ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ವೇತನ ತಾರತಮ್ಯ: ಶಿಕ್ಷಕ, ಉಪನ್ಯಾಸಕರ ಧರಣಿ

Parashurama
Updated On : 15 Feb 2013, 12:05 pm

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಫೆ. 14
ಮನೆ ಬಾಡಿಗೆ ಭತ್ಯೆ ಮತ್ತು ವೇತನ ತಾರತಮ್ಯ ನಿವಾರಿಸುವಂತೆ ಒತ್ತಾಯಿಸಿ ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಕರು ಮತ್ತು ಪಿಯು ಉಪನ್ಯಾಸಕರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಒಂದು ದಿನದ ಸಾಂಕೇತಿಕ ಪ್ರತಿಭಟನಾ ಧರಣಿ ನಡೆಸಿದರು.
ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಮತ್ತು ಪಿಯು ಕಾಲೇಜು ಉಪನ್ಯಾಸಕರ ಸಂಘ ಜಿಲ್ಲಾ ಘಟಕಗಳ ನೇತೃತ್ವದಲ್ಲಿ ನಡೆದ ಧರಣಿಯಲ್ಲಿ ಜಿಲ್ಲೆಯ ನೂರಾರು ಶಿಕ್ಷಕ, ಉಪನ್ಯಾಸಕರು ಹಲವು ದಿನಗಳಿಂದ ನೆನೆಗುದಿಗೆ ಬಿದ್ದಿದ್ದ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಕೇಂದ್ರ, ನೆರೆ ರಾಜ್ಯ ಹಾಗೂ ಇತರೆ ಇಲಾಖೆ ನೌಕರರಿಗೆ ಹೋಲಿಸಿದರೆ ರಾಜ್ಯ ಶಿಕ್ಷಕ, ಉಪನ್ಯಾಸಕರ ವೇತನ ತುಂಬ ಕಡಿಮೆ ಇದೆ. ವೇತನ ತಾರತಮ್ಯವನ್ನು ನಿವಾರಿಸುವಂತೆ ಈ ಮೊದಲೇ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಸ್ಪಂದಿಸದ ಸರ್ಕಾರ, ಬಜೆಟ್ ಮಂಡಿಸುವಲ್ಲಿಯೂ ಶಿಕ್ಷಕ, ಉಪನ್ಯಾಸಕರ ವೇತನವನ್ನು ಮೂಲ ವೇತನದೊಂದಿಗೆ ವಿಲೀನಗೊಳಿಸುವ ಬಗ್ಗೆ ಪ್ರಸ್ತಾಪಿಸಿಲ್ಲ ಎಂದು ಪ್ರತಿಭಟನಾನಿರತರು ದೂರಿದರು.
ಕೇಂದ್ರ ಸರ್ಕಾರದ ಮಾದರಿಯಲ್ಲೇ ಮನೆ ಬಾಡಿಗೆ ಭತ್ಯೆ, ನಗರ ಭತ್ಯೆ ಹೆಚ್ಚಿಸುವಂತೆ ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ಮನವಿ ಪ್ರಕಾರ 6ನೇ ವೇತನ ಸಮಿತಿಯ ಶಿಫಾರಸುಗಳನ್ನು 2001ರ ಜನಗಣತಿ ಆಧಾರದ ಮೇಲೆ ಪುನರ್ ವರ್ಗೀಕರಿಸಿ 2012 ಏಪ್ರಿಲ್ 1ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾಗಿತ್ತು. ಆದರೆ, ಪ್ರಸಕ್ತ ಮುಂಗಡ ಪತ್ರದಲ್ಲಿ ಕೇವಲ ಬೆಂಗಳೂರಿನಲ್ಲಿ ಸೇವೆ ಸಲ್ಲಿಸುವ ಶಿಕ್ಷಕರಿಗೆ ಶೇ. 25ರಿಂದ 30ರಷ್ಟು ಹೆಚ್ಚಿಸಲಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುವ ಶಿಕ್ಷಕರನ್ನು ಕಡೆಗಣಿಸಿ ತಾರತಮ್ಯವೆಸಗಿದೆ ಎಂದು ಆರೋಪಿಸಿದರು.
ನಗರ ಮತ್ತು ಗ್ರಾಮೀಣ ಪ್ರದೇಶದ ಶಿಕ್ಷಕ, ಉಪನ್ಯಾಸಕರಿಗೆ ಶೇ. 20, ಶೇ. 10ರಷ್ಟು ಬಾಡಿಗೆ ಭತ್ಯೆ ನೀಡಬೇಕು. ಈಗ ನೀಡುತ್ತಿರುವ ವಿಶೇಷ ವೇತನವನ್ನು ಮೂಲ ವೇತನದಲ್ಲಿ ವಿಲೀನಗೊಳಿಸಬೇಕು ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅರುಣ್ ಪ್ರತಾಪರೆಡ್ಡಿ, ಪ್ರೌಢಶಾಲಾ ಸಂಘದ ಆನಂದ ನಾಯ್ಕ್, ನರಸಿಂಹ ಮೂರ್ತಿ, ಉಪನ್ಯಾಸಕರ ಸಂಘದ ಮೋಹನರೆಡ್ಡಿ, ರಾಜಣ್ಣ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಧರಣಿಯಲ್ಲಿ ನೂರಾರು ಶಿಕ್ಷಕ, ಉಪನ್ಯಾಸಕರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement