ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ವಿವಿಧ ರಂಗಗಳ ಸಾಧಕರಿಗೆ ನಾಡೋಜ ಪದವಿ

Parashurama
Updated On : 15 Feb 2013, 12:06 pm

ಹೊಸಪೇಟೆ: ಫೆ. 18ರಂದು ನಡೆಯಲಿರುವ ಹಂಪಿ ಕನ್ನಡ ವಿಶ್ವವಿದ್ಯಾಲಯ ನುಡಿಹಬ್ಬದಲ್ಲಿ ಕನ್ನಡ ನಾಡು, ನುಡಿಗೆ ಅನುಪಮ ಕೊಡುಗೆ ನೀಡಿದ ಮತ್ತುವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 8 ಸಾಧಕರಿಗೆ ನಾಡೋಜ ಗೌರವ ಪದವಿಯನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಪ್ರದಾನ ಮಾಡಲಿದ್ದಾರೆ.
ಸಾಹಿತಿ ದೇವನೂರು ಮಹಾದೇವ, ನಿವೃತ್ತ ಕ್ರಿಕೆಟ್‌ಪಟು ಬ್ರಿಜೇಶ್ ಪಟೇಲ್ ಸೇರಿದಂತೆ ಒಟ್ಟು 8 ಸಾಧಕರಿಗೆ ಈ ಬಾರಿಯ ನಾಡೋಜ ಗೌರವ ಪದವಿ ದೊರೆತಿದೆ. ನವೋದಯ ಕನ್ನಡ ಸಾಹಿತ್ಯದ ಲೇಖಕರಲ್ಲಿ ದೇವನೂರು ಮಹಾದೇವ ಒಬ್ಬರು. ರಾಜ್ಯದಲ್ಲಿ ದಲಿತ ಸಂಘರ್ಷ ಸಮಿತಿ ಬೆಳವಣಿಗೆಗೆ ಕಾರಣರಾದವರಲ್ಲಿ ಇವರೂ ಒಬ್ಬರು. ಇವರ ಸಾಹಿತ್ಯಕ ಸಾಧನೆಗಳನ್ನು ಕನ್ನಡ ಸಾಂಸ್ಕೃತಿಕ ಲೋಕ ಮನಸಾರೆ ಒಪ್ಪಿ ಗೌರವಿಸಿದೆ. ಈಗ ಇವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ತನ್ನ 21ನೇ ನುಡಿಹಬ್ಬದಲ್ಲಿ ಪ್ರತಿಷ್ಠಿತ ನಾಡೋಜ ಗೌರವ ಪದವಿ ನೀಡಿ ಗೌರವಿಸುತ್ತಿದೆ.
ಕೆ.ಪಿ.ರಾವ್: ಕಿನ್ನಿಕಂಬಳ ಪದ್ಮನಾಭರಾವ್ (ಕೆ.ಪಿ.ರಾವ್) 1959ರಲ್ಲಿ ರಸಾಯನಶಾಸ್ತ್ರದಲ್ಲಿ ಬಿಎಸ್‌ಸಿ ಪದವಿ ಮತ್ತು 1963ರಲ್ಲಿ ಎಂಎಸ್ಸಿ ಪದವಿ ಪಡೆದರು. ಮುಂಬೈ ಐಐಟಿ, ಮಣಿಪಾಲ್ ಇನ್‌ಸ್ಟಿಟಿಟ್ಯೂಟ್ ಆಫ್ ಟೆಕ್ನಾಲಜಿಯ ಮುದ್ರಣ ಮತ್ತು ಸಂವಹನ ಎಂಜಿನಿಯರಿಂಗ್ ವಿಭಾಗ, ಗೌಹಾಟಿಯ ಐಐಟಿಯ ಡಿಸೈನ್ ವಿಭಾಗ, ಮಣಿಪಾಲ್ ಇನ್‌ಸ್ಟಿಟಿಟ್ಯೂಟ್ ಆಫ್ ಕಮ್ಯುನಿಕೇಷನ್‌ನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಗಣಕಯಂತ್ರಗಳಲ್ಲಿ ಭಾರತೀಯ ಭಾಷೆಗಳನ್ನು ಅವುಗಳ ಶಬ್ದಕ್ಕೆ ಅನುಗುಣವಾಗಿ ಬೆರಳಚ್ಚು ಮಾಡುವ ವಿಧಾನಗಳ ಆವಿಷ್ಕಾರ. ಸೇಡಿಯಾಪು ಸರಣಿಯನ್ನು ಭಾಷಾ ತಂತ್ರಾಂಶ ಸಂಸ್ಕರಣೆಗೆ ಒಳಪಡಿಸಿ ಎಂಬತ್ತರ ದಶಕದಲ್ಲಿಯೇ ಲೋಕಾರ್ಪಣೆ ಮಾಡಿದ್ದು ಇವರ ಹೆಗ್ಗಳಿಕೆ. ಗಣಕಯಂತ್ರಕ್ಕೆ ಸಂಬಂಧಿಸಿದಂತೆ ಲೇಸರ್ ಉತ್ಪಾದನೆ ಹಾಗೂ ಮುದ್ರಣ ತಂತ್ರಜ್ಞಾನದ ಶೋಧಗಳು ಇವರ ಪ್ರಮುಖ ಸಂಶೋಧನೆ, ಆವಿಷ್ಕಾರಗಳಾಗಿವೆ.
ಬೆಳಗಲ್ಲು ವೀರಣ್ಣ: ಬೆಳಗಲ್ಲು ವೀರಣ್ಣನವರದು ಕಲಾವಂತ ಕುಟುಂಬ. ಇವರ ತಂದೆ ದಿ. ಹನುಮಂತಪ್ಪ ಪ್ರಸಿದ್ಧ ಪಿಟೀಲು ವಾದಕ ಮತ್ತು ಬಯಲಾಟ ಕಲಾವಿದ. ವೀರಣ್ಣ ಯಾವುದೇ ಶಾಲೆಗೆ ಹೋಗಿ ವಿದ್ಯೆ ಕಲಿತವರಲ್ಲ. ವೀರಣ್ಣ ಅವರು ಪುರಾಣ ಸಾಹಿತ್ಯವಷ್ಟೇ ಅಲ್ಲ ಆಧುನಿಕ ಸಾಹಿತ್ಯವನ್ನೂ ಅರಿಯುವ ಶಕ್ತಿಯನ್ನು ಹೊಂದಿದ್ದಾರೆ. ತಮ್ಮ ಕುಲಕಸುಬಾದ ತೊಗಲುಗೊಂಬೆಯಾಟ ಆರಂಭಿಸಿದರು. ರಾಮಾಯಣದ ಪಂಚವಟಿ ಕಥಾ ಪ್ರಸಂಗದ ಮೂಲಕ ದಾಖಲೆ ನಿರ್ಮಿಸಿ ತೊಗಲುಗೊಂಬೆಯಾಟಕ್ಕೆ ಪುನರ್ಜನ್ಮ ನೀಡಿದರು. ಭಾರತ ಸ್ವಾತಂತ್ರ್ಯ ಸಂಗ್ರಾಮವನ್ನು ತೊಗಲುಗೊಂಬೆ ಕಲಾಪ್ರಕಾರದಲ್ಲಿ ಅಳವಡಿಸಿ ವಿನೂತನ ಪ್ರಯೋಗ ಮಾಡಿದರು. ತಮ್ಮ ಸ್ವಂತ ಕಲ್ಪನೆಯಿಂದ ನಿರ್ಮಿಸಿದ ಝಾನ್ಸಿರಾಣಿ ಲಕ್ಷ್ಮೀಬಾಯಿ, ಮಂಗಲಪಾಂಡೆ, ಗಾಂಧಿ, ಬಸವಣ್ಣ ಮುಂತಾದ ತೊಗಲುಗೊಂಬೆಗಳು ಅವರ ಕಲಾಪ್ರೌಢಿಮೆಗೂ, ಆಧುನಿಕ ಆಲೋಚನೆಗೂ ಸಾಕ್ಷಿಯಾಗಿವೆ.
ಅನ್ನದಾನೀಶ್ವರ ಶ್ರೀ: 1969ರಲ್ಲಿ ಗದಗ ಜಿಲ್ಲೆ ಮುಂಡರಗಿಯ ಅನ್ನದಾನೀಶ್ವರ ಸಂಸ್ಥಾನ ಮಠದ ಅಧಿಕಾರ ವಹಿಸಿಕೊಂಡು ಆ ಭಾಗದ ಶೈಕ್ಷಣಿಕ, ಸಾಮಾಜಿಕ, ಧಾರ್ಮಿಕ, ಸಾಹಿತ್ಯಕ ಹಾಗೂ ಕೃಷಿ ಕ್ಷೇತ್ರಗಳ ಸರ್ವತೋಮುಖ ಅಭಿವೃದ್ಧಿಗೆ ಅವಿಶ್ರಾಂತವಾಗಿ ದುಡಿಯುತ್ತಿರುವ ಕಾಯಕಯೋಗಿಗಳು. ಜ್ಞಾನ, ಅನ್ನ ದಾಸೋಹ ಶ್ರೀಗಳ ಬದುಕಿನ ಬಹುದೊಡ್ಡ ಎರಡು ಸಿದ್ಧಾಂತಗಳು. ಶೈಕ್ಷಣಿಕವಾಗಿ ಹಿಂದುಳಿದ ಪ್ರದೇಶ ಮುಂಡರಗಿ ಹಾಗೂ ಉತ್ತರ ಕರ್ನಾಟಕದ ಇತರ ಭಾಗಗಳಲ್ಲಿ ಪ್ರಾಥಮಿಕದಿಂದ ಹಿಡಿದು ಪದವಿವರೆಗೆ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ದೀನ, ದಲಿತ, ಅನಾಥ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿದ್ದಾರೆ. ಇದುವರೆಗೆ 85ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಶ್ರೀಗಳ ಸಾಹಿತ್ಯ ಸಾಧನೆ ಅನುಪಮವಾದದ್ದು.
ಗೋನಾಳ ಭೀಮಪ್ಪ: ಇವರು ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಸಹಾಯಕ ಆಯುಕ್ತರಾಗಿ 1980ರಲ್ಲಿ ನೇಮಕಗೊಂಡರು. ಕರ್ನಾಟಕ ಸರ್ಕಾರದ ವಿವಿಧ ಇಲಾಖೆಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿ ಪ್ರಾಮಾಣಿಕ ಸೇವೆ ಸಲ್ಲಿಸಿದರು. ಉತ್ತಮ ಆಡಳಿತಗಾರರಾಗಿದ್ದ ಭೀಮಪ್ಪ, ತಮ್ಮ ಸ್ವಗ್ರಾಮದಲ್ಲಿ ಗ್ರಂಥಾಲಯ ಸ್ಥಾಪಿಸಿ ಬಡ ವಿರ್ದ್ಯ್ಙಾಗಳ ಸ್ಪರ್ಧಾ ಪರೀಕ್ಷೆಗೆ ಪ್ರೋತ್ಸಾಹ ನೀಡಿದ್ದಾರೆ. ಸಿಇಓ, ಡಿಸಿ, ಯುವಜನ ಸೇವಾ ಇಲಾಖೆ ಕಾರ್ಯದರ್ಶಿ, ಬೆಸ್ಕಾಂ ಎಂಡಿ ಆಗಿ ದಕ್ಷ ಆಡಳಿತಗಾರರಾಗಿ ಸೇವೆಗೈದಿದ್ದಾರೆ.
ಬಿ.ಕೆ. ಸುಮಿತ್ರಾ: ಸುಮಿತ್ರಾ ಚಲನಚಿತ್ರ ರಂಗದ ಹಿನ್ನೆಲೆ ಗಾಯಕಿಯಾಗಿ ಪ್ರಸಿದ್ಧರಾದವರು. ಜಿ.ಕೆ. ವೆಂಕಟೇಶ್ ಸಂಗೀತ ನಿರ್ದೇಶನದಲ್ಲಿ 'ಕವಲೆರಡು ಕುಲ ಒಂದು' ಚಿತ್ರದ ಮೂಲಕ ಹಿನ್ನೆಲೆಗಾಯಕಿಯಾಗಿ ಪ್ರವೇಶಿಸಿದರು. ನಂತರ ಪ್ರಸಿದ್ಧ ಸಂಗೀತ ನಿರ್ದೇಶಕ ವಿಜಯಭಾಸ್ಕರ್, ಎಂ. ರಂಗರಾವ್, ರಾಜನ್-ನಾಗೇಂದ್ರ, ಸತ್ಯಂ, ಉಪೇಂದ್ರಕುಮಾರ್ ಮುಂತಾದವರ ನಿರ್ದೇಶನದಲ್ಲಿ ಹಾಡಿದರು. ಉಪಾಸನೆ, ಬೃಂದಾವನ, ಸತಿಸುಕನ್ಯಾ, ಗೆಜ್ಜೆಪೂಜೆ ಮುಂತಾದ ಚಿತ್ರಗಳ ಇವರು ಹಾಡಿದ ಗೀತೆಗಳು ಇಂದಿಗೂ ಜನಪ್ರಿಯವಾಗಿವೆ.
ಬ್ರಿಜೇಶ್ ಪಟೇಲ್: ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿರುವ ಕ್ರಿಕೆಟ್‌ಪಟು ಬ್ರಿಜೇಶ್ ಪಟೇಲ್, ಕ್ರಿಕೆಟ್ ಆಟದೊಂದಿಗೆ ಕ್ರಿಕೆಟ್ ಆಡಳಿತವನ್ನೂ ಬಲ್ಲವರಾಗಿದ್ದಾರೆ. ಪಟೇಲರು ಕ್ರೀಡಾಪ್ರೇಮಿಗಳ ಮನೆತನದಲ್ಲಿ ಜನಿಸಿದವರು. ಅವರ ತಂದೆ ಪರಶುರಾಮ ಪಟೇಲರು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬ್ರಿಜೇಶ್ ಪಟೇಲರು 20 ಟೆಸ್ಟ್, 10 ಏಕದಿನದ ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ. 213 ರಣಜಿ ಪಂದ್ಯಗಳ ಮೂಲಕ 11,911 ರನ್‌ಗಳನ್ನು ಗಳಿಸಿ, ಬರೋಡ ವಿರುದ್ಧ 214 ರನ್ ಬಾರಿಸಿ ಹೊಸ ದಾಖಲೆ ಸೃಷ್ಟಿಸಿದ್ದರು.
ಮಹೇಶ ಜೋಶಿ: ಮಹೇಶ ಜೋಶಿ ಭಾರತೀಯ ಪ್ರಸಾರ ಸೇವೆಯ ಹಿರಿಯ ಅಧಿಕಾರಿಯಾಗಿದ್ದು, ಕಳೆದ 23 ವರ್ಷಗಳಿಂದ ಸಾರ್ವಜನಿಕ ಮಾಧ್ಯಮ, ದೂರದರ್ಶನದಲ್ಲಿ ಅಪಾರ ಅನುಭವ ಹೊಂದಿದ್ದಾರೆ. ಡಾ. ಮಹೇಶ ಜೋಶಿ ಬೆಂಗಳೂರು ದೂರದರ್ಶನ ಕೇಂದ್ರದ ನಿರ್ದೇಶಕರಾಗಿ 2005ರಲ್ಲಿ ಅಧಿಕಾರ ವಹಿಸಿಕೊಂಡ ಮೇಲೆ, ದೂರದರ್ಶನವನ್ನು ಸಮೀಪ ದರ್ಶನವನ್ನಾಗಿ ಮಾರ್ಪಡಿಸಿ, ಚಂದನ ವಾಹಿನಿಯನ್ನು ರಾಜ್ಯದೆಲ್ಲೆಡೆ ತಲುಪಿಸಿದ್ದಾರೆ.
ಈ 8 ಜನ ಸಾಧಕರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ 21ನೇ ನುಡಿಹಬ್ಬದ ಘಟಿಕೋತ್ಸವ ಸಮಾರಂಭದಲ್ಲಿ ಪ್ರತಿಷ್ಠಿತ ನಾಡೋಜ ಗೌರವ ಪದವಿಯನ್ನು ನೀಡಿ ಗೌರವಿಸುತ್ತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement