ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕಾಲುವೆಗೆ ನೀರು: ಜೆಡಿಎಸ್ ಉಪವಾಸ ಅಂತ್ಯ

Parashurama
Updated On : 11 Feb 2013, 12:14 pm

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 10
ಎಲ್‌ಎಲ್‌ಸಿಗೆ ಸಮರ್ಪಕ ನೀರು ಬಿಡುವಂತೆ ಒತ್ತಾಯಿಸಿ ಬಿಜೆಪಿ, ಕಾಂಗ್ರೆಸ್ ಹಾಗೂ ಬಿಎಸ್‌ಆರ್ ಮುಖಂಡರು ಧರಣಿ ಕುಳಿತು ನಾಟಕವಾಡಿದ್ದಾರೆ, ಜೆಡಿಎಸ್ ಪ್ರಾಮಾಣಿಕವಾಗಿ ಹೋರಾಟ ನಡೆಸಿದೆ. ಹೀಗಾಗಿ ಎಲ್‌ಎಲ್‌ಸಿಗೆ ನೀರು ಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ಆಮರಣಾಂತ ಉಪವಾಸ ಸತ್ಯಾಗ್ರಹ ಅಂತ್ಯಗೊಳಿಸಲಾಗಿದೆ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಎನ್. ಸೂರ್ಯನಾರಾಯಣ ರೆಡ್ಡಿ ತಿಳಿಸಿದರು.
ಕಾಲುವೆಗೆ ನೀರು ಬಿಟ್ಟ ಸುದ್ದಿ ತಿಳಿಯುತ್ತಿದ್ದಂತೆ ನಗರದಲ್ಲಿ ಮೂರು ದಿನಗಳಿಂದ ಉಪವಾಸ ಕುಳಿತವರಿಗೆ ಎಳನೀರು ನೀಡಿ, ಉಪವಾಸ ಮುಕ್ತಾಯಗೊಳಿಸಲಾಯಿತು. ಬಳಿಕ ಮಾತನಾಡಿದ ಸೂರ್ಯನಾರಾಯಣ ರೆಡ್ಡಿ, ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಮಂತ್ರಿಗಳು, ಮುಖ್ಯಮಂತ್ರಿ, ನೀರಾವರಿ ಸಚಿವರು ಎಲ್ಲರೂ ಇದ್ದಾರೆ, ಆದರೂ ನೀರು ಬಿಡಿಸಲು ಆಗಲಿಲ್ಲ. ಶಾಸಕ ಸೋಮಲಿಂಗಪ್ಪ ಧರಣಿ ಕುಳಿತುಕೊಳ್ಳುವ ಅಗತ್ಯವೆನಿತ್ತು? ತಮ್ಮದೇ ಸರ್ಕಾರ ಇರುವುದರಿಂದ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಬಹುದಿತ್ತು. ಅದು ಬಿಟ್ಟು ಧರಣಿ ಕುಳಿತು ರಾಜಕೀಯ ನಾಟಕವಾಡಿದ್ದಾರೆ ಎಂದು ತಿಳಿಸಿದರು.
ಕಾಲುವೆಗೆ ನೀರು ಬಿಡುವಂತೆ ಬಿಎಸ್‌ಆರ್ ಪಕ್ಷದ ಶಾಸಕರು, ಸಂಸದರು ಟಿ.ಬಿ. ಬೋರ್ಡ್‌ನ ಮುಂದೆ ಧರಣಿ ಕುಳಿತಾಗ, ನೀರು ಬಿಟ್ಟಿದ್ದಾರೆ ಎಂದು ಸುಳ್ಳು ಹೇಳಿ, ಪ್ರತಿಭಟನೆಯಿಂದ ಹಿಂದಕ್ಕೆ ಸರಿದಿದ್ದಾರೆ. ನೀರು ಬಿಟ್ಟಿದ್ದಾರೋ ಇಲ್ಲವೋ ಎಂಬುದನ್ನು ಕಾಲುವೆಗೆ ಹೋಗಿ ಯಾಕೆ ಪರಿಶೀಲಿಸಲಿಲ್ಲ? ಬಳ್ಳಾರಿ ಜಿಲ್ಲಾಧಿಕಾರಿ ಮತ್ತು ಕೆಎಂಎಫ್ ಎಂಡಿ ಅವರನ್ನು ವರ್ಗಾವಣೆ ಮಾಡಬೇಕು ಎಂಬ ಷರತ್ತು ಹಾಕಿದ್ದಾರೆ. ಆದರೆ ನೀರು ಬಿಡುವ ಬಗ್ಗೆ ಷರತ್ತು ಏಕೆ ಹಾಕಲಿಲ್ಲ? ಬಿಜೆಪಿ ವಿಪ್ ಜಾರಿ ಮಾಡಿದಾಕ್ಷಣ ಶಾಸಕರು ಬೆಂಗಳೂರಿಗೆ ತೆರಳಿದ್ದಾರೆ.  ಅವರ ಧರಣಿ ರಾಜಕೀಯ ಪ್ರೇರಿತವಾಗಿದೆ ಎಂದರು.
ಮಾತಿನಲ್ಲಿ ಉತ್ತರ ಕರ್ನಾಟಕ ಎಂದು ಹೇಳುವ ಯಡಿಯೂರಪ್ಪ, ಇಲ್ಲಿನ ತುಂಗಭದ್ರಾ ಬಗ್ಗೆ ಮಾತನಾಡುತ್ತಿಲ್ಲ. ಕಾವೇರಿ ನೀರಿಗಾಗಿ ಹೋರಾಟ ಮಾಡುವವರಿಗೆ ತುಂಗಭದ್ರಾ ನೀರಿನ ಸಮಸ್ಯೆ ಕಾಣಲಿಲ್ಲವೇ? ಎಂದರು.
ಎಲ್‌ಎಲ್‌ಸಿಗೆ ನೀರು ಸಮಸ್ಯೆ ಬಂದಾಗ ಕಾಣಿಸಿಕೊಂಡ ಅನಿಲ್‌ಲಾಡ್, ಕಳೆದ ವರ್ಷ ಇದೇ ರೀತಿ ನಗರದ ಜನತೆಗೆ ಕುಡಿಯುವ ನೀರಿನ ಸಮಸ್ಯೆ ಬಂದಾಗ ಒಮ್ಮೆಯೂ ಭೇಟಿ ನೀಡಿಲ್ಲ ಎಂದು ಆರೋಪಿಸಿದರು.  ಸತ್ಯಾಗ್ರಹದ ನೇತೃತ್ವ ವಹಿಸಿದ್ದ ಜೆಡಿಎಸ್ ರಾಜ್ಯ ಪರಿಷತ್ ಸದಸ್ಯ ಪಿ.ಎಸ್. ಸೋಮಲಿಂಗನಗೌಡ ಮಾತನಾಡಿ, ಶುಕ್ರವಾರ ಪ್ರಾರಂಭವಾದ ಸತ್ಯಾಗ್ರಹದಲ್ಲಿ ಕಂಪ್ಲಿ, ಕುರುಗೋಡು, ಸಿರುಗುಪ್ಪ, ಕುರುಗೋಡು, ಕೋಳುರು ಗ್ರಾಮಗಳ ಕಾರ್ಯಕರ್ತರು ಭಾಗವಹಿಸಿದ್ದರು.  ಜೆಡಿಎಸ್ ಪಕ್ಷ ಹೋರಾಟಕ್ಕಿಳಿದ ಅನಂತರ, ಶುಕ್ರವಾರ ಮಧ್ಯಾಹ್ನದ ಹೊತ್ತಿಗೆ ಕಾಲುವೆಗೆ ನೀರು ಬಿಡಲಾಗಿದೆ. ಇದನ್ನು ನಾರಾಯಣ ರೆಡ್ಡಿ ಅವರೇ ಖುದ್ದಾಗಿ ಕಾಲುವೆಗೆ ಭೇಟಿ ನೀಡಿ ಪರಿಶೀಲಿಸಿ, ಖಚಿತ ಪಡಿಸಿದ ಬಳಿಕ ನಿರಶನ ಅಂತ್ಯಗೊಳಿಸಲಾಗುತ್ತಿದೆ ಎಂದರು.
ಜೆಡಿಎಸ್ ಮುಖಂಡರಾದ ಮುಂಡ್ರಗಿ ನಾಗರಾಜ್, ಮೀನಳ್ಳಿ ತಾಯಣ್ಣ, ಕಿರಣ್, ನೆಕ್ಕಂಟಿ ಶ್ರೀನಿವಾಸ್, ಪಿ. ಭಾಸ್ಕರ್, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿಲಕ್ಷ್ಮೀ, ಗೌಸಿಯಾಬಿ, ಭಾಗ್ಯಲಕ್ಷ್ಮೀ, ಸಿದ್ದಗಂಗಮ್ಮ, ಯಶೋದಾ, ಆದಿಲಕ್ಷ್ಮೀ ಮತ್ತಿತರರು ಇದ್ದರು.
ಕಾಲುವೆಗೆ ನೀರು ಬಿಡುವಂತೆ ಬಿಎಸ್‌ಆರ್ ಪಕ್ಷದ ಶಾಸಕರು, ಸಂಸದರು ಟಿ.ಬಿ. ಬೋರ್ಡ್‌ನ ಮುಂದೆ ಧರಣಿ ಕುಳಿತಾಗ, ನೀರು ಬಿಟ್ಟಿದ್ದಾರೆ ಎಂದು ಸುಳ್ಳು ಹೇಳಿ, ಪ್ರತಿಭಟನೆಯಿಂದ ಹಿಂದಕ್ಕೆ ಸರಿದಿದ್ದಾರೆ. ನೀರು ಬಿಟ್ಟಿದ್ದಾರೋ ಇಲ್ಲವೋ ಎಂಬುದನ್ನು ಕಾಲುವೆಗೆ ಹೋಗಿ ಏಕೆ ಪರಿಶೀಲಿಸಲಿಲ್ಲ? ಬಳ್ಳಾರಿ ಜಿಲ್ಲಾಧಿಕಾರಿ ಮತ್ತು ಕೆಎಂಎಫ್ ಎಂಡಿ ಅವರನ್ನು ವರ್ಗಾವಣೆ ಮಾಡಬೇಕು ಎಂಬ ಷರತ್ತು ಹಾಕಿದ್ದಾರೆ. ಆದರೆ ನೀರು ಬಿಡುವ ಬಗ್ಗೆ ಷರತ್ತು ಏಕೆ ಹಾಕಲಿಲ್ಲ? ಬಿಜೆಪಿ ವಿಪ್ ಜಾರಿ ಮಾಡಿದಾಕ್ಷಣ ಶಾಸಕರು ಬೆಂಗಳೂರಿಗೆ ತೆರಳಿದ್ದಾರೆ.  ಅವರ ಧರಣಿ ರಾಜಕೀಯ ಪ್ರೇರಿತವಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments