಾನವಿ ಮಾಡಿಕೊಂಡರು.
ಅಧ್ಯಕ್ಷ ವೈ. ಮಲ್ಲಿಕಾರ್ಜುನ ಮಾತನಾಡಿ, ಕ್ಷೇತ್ರದಲ್ಲಿ ಶಾಸಕರ ದುರಾಡಳಿತ ಮೇರೆ ಮೀರಿದೆ. ತಾಲೂಕು ಕಚೇರಿ, ಸಬ್ರಿಜಿಸ್ಟ್ರಾರ್ ಆಫೀಸ್ಗಳಲ್ಲಿ ಲಂಚ ಕೊಡದೇ ಕೆಲಸಗಳು ಆಗುತ್ತಿಲ್ಲ. ಕಚೇರಿಗಳಲ್ಲಿ ಕೆಲಸವಾಗಬೇಕಾದರೆ ಅಧಿಕಾರಿ, ಸಿಬ್ಬಂದಿ ಕೈ ಬೆಚ್ಚಗೆ ಮಾಡಬೇಕಾದ ಅನಿವಾರ್ಯತೆ ಇದೆ. ಕ್ಷೇತ್ರಾದ್ಯಂತ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯ ಸಮಿತಿ ಮುಖಂಡ ಬನ್ನಿಗೋಳ ವೆಂಕಣ್ಣ, ಹೂಗಾರ ಬಸವರಾಜ, ಪೋಟೋ ರಾಮಣ್ಣ, ಎಂ.ಎ. ರಾಮಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಕಲ್ಗುಡಿ ಕಮಲಮ್ಮ, ಎಸ್ಟಿ ಘಟಕದ ಅಧ್ಯಕ್ಷ ಸಣ್ಣಪವಾಡಿ ಹನುಮಂತಪ್ಪ, ಬಾಳಿಕಾಯಿ ವೀರೇಶ್, ಯುವ ಘಟಕದ ಪಾಂಡುರಂಗ ನಾಯ್ಕ, ಎಣ್ಣಿದಾದಾ, ಇಕ್ಬಾಲ್, ನಿಯಾಜ್, ರೈತ ಘಟಕದ ಡಿ.ಶರಣಪ್ಪ, ಅಲ್ಪಸಂಖ್ಯಾತ ಘಟಕದ ಸುಭಾನ್ ಸಾಬ್, ಬಸಣ್ಣ, ಪರಮೇಶ್ವರಪ್ಪ, ದಾದಮ್ಮನವರ ಪರಶುರಾಮ ಭಾಗವಹಿಸಿದ್ದರು.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.